ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ರಾಜ್ಯ ಸರ್ಕಾರ ಎಸಗಿರುವ ವಿವಿಧ ಹಗರಣಗಳಿಗೆ ಸಂಬಂಧಿಸಿದ ದಾಖಲೆಗಳು ಟನ್ ಗಟ್ಟಲೆ ನನ್ನ ಬಳಿ ಇವೆ. ಈ ಕಾರಣಕ್ಕಾಗಿ ಕೆಲವರು ನನ್ನನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ನನ್ನ ಧ್ವನಿ ಅಡಗಿಸುವ ಕೆಲಸ ಯಾರಿಂದಲೂ ಸಾಧ್ಯವಿಲ್ಲ. ಹೆದರುವ ವ್ಯಕ್ತಿಯೂ ನಾನಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಸಚಿವ ಹೆಚ್. ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ಗುಡುಗಿದರು.
ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಏಪ್ರಿಲ್-12 ರಂದು ಶನಿವಾರ ಜೆಡಿಎಸ್ ಪಕ್ಷದಿಂದ ಆಯೋಜಿಸಿದ್ದ ‘ಸಾಕಪ್ಪಾ ಸಾಕು ಕಾಂಗ್ರೆಸ್ ಸರ್ಕಾರ‘ ಬೃಹತ್ ಪ್ರತಿಭಟನೆ ಮತ್ತು ವಿಧಾನಸೌಧ ಚಲೋ ಚಳವಳಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಪುಡಾರಿಗಳು ನನ್ನನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಗೊತ್ತಿರಲಿ, ನಾನು ಹೆದರುವ ವ್ಯಕ್ತಿ ಅಲ್ಲ. ನನ್ನ ವಿರುದ್ಧ ಪ್ರತಿಭಟನೆ ಮಾಡಿ ಲಾರಿಯಲ್ಲಿ ದಾಖಲೆಗಳನ್ನು ತಂದು ಕೊಡುತ್ತಾರಂತೆ. ತಂದು ಕೊಡಲಿ, ನಾನೂ ನೋಡುತ್ತೇನೆ. ಯಾವ ಮಟ್ಟದಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಕಾಂಗ್ರೆಸ್ ಪುಡಾರಿಗಳು ಎನ್ನುವುದು ನನಗೆ ಗೊತ್ತಿದೆ. ನನ್ನಲ್ಲಿರುವ ದಾಖಲೆಗಳನ್ನು ಬಿಚ್ಚಿಟ್ಟರೆ ಜನರೇ ಇವರನ್ನು ಓಡಿಸುತ್ತಾರೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಟನ್ ಗಟ್ಟಲೆ ದಾಖಲೆ ಇದೆ ಅಂತ ಹೇಳಿದ್ದೆ, ಅದೇನು ಸುಳ್ಳಲ್ಲ. ಅಕ್ಷರಶಃ ಸತ್ಯ. ಹಿಂದೆ ಅಧಿಕಾರದಲ್ಲಿದ್ದಾಗ ನನ್ನ ಧ್ವನಿ ಅಡಗಿಸೋ ಕೆಲಸ ಮಾಡಿದ್ದರು. ನನ್ನ ತೊಡವಿಕೊಂಡರೆ ಅವರಿಗೆ ಕಷ್ಟ. ನಾನು ಯಾವುದೇ ಕಾನೂನು ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿಲ್ಲ. ನ್ಯಾಯಕ್ಕೆ ಕೋರ್ಟ್ ಇದೆ, ಅಲ್ಲಿ ಹೋರಾಟ ಮಾಡುತ್ತಿದ್ದೇನೆ. ನನ್ನಲ್ಲಿ ಅಧಿಕಾರ ಇದ್ದಾಗಲೂ ನಾನು ನನ್ನ ಕೆಲಸ ಮಾಡಿಕೊಳ್ಳಲಿಲ್ಲ. ಈಗ ಕೇಂದ್ರ ಸಚಿವನಾಗಿದ್ದಾಗಲೂ ಕಾಂಗ್ರೆಸ್ನವರು ನನಗೆ ಕಿರುಕುಳ ನೀಡುತ್ತಿದ್ದಾರೆ. ಅದಕ್ಕೆ ಹೆದರಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮೇಲೆ ಗಣಿ ಗುತ್ತಿಗೆ ಆರೋಪ ಮಾಡಿದ್ದಾರೆ. ಈಗ 500 ಕೋಟಿ ಕಿಕ್ ಬ್ಯಾಕ್ ಕುರಿತು ತಮ್ಮ ಸುತ್ತ ಸುತ್ತಿಕೊಂಡಿರುವ ಗಣಿ ಅಕ್ರಮದ ಬಗ್ಗೆ ಅವರು ಮಾತನಾಡಲಿ. ತಮ್ಮ ವಿರುದ್ಧ ಬಂದಿರುವ ಆರೋಪಕ್ಕೆ ಅವರು ಏನು ಹೇಳುತ್ತಾರೆ? ರಾಮಮೂರ್ತಿ ಗೌಡ ಎನ್ನುವವರು ಸಿದ್ದರಾಮಯ್ಯ ವಿರುದ್ಧ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆಗೆ ಪ್ರಾಸಿಕ್ಯೂಷನ್ ಕೊಡಿ ಅಂತ ರಾಜ್ಯಪಾಲರನ್ನ ಕೇಳಿದ್ದಾರೆ.
ಸಿದ್ದರಾಮಯ್ಯ ಅವರು ಮೊದಲ ಅವಧಿಗೆ ಸಿಎಂ ಆಗಿದ್ದ ಸಂದರ್ಭದಲ್ಲಿ ಗಣಿ ಗುತ್ತಿಗೆ ನವೀಕರಣಕ್ಕೆ 500 ಕೋಟಿ ಕಿಕ್ ಬ್ಯಾಕ್‌ಪಡೆದಿರುವ ಆರೋಪ ಮಾಡಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ಗಣಿ ಗುತ್ತಿಗೆ ನವೀಕರಣದಿಂದ ಸರ್ಕಾರದ ಬೊಕ್ಕಸಕ್ಕೆ 5,000 ಕೋಟಿ ನಷ್ಟ ಉಂಟು ಮಾಡಿರುವ ಗಂಭೀರ ಆಪಾದನೆಯನ್ನು ಸಿದ್ದರಾಮಯ್ಯ ಎದುರಿಸುತ್ತಿದ್ದಾರೆ.
ವಿಚಾರಣೆಗೆ ಅನುಮತಿ ನೀಡುವಂತೆ ಅವರು ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆನಪ್ಪ ಉತ್ತರ ಕೊಡುತ್ತೀರಿ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು ಭಾಷಣ ಮಾಡುತ್ತಿದ್ದ ವೇಳೆ ನಿಖಿಲ್‌ಅವರ ಹೆಸರನ್ನು ರಾಜ್ಯಾಧ್ಯಕ್ಷರಾಗಿ ಘೋಷಣೆ ಮಾಡಬೇಕು ಎಂದು ಚೀಟಿ ಬರೆದು ಕಾರ್ಯಕರ್ತರೊಬ್ಬರು ಕೊಟ್ಟರು. ಇದನ್ನು ಗಮನಿಸಿದ ಹೆಚ್ ಡಿ ಕುಮಾರಸ್ವಾಮಿ ಇಂದು ಆ ಕೆಲಸಕ್ಕೆ ಬಂದಿದ್ದಲ್ಲ ಎಂದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಇದು ಜೆಡಿಎಸ್ ಪಕ್ಷದ ಸ್ಲೋಗನ್ ಅಲ್ಲ. ರಾಜ್ಯದ ಏಳೂವರೆ ಕೋಟಿ ಜನರ ಮನದಾಳದ ಮಾತನ್ನ ನಾವು ಹೇಳಿದ್ದೇವೆ. ನಮ್ಮ ಈ ಹೋರಾಟ ಒಂದು ದಿನದ ಅಭಿಯಾನ ಅಲ್ಲ. ಕಾಂಗ್ರೆಸ್ ಅಧಿಕಾರದಲ್ಲಿ ಇರುವವರೆಗೂ ನಿರಂತರವಾಗಿ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದಾಗಿ ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡು ಶೂನ್ಯವಾಗಿದೆ. ಕಾಂಗ್ರೆಸ್ ಎರಡು ವರ್ಷಗಳ ಅಧಿಕಾರದಲ್ಲಿ ರಾಜ್ಯದ ಜನತೆಗೆ ಸಂಕಷ್ಟದ ದಿನಗಳನ್ನ ತಂದೊಡ್ಡಿದೆ. ಬರ್ತ್ ಸರ್ಟಿಫಿಕೇಟ್ನಿಂದ ಡೆತ್ ಸರ್ಟಿಫಿಕೇಟ್ವರೆಗೂ ದರ ಹೆಚ್ಚಳ ಮಾಡಿದ್ದಾರೆ. ಬಸ್, ಮೆಟ್ರೋ, ಆಸ್ಪತ್ರೆ ಶುಲ್ಕ ಎಲ್ಲದರ ಬೆಲೆ ಏರಿಕೆ ಮಾಡಿದ್ದಾರೆ ಎಂದು ನಿಖಿಲ್ ಹರಿಹಾಯ್ದರು.
ನಾವು ತೆಗೆದುಕೊಳ್ಳುವ ಗಾಳಿ ಒಂದು ಬಿಟ್ಟು ಕಾಂಗ್ರೆಸ್ ಸರ್ಕಾರ ಇನ್ನೆಲ್ಲದರ ಬೆಲೆ ಏರಿಕೆ ಮಾಡಿದೆ. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ಕರ್ನಾಟಕದಲ್ಲಿ ಭ್ರಷ್ಟಾಚಾರ ಮೊದಲನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ. ಬಸವರಾಜ ರಾಯರೆಡ್ಡಿ ಅವರೇ ನಮಗೊಂದು ಅವಕಾಶ ಕೊಡಿ ಕಮೀಷನ್, ಭ್ರಷ್ಟಾಚಾರ ಸಂಪೂರ್ಣವಾಗಿ ನಿರ್ಮೂಲನೆ ಮಾಡ್ತೀವಿ. ಸ್ವ ಪಕ್ಷದ ಸಚಿವರ ಕುಟುಂಬಸ್ಥರು ಕಮಿಷನ್ ಏಜೆಂಟ್ ಆಗಿ ಕೆಲಸ ಮಾಡ್ತಿದ್ದಾರೆ ಎಂದು ಅವರು ಆರೋಪಿಸಿದರು.
ಇದಕ್ಕೂ ಮೊದಲು ವಿಧಾನಸೌಧ ಮುತ್ತಿಗೆ ಹಾಕಲು ಹೊರಟ ಜೆಡಿಎಸ್ ಕಾರ್ಯಕರ್ತರು ಮುಖಂಡರನ್ನು ಫ್ರೀಡಂ ಪಾರ್ಕ್ನಲ್ಲೇ ಪೊಲೀಸರು ತಡೆದು ವಶಕ್ಕೆ ಪಡೆದುಕೊಂಡು ಬಿಎಂಟಿಸಿ ಬಸ್ಗಳಲ್ಲಿ ಕರೆದೊಯ್ದರು.
ಪದ್ಮನಾಭನಗರದ ತಮ್ಮ ನಿವಾಸದಲ್ಲೇ ಕುಳಿತು ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧದ ಜೆಡಿಎಸ್ ಹಮ್ಮಿಕೊಂಡಿದ್ದ ಹೋರಾಟ, ಪ್ರತಿಭಟನಾ ಕಾರ್ಯಕ್ರಮವನ್ನು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಟಿವಿಯಲ್ಲಿ ವೀಕ್ಷಿಸಿದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಬೆಲೆ ಏರಿಕೆ ಮಾಡಿರುವ ಸರ್ಕಾರದ ವಿರುದ್ಧ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಎಂಬ ಘೋಷ ವಾಕ್ಯದೊಂದಿಗೆ ವಿಧಾನಸೌಧ ಚಲೋ ಪ್ರತಿಭಟನೆಯಲ್ಲಿ ಶಾಸಕರಾದ ಕರೆಮ್ಮ, ಎಂ. ಟಿ. ಕೃಷ್ಣಪ್ಪ, ಶಾರದಾ ಪೂರ್ಯನಾಯಕ್, ಸಿ. ಎನ್. ಬಾಲಕೃಷ್ಣ, ವಿಧಾನಪರಿಷತ್ ಸದಸ್ಯರಾದ ಟಿ. ಎ. ಶರವಣ, ಬೋಜೇಗೌಡ, ಮಾಜಿ ಶಾಸಕರಾದ ಹೆಚ್. ಕೆ. ಕುಮಾರಸ್ವಾಮಿ, ಸುರೇಶ್ ಗೌಡ, ಅನ್ನದಾನಿ, ಬಂಡೆಪ್ಪ ಕಾಶಂಪೂರ್, ರಮೇಶ್ ಗೌಡ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.