ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಳೆವ ಪೈರು ಮೊಳಕೆಯಲ್ಲಿ ನೋಡು ಎಂಬ ನಾಣ್ಣುಡಿ ಸ್ಮೃತಿ ಎಂಬ ಬಾಲಕಿಗೆ ಅರ್ಥ ಪೂರ್ಣವಾಗಿ ಅನ್ವಯ ಆಗಲಿದೆ.
ಸ್ಮೃತಿ ತನ್ನ ಕಿರಿಯ ವಯಸ್ಸಿಗೆ ತನ್ನ ಕ್ರಿಯಾ ಶೀಲ ಚಟುವಟಿಕೆ ಗಳಿಂದಾಗಿ ಹಲವು ಸಾಧನೆಗಳಲ್ಲಿ ತನ್ನ ಚಾಪು ಮೂಡಿಸಿ ಭರವಸೆ ಮೂಡಿಸಿದ್ದಾಳೆಂದರೆ ತಪ್ಪಾಗಲಾರದು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹಾಗೂ ನೆಲಮಂಗಲದ ತಾಲೂಕು ಪಂಚಾಯ್ತಿಯಲ್ಲಿ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದ ಮುನಿಯಪ್ಪ ಹಾಗೂ ಮಂಜುಳಾ ದಂಪತಿಗಳ ಪುತ್ರಿ ಯಲಹಂಕ ಸಿ.ಆರ್.ಪಿ.ಎಫ್ ನ ಪಿ.ಎಂ ಶ್ರೀ ಕೇಂದ್ರೀಯ ವಿದ್ಯಾಲಯ ದಲ್ಲಿ ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸ್ಮೃತಿ.
ಸದಾ ಕ್ರಿಯಾಶೀಲವಾಗಿರುವ ಈ ಪುಟ್ಟ ಬಾಲಕಿ ಸ್ಮೃತಿ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ಹಲವು ರಂಗಗಳಲ್ಲಿ ಎಲ್ಲರ ಗಮನ ಸೆಳೆದಿದ್ದಾಳೆ. ಈಗಾಗಲೇ ಭರತನಾಟ್ಯ, ಟೈಕೊಂಡೋ, ಚಿತ್ರಕಲೆ, ನಿರೂಪಣೆ ಮುಂತಾದುವುಗಳ ವಿಷಯಗಳಲ್ಲಿ ತರಬೇತಿಯಲ್ಲಿ ತೊಡಗಿಕೊಂಡಿದ್ದಾಳೆ.
ಸ್ಮೃತಿ ಈಗಾಗಲೇ ಟೈಕೊಂಡೋದಲ್ಲಿ ವಿಶ್ವ ದಾಖಲೆ ಮಾಡಿ ಅಮೋಘ ಸಾದಕಿ ಎನಿಸಿಕೊಂಡಿದ್ದಾಳೆ. ಕೇವಲ ಒಂದು ನಿಮಿಷದಲ್ಲಿ 90 ಸೈಡ್ ಸಿಟಪ್ಸ್ ಮಾಡಿ ಕ್ರೀಡಾನ್ಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರು ನೋಂದಾಯಿಸಿದ ಕೀರ್ತಿ ಸ್ಮೃತಿಯದು.
ಡಾ. ಕೃಷ್ಣ ಚೈತನ್ಯ ರವರ ಮಾರ್ಗದರ್ಶನದಲ್ಲಿ ಅದ್ಬುತ ಸಾಧನೆ ಮಾಡುತ್ತಿರುವ ಸ್ಮೃತಿಗೆ ತಾಯಿ ಮಂಜುಳಾ ಹಾಗೂ ತಂದೆ ಸಿದ್ದ ಮುನಿಯಪ್ಪ ಮತ್ತು ತಾನು ಶಿಕ್ಷಣ ಪಡೆಯುತ್ತಿರುವ ಯಲಹಂಕ ಸಿ. ಆರ್. ಪ್.ಎಫ್ ನ ಪ್. ಎಂ. ಶ್ರೀ ಕೇಂದ್ರೀಯ ವಿದ್ಯಾಲಯದ ಬೋಧಕ ಸಿಬ್ಬಂದಿ ಸ್ಮೃತಿ ಸಾಧನೆಗೆ ಬೆಂಬಲವಾಗಿ ನಿಂತಿದ್ದಾರೆ. ಈಗಾಗಲೇ ಹಲವು ಸಮ್ಮಾನಗಳಿಗೆ ಪಾತ್ರವಾಗಿರುವ ಸ್ಮೃತಿ ಮತ್ತಷ್ಟು ಸಾಧಿಸಿ ಕರ್ನಾಟಕದ ಕೀರ್ತಿ ಪತಾಕೆಯನ್ನು ದೇಶಾದ್ಯಂತ ಹಾರಿಸಲಿ ಎಂಬುದು ಹಲವರ ಹಾರೈಕೆ.