ಎಂ.ಎಲ್ ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಗೊಲ್ಲಾಳಮ್ಮನ ಉತ್ಸವದಲ್ಲಿ ಸೊಸೆಯಂದಿರ ಸಾಮೂಹಿಕ ಕುಣಿತ ಗಮನ ಸೆಳೆಯುತ್ತದೆ. ಹಿರಿಯೂರು ತಾಲ್ಲೂಕಿನ ಬಾಲೇನಹಳ್ಳಿಯಲ್ಲಿ ಸೋಮವಾರ ನಡೆದ ಗೊಲ್ಲಾಳಮ್ಮ ದೇವಿಯ ಭಂಡಾರ ಉತ್ಸವದಲ್ಲಿ ಗ್ರಾಮದ ಸೊಸೆಯಂದಿರು ಉರುಮೆ ಹಾಗೂ ತಮಟೆ ವಾದ್ಯಕ್ಕೆ ಹೆಜ್ಜೆ ಹಾಕಿ ಕುಣಿದು ದೇವಿಯ ಮನಸ್ಸು ಸಂತೋಷ ಪಡಿಸಿದರು.
ಗ್ರಾಮದ ಹನುಮಂತರಾಯ ದೇವಸ್ಥಾನದಿಂದ ಊರಿನ ಕಾಡುಗೊಲ್ಲ ಸಮುದಾಯದ ಸೊಸೆಯಂದಿರು ಕುಣಿತ ಆರಂಭಿಸುತ್ತಾರೆ. ಈ ಉತ್ಸವದಲ್ಲಿ ಸೋಮನು ಸಹ ಸೊಸೆಯಂದಿರ ಜೊತೆಗೆ ಹೆಜ್ಜೆ ಹಾಕುವುದು ಮತ್ತೊಂದು ವಿಶೇಷ. ಇದಾದ ಬಳಿಕ ಮಣೇವು ಕಾರ್ಯಕ್ರಮದೊಂದಿಗೆ ದಸರಾ ಹಬ್ಬ ಕೊನೆಗೊಳ್ಳುತ್ತದೆ.
ಹಿರಿಯೂರು ತಾಲೂಕಿನ ಬಾಲೇನಹಳ್ಳಿ ಗ್ರಾಮದಲ್ಲಿ ಸೋಮವಾರ ಶ್ರೀ ಗೊಲ್ಲಾಳಮ್ಮನ ಭಂಡಾರೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು.
ಈ ಉತ್ಸವದಲ್ಲಿ ಗ್ರಾಮದ ಸೊಸೆಯಂದಿರು ಪಾಲ್ಗೊಂಡು ಕುಣಿಯುವುದು ಪ್ರತಿ ವರ್ಷದ ವಾಡಿಕೆ.
ದಸರಾ ಹಬ್ಬದ ವಿಜಯದಶಮಿ ಅಂಬಿನೋತ್ಸವದೊಂದಿಗೆ ಆರಂಭವಾಗುವ ಈ ಜಾತ್ರೆ ಏಕಾದಶಿ ವಿಶೇಷ ಪೂಜೆ, ದ್ವಾದಶಿ, ಹರಿಸೇವೆ, ಕುರಿ ಕರೆಯುವ ಉತ್ಸವ, ಪಲ್ಲಕ್ಕಿ ಉತ್ಸವ, ಆರತಿ, ಮಂಡಕ್ಕಿ ಸೇವೆ, ಸಿಡಿ ಮದ್ದಿನ ಉತ್ಸವ, ಮರುದಿನ ಭoಡಾರೋತ್ಸವ ನಡೆಯುತ್ತದೆ.
ಜಾತ್ರೆಯ ಅಂತಿಮ ದಿನದಂದು ಸೊಸೆಯಂದಿರು ಸೀರೆಯುಟ್ಟು, ಕೈಯಲ್ಲಿ ಬೇವಿನ ಸೊಪ್ಪು ಹಿಡಿದು, ದೇವಿಯ ಭoಡಾರವನ್ನ ಹಣೆಗೆ ಇಟ್ಟುಕೊಂಡು ಸ್ವಯಂ ಪ್ರೇರಿತರಾಗಿ ಉರುವೆ ಹಾಗೂ ತಮಟೆಯ ಸದ್ದಿಗೆ ಹೆಜ್ಜೆ ಹಾಕಿ ಕುಣಿಯುವ ಮೂಲಕ ಹರಕೆ ತೀರಿಸುತ್ತಾರೆ.
ಚಿತ್ತಮುತ್ತಿ ಕುಲದ ಕರಡಿ ಬುಳ್ಳಪ್ಪ ವಂಶಸ್ಥರಾದ ಕರಡಿಗೊಲ್ಲರು ಶ್ರೀದೇವಿ ಗೊಲ್ಲಳ್ಳಮ್ಮ, ಶ್ರೀ ಚಿತ್ರಲಿಂಗೇಶ್ವರ ಸ್ವಾಮಿ ಹಾಗೂ ಶ್ರೀ ತಿಮ್ಮಪ್ಪ ಸ್ವಾಮಿಯನ್ನು ಆರಾಧಿಸುತ್ತಾರೆ. ಒಂದು ವಾರದವರೆಗೂ ದಸರಾ ಹಬ್ಬವನ್ನು ವಿಶೇಷವಾಗಿ ವೈಭವದಿಂದ ಆಚರಿಸಿಕೊಂಡು ಬರಲಾಗುತ್ತದೆ. ಗ್ರಾಮದಲ್ಲಿ ಬಹುತೇಕ ಕರಡಿಗೊಲ್ಲರ ಕುಲ ಬೆಡಗಿನ ಮನೆಗಳಿವೆ.

ಕಾಡುಗೊಲ್ಲರ ಕುಟುಂಬಗಳಿಗೆ ಸೊಸೆಯಾಗಿ ಬಂದ ಪ್ರತಿಯೊಬ್ಬರು ಭoಡಾರ ಉತ್ಸವದಲ್ಲಿ ಭಾಗಿಯಾಗಿ ಕುಣಿಯುವ ಮೂಲಕ ಈ ಸಂಪ್ರದಾಯ ಆಚರಣೆ ಮಾಡಿಕೊಂಡು ಬರುತ್ತಿರುವುದು ವಿಶಿಷ್ಟ ಆಚರಣೆಯಾಗಿದೆ.
ಗ್ರಾಮಕ್ಕೆ ಮದುವೆಯಾಗಿ ಬಂದ ಸೊಸೆಯಂದಿರು ಕುಣಿಯದಿದ್ದರೆ ಗ್ರಾಮದೇವತೆ ಗೊಲ್ಲಾಳಮ್ಮ ಕುಣಿಯುತ್ತಾಳೆ. ಹೀಗಾಗಿ ಅಮ್ಮನ ಅಪ್ಪಣೆಯಂತೆ ಅನಾದಿಕಾಲದಿಂದಲೂ ಸೊಸೆಯಂದಿರು ಈ ಉತ್ಸವದಲ್ಲಿ ಕುಣಿಯುವುದು ವಾಡಿಕೆಯಾಗಿ ಮುಂದುವರೆದುಕೊಂಡು ಬರಲಾಗಿದೆ.
ಹಬ್ಬದ ಕೊನೆಯ ಭಂಡಾರೋತ್ಸವದ ದಿನದಂದು ಗ್ರಾಮದಲ್ಲಿ ಶಾಂತಿ, ಸಮೃದ್ಧಿಗಾಗಿ ದೇವರು ಮನೆ ಮನೆಗೆ ಭೇಟಿ ನೀಡುತ್ತದೆ.
ರಾಜ್ಯದ ನಾನಾ ಭಾಗಗಳಿಂದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆಯುತ್ತಾರೆ. ನಮ್ಮೂರಿನ ದೇವಿಗೆ ಕುಣಿಯುವುದು ಎಂದರೆ ಅದು ಭಕ್ತಿಯ ಸಂಕೇತವಾಗಿದೆ. ಹಾಗಾಗಿ ನಾವು ದೇವಿಯನ್ನು ಸಂತೃಪ್ತಿಗೊಳಿಸಲು ಕುಣಿಯುತ್ತೇವೆ.
ಮಕ್ಕಳ ಜೊತೆ ಕುಣಿಸಿಕೊಳ್ಳುವುದು ದೇವಿಗೆ ಇಷ್ಟವಿಲ್ಲ. ಹಾಗಾಗಿ ವಿಶೇಷವಾಗಿ ಸೊಸೆಯಂದಿರು ಕುಣಿದಾಗ ದೇವಿ ಸಂತೃಪ್ತಿಯಾಗುತ್ತಾಳೆ. ಗ್ರಾಮದಲ್ಲಿ ಉತ್ತಮ ಮಳೆಯಾಗಲಿ, ಯಾವುದೇ ರೋಗ ರುಜಿನಗಳು ಬಾರದಿರಲಿ, ಊರು ಅಭಿವೃದ್ಧಿಯಾಗಲಿ, ಶಾಂತಿ ನೆಮ್ಮದಿ ದೊರಕಲಿ ಎಂಬುದು ಕುಣಿತದ ಸಂಕೇತವಾಗಿದೆ ಎನ್ನುತ್ತಾರೆ ಗ್ರಾಮದ ಸೊಸೆಯಂದಿರು.
ಕುರಿ ಕರೆಯುವ ಉತ್ಸವ :
ಭಂಡಾರೋತ್ಸವ ಹಿಂದಿನ ದಿನ ಸಂಜೆ ಶ್ರೀ ದೇವಿ ಗೊಲ್ಲಾಳಮ್ಮ ದೇವಿಯನ್ನು ಅಲಂಕರಿಸಿ ಪಲ್ಲಕ್ಕಿಯಲ್ಲಿ ಕೂರಿಸಿ ವಿವಿಧ ವಾಕ್ಯಗಳೊಂದಿಗೆ ಊರಿನ ಹೊರವಲಯದ ದಿನ್ನೆಗೆ ಕೊಂಡೊಯ್ದು ಸುಮಾರು ಎರಡ್ಮೂರು ಗಂಟೆಗಳ ಕಾಲ ದೇವರ ಸುತ್ತ ತಂಡ ತಂಡವಾಗಿ ಸಾವಿರಾರು ಕುರಿಗಳಿಂದ ಪ್ರದಕ್ಷಿಣೆ ಹಾಕಿಸಲಾಗುತ್ತದೆ.
ಕಾಡುಗೊಲ್ಲರಲ್ಲಿ ಕುರಿ ಸಾಕಾಣಿಕೆ ಹೆಚ್ಚಾಗಿದ್ದು, ದೇವರ ಪ್ರದಕ್ಷಿಣೆ ಹಾಕಿಸುವುದರಿಂದ ಕುರಿಗಳಿಗೆ ಕಾಲುರೋಗ, ಜ್ವರ, ದೊಮ್ಮೆಕಾಯಿಲೆ ಸೇರಿದಂತೆ ಯಾವುದೇ ರೋಗ ರುಜಿನೆಗಳು ಬರಬಾರದೆಂದು ಕುರಿಗಾಹಿಗಳ ನಂಬಿಕೆಯಾಗಿದೆ. ಈ ಆಚರಣೆಯು ಹಿಂದಿನಿಂದಲೂ ರೂಢಿಯಲ್ಲಿದೆ.
ನಾವು ತಲಾಂತರದಿಂದ ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಬುಡಕಟ್ಟು ಕಾಡುಗೊಲ್ಲರಾದ ನಾವು ನಮ್ಮದೇ ಆದ ಶೈಲಿಯಲ್ಲಿ ಪ್ರತಿವರ್ಷ ಈ ಉತ್ಸವ ನಡೆಯುತ್ತದೆ. ಗ್ರಾಮದಲ್ಲಿ ಸುಖ, ಶಾಂತಿ, ನೆಮ್ಮದಿ, ಉತ್ತಮ ಮಳೆ, ಬೆಳೆಯಾಗಿ ಸಮೃದ್ಧಿ ಸೃಷ್ಟಿಸುತ್ತಾಳೆಂಬ ನಂಬಿಕೆಯಿದೆ. ನಮ್ಮೂರಿನ ಸೊಸೆಯಂದಿರು ದೇವಿಗೆ ಕುಣಿಯುವುದರ ಮೂಲಕ ಗೊಲ್ಲಳ್ಳೇಶ್ವರಿ ದೇವಿಯನ್ನು ಸಂತೃಪ್ತಿಗೊಳಿಸುತ್ತಾರೆ ಎನ್ನುತ್ತಾರೆ ಗ್ರಾಮದ ಹಿರಿಯರು.

