ಸೋಮೇಶ್ವರ ಕುಂಟೆ ಪುನಶ್ಚೇತನ ಗೊಳಿಸಲು ಕರವೇ ಆಗ್ರಹ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಅಂಚಿಗಿರುವ ಕಸಬಾ ಹೋಬಳಿ ಗಂಗಾಧರಪುರ ಸರ್ವೇ ನಂಬರ್
17ರಲ್ಲಿ ಎರಡು ಎಕರೆ ನಾಲ್ಕು ಗುಂಟೆ ಜಾಗ ಸೋಮೇಶ್ವರ ಕುಂಟೆ ಎಂದು ಸರ್ಕಾರಿ ದಾಖಲೆಗಳಲ್ಲಿ ನಮೂದಾಗಿದೆ. ಪ್ರಸ್ತುತ ಕುಂಟೆ ಜಾಗ ಕಸಕಡ್ಡಿಗಳಿಂದ ತುಂಬಿದ್ದು ಇದನ್ನು ಕುಂಟೆಯಾಗಿ ಉಳಿಸಿ ಅಭಿವೃದ್ಧಿ ಗೊಳಿಸಬೇಕೆಂದು ಕರವೇ ಕನ್ನಡಿಗರ ಬಣದ ಸ್ಥಾಪಕ ಅಧ್ಯಕ್ಷ ಬಿ. ಏಸ್. ಚಂದ್ರಶೇಖರ್ ಹೇಳಿದ್ದಾರೆ.

        ನಗರದ ಪ್ರವಾಸಿ ಮಂದಿರದಲ್ಲಿ ಕರವೇ ಕನ್ನಡಿಗರ ಬಣದಿಂದ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಚಂದ್ರಶೇಖರ್ ಮಾತನಾಡಿ ದೊಡ್ಡಬಳ್ಳಾಪುರ ತಾಲೂಕು ಕಸಬಾ ಹೋಬಳಿ ಗಂಗಾಧರ ಪುರ ಸರ್ವೇ ನಂಬರ್ 17ರಲ್ಲಿ ಎರಡು ಎಕರೆ ನಾಲ್ಕು ಗುಂಟೆ ಜಾಗವಿದ್ದು ಇದು ಸ್ವಯಂಬುವೇಶ್ವರ ದೇವಾಲಯ ಸಮೀಪವಿದೆ. ಆದರೆ ಪ್ರಸ್ತುತ ಪಹಣಿಯಲ್ಲಿ ಎರಡು ಗುಂಟೆ ಚಿಲ್ಲರೆ ವಿಸ್ತೀರ್ಣದ ಬದಲಾಗಿ 0.00ನಮೂದಾಗಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಹಲವು ವರ್ಷಗಳ ಹಿಂದೆ ಇದಕ್ಕೆ ಸಂಬಂದಿಸಿದ ಜಾಗದಲ್ಲಿಬಡವರೊಬ್ಬರು ಮನೆಯನ್ನು ಕಟ್ಟಿದ್ದರು.

ಅದನ್ನು ಅಕ್ರಮವೆಂದು ತಾಲೂಕು ಆಡಳಿತ ಮನೆಯನ್ನು ಕೆಡವಿದ್ದು ಇತಿಹಾಸ. ಎರಡು ಎಕರೆ ಚಿಲ್ಲರೆ ವಿಸ್ತೀರ್ಣದ ಜಾಗವನ್ನು ಬದಲಾದ ಪಹಣಿಯಲ್ಲಿ 0.00 ಎಂದು ನಮೂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜೊತೆಗೆ ಹಿಂದೆ ಅಕ್ರಮವೆಂದು ಬಡವರ ಮನೆಯನ್ನು ಕೆಡವಿದ್ದ ತಾಲೂಕು ಆಡಳಿತ ಸದರಿ ಜಾಗದಲ್ಲಿ ಕೆಲವು ಬಲಾಡ್ಯರು ಒತ್ತುವರಿ ಮಾಡಿಕೊಂಡಿದ್ದರೂ ಸಹ ತಾಲೂಕು ಆಡಳಿತ ಗಮನ ಹರಿಸದಿರುವುದು ಸಖೆದಾಶ್ಚರ್ಯ ಮೂಡಿಸಿದೆ.ಇದಕ್ಕೆ ಸಂಬಂಧಿಸಿದಂತೆ ನಮ್ಮ ಸಂಘಟನೆ ವತಿಯಿಂದ ಶಾಸಕರು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್, ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.

       ಪ್ರಸ್ತುತ ವಾತಾವರಣದಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡಿರುವುದು ವಾಸ್ತವ. ಅದರಲ್ಲೂ ದಶಕಗಳ ಹಿಂದೆ ಸದಾ ನೀರಿನಿಂದ ತುಂಬಿರುತ್ತಿದ್ದ ಸೋಮೇಶ್ವರ ಕಲ್ಯಾಣಿಗೆ ಜಲದ ಸೆಲೆಯಾಗಿದ್ದ ಕುಂಟೆಯನ್ನು ಪುನರುಥಾನ ಗೊಳಿಸುವುದರಿಂದ ಮುಂದಿನ ಪೀಳಿಗೆಗೆ ಅನುಕೂಲವಾಗಿತ್ತದೆ. ಜೊತೆಗೆ ಪರಿಸರಕ್ಕೆ ಕೊಡುಗೆಯಾಗುತ್ತದೆ, ಅಲ್ಲದೆ ಕಸದ ತ್ಯಾಜ್ಯಗಳಿಂದ ತುಂಬಿರುವ ಕುಂಟೆಯ ಹಳೆಯ ಸರ್ಕಾರಿ ದಾಖಲೆಗಳಂತೆ ಎರಡು ಎಕರೆ ನಾಲ್ಕು ಗುಂಟೆ ಜಾಗವನ್ನು ಸ್ವಚ್ಚ ಗೊಳಿಸಿ ಗಿಡ ಮರ ನೆಟ್ಟು ನವಿಕರಿಸುವುದರಿಂದ ಆಕರ್ಷಣಿಯವಾಗಿ ನಗರದ ಸಾರ್ವಜನಿಕರಿಗೆ ಪರಿಸರದ ಬಗ್ಗೆ ಆಸಕ್ತಿ ಮೂಡಲು ಕಾರಣವಾಗುತ್ತದೆ.

ಈಗ ನಮ್ಮ ನಗರದ ಮಧ್ಯಭಾಗದಲ್ಲಿರುವ ಸೋಮೇಶ್ವರ ಹೆಸರಿನ ಕುಂಟೆಯನ್ನು ಯಥಾವತ್ತಾಗಿ ಉಳಿಸಿ ಅಭಿವೃದ್ಧಿ ಪಡಿಸಬೇಕೆಂದು ಸಂಬಂಧ ಪಟ್ಟವರಿಗೆ ಮನವಿ ಮಾಡಿದ್ದೇವೆ ಎಂದ ಚಂದ್ರು ಈ ಹಿಂದೆ ಅಧಿಕಾರಿಗಳು ಗಂಗಾಧರ ಪುರ ಸರ್ವೇ ನಂಬರ್ 111ರ ಪೊಲೀಸ್ ವಸತಿ ಜಾಗವನ್ನು ಭೂ ಗಳ್ಳರಿಂದ ರಕ್ಷಿಸಿ ಮತ್ತೆ ಪೊಲೀಸ್ ಇಲಾಖೆ ಹೆಸರಿಗೆ ಆಗುವುದಕ್ಕೆ ನಮ್ಮೊಂದಿಗೆ ಸಹಕರಿಸಿದ್ದಾರೆ.

ಈ ಹಿಂದಿನ ಜಿಲ್ಲಾಧಿಕಾರಿಗಳಾದ ಶಿವಶಂಕರ್, ಉಪವಿಭಾಗಾದಿ ಕಾರಿಗಳಾದ ದುರ್ಗಾಶ್ರೀ, ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಪೌರಯುಕ್ತರಾದ ಕಾರ್ತಿಕೇಶ್ವರ್ ರವರ ಪಾತ್ರ ಹಾಗೂ ಶ್ರಮ ಅಪಾರವಾದುದು. ಇದಕ್ಕಾಗಿ ನಮ್ಮ ಸಂಘಟನೆ ಅವರಿಗೆ ಅಭಾರಿಯಾಗಿರುತ್ತದೆ. ಈಗ ನಶಿಸಿರುವ ಸೋಮೇಶ್ವರ ಕುಂಟೆಯನ್ನು ಉಳಿಸಲು ಈ ಬಾರಿಯೂ ನಮಗೆ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸ ವಿದೆ ಎಂದು ಚಂದ್ರಶೇಖರ್ ಹೇಳಿದರು.

       ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರದಾನ ಕಾರ್ಯದರ್ಶಿ ಆರ್. ರಮೇಶ್, ಜಿಲ್ಲಾಧ್ಯಕ್ಷ ಪುನೀತ್, ಕಾರ್ಯದರ್ಶಿ ತಾಯೆಗೌಡ, ವಾಸು, ತಾಲೂಕು ಅಧ್ಯಕ್ಷ ವಿನಯ್ ಕುಮಾರ್, ಉಪಾಧ್ಯಕ್ಷ ಅಶ್ವಥ್ ನಾರಾಯಣ್, ಕಾರ್ಯಾಧ್ಯಕ್ಷ ಪ್ರದೀಪ್ ಕುಮಾರ್, ಕಾರ್ಮಿಕ ಘಟಕದ ಶಿವಶಂಕರ ರೆಡ್ಡಿ, ಜಿಲ್ಲಾ ಯುವಘಟಕದ ಅಧ್ಯಕ್ಷ ರಂಜಿತ್ ಗೌಡ, ಮುಖಂಡರಾದ ಪ್ರಶಾಂತ್, ಗವಿಸ್ವಾಮಿ ಮುಂತಾದವರು ಹಾಜರಿದ್ದರು.

 

Share This Article
error: Content is protected !!
";