ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಸ್ವತಃ ಕಾಂಗ್ರೆಸ್ ಶಾಸಕರೇ ಸಮೀಕ್ಷೆಗೆ ಮನೆ ಮನೆಗೆ ಬಂದಿಲ್ಲ ಎಂದು ಹೇಳಿದ್ದಾರೆ. ಮನೆಮನೆಗೆ ಹೋಗದೇ ಸಮೀಕ್ಷೆ ಮಾಡಿರುವುದು ಸಿದ್ದರಾಮಯ್ಯನವರ ತಂತ್ರ. ಸಮೀಕ್ಷೆ ಮಾಡದೇ ಅದಕ್ಕೆ ಮೀಸಲಿಟ್ಟ 165 ಕೋಟಿ ರೂ. ಹಣ ಲೂಟಿ ಮಾಡಿದ್ದಾರೆ. ಈಬಗ್ಗೆ ಲೋಕಾಯುಕ್ತ ತನಿಖೆ ಆಗಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಗ್ರಹಿಸಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಜಾತಿಗಣತಿ ಮಾಡದೇ 165 ಕೋಟಿ ಗುಳುಂ ಮಾಡಿದ್ದಾರೆ. ಧರ್ಮ, ಜಾತಿ ಒಡೆಯುವುದರಲ್ಲಿ ಸಿದ್ದರಾಮಯ್ಯ ನಂ.1 ಆಗಿದ್ದಾರೆ. ಈ ಹಿಂದೆ ಲಿಂಗಾಯತ ಧರ್ಮ ಒಡೆಯಲು ಹೋಗಿ ಕಪಾಳ ಮೋಕ್ಷ ಆಗಿದೆ. ಈಗ ಜಾತಿ ಗಣತಿ ವರದಿ ತೋರಿಸಿ ಹಿಂದೂಗಳನ್ನು ಒಡೆಯುತ್ತಿದ್ದಾರೆ. ಮುಸ್ಲಿಂಧರ್ಮದಲ್ಲೂ 10 ಜಾತಿಗಳಿವೆ, ಒಂದೂ ಪ್ರತ್ಯೇಕಿಸಿಲ್ಲ. ಆದರೆ ಹಿಂದೂಗಳನ್ನು ಪೀಸ್ ಪೀಸ್ ಮಾಡಿದ್ದಾರೆ ಎಂದು ಅಶೋಕ್ ದೂರಿದರು.
ಫೆವಿಕಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ವ್ಯಂಗ್ಯವಾಡಿದ ಆರ್.ಅಶೋಕ, ದೇವೇಗೌಡರು ಸಿದ್ದರಾಮಯ್ಯರನ್ನು ಮಂತ್ರಿ ಮಾಡಿದರು. ಉಪಮುಖ್ಯಮಂತ್ರಿ, ಹಣಕಾಸು ಮಂತ್ರಿ ಮಾಡಿದ್ದರು. ಅಧಿಕಾರ ಇರುವ ತನಕ ಸಿದ್ದರಾಮಯ್ಯ ಜೆಡಿಎಸ್‌ಪಕ್ಷದಲ್ಲಿದ್ದರು. ಅಧಿಕಾರ ಕೊಡಲ್ಲ ಅಂದಾಗ ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿ ಸಿಎಂ ಆದರು. ಅದಕ್ಕೆ ಈ ಹಿಂದೆ ಅಧಿವೇಶನದಲ್ಲಿ ಡಿಕೆಶಿ ಸಿಎಂ ಸ್ಥಾನವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಎಂದಿದ್ದರು. ಆ ಹೇಳಿಕೆಯಿಂದ ಸಿದ್ದರಾಮಯ್ಯರಲ್ಲಿ ನಡುಕ ಶುರುವಾಗಿದೆ ಎಂದು ಅಶೋಕ್ ತಿಳಿಸಿದರು.
ಸಿಎಂ ಬದಲಾವಣೆ ಒಪ್ಪಂದ ಆಗಿರುವುದು ನೂರಕ್ಕೆ ನೂರಕ್ಕೆ ಸತ್ಯ. ನವೆಂಬರ್ ತಿಂಗಳಲ್ಲಿ ಅಧಿಕಾರ ಬಿಟ್ಟು ಕೊಡುವ ಟೈಂ. ಆಗ ಒಪ್ಪಿ ಸಿದ್ದರಾಮಯ್ಯ ಈಗ ಮಾತು ತಪ್ಪುತ್ತಿದ್ದಾರೆ. ಅದಕ್ಕೆ ಈಗ ಸಿದ್ದರಾಮಯ್ಯ ಜಾತಿಗಣತಿ ವರದಿ ಮಂಡಿಸಿದ್ದಾರೆ. ಅಧಿಕಾರ ಬಿಟ್ಟು ಕೊಡದಿದ್ದರೆ ಕಾಂಗ್ರೆಸ್‌ನಲ್ಲಿ ದಂಗೆ ಆಗಲಿದೆ ಎಂದು ಅಶೋಕ್ ಭವಿಷ್ಯ ನುಡಿದರು.
ಬಿಜೆಪಿ ಸರ್ಕಾರವೇ ಉತ್ತಮ ಎಂದು ಹಲವರು ಹೇಳುತ್ತಿದ್ದಾರೆ.
ಕಾಂಗ್ರೆಸ್‌ಗೆ 10 ರೂ. ಕೊಡುವ ಯೋಗ್ಯತೆ ಇಲ್ಲ. ಗುತ್ತಿಗೆದಾರರ, ಅಧಿಕಾರಿಗಳ ಆತ್ಮಹತ್ಯೆ ಆಗುತ್ತಿವೆ. ಆದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಮೋದಿ ಅವರು ಸಿಲಿಂಡರ್ ಬೆಲೆ ಎರಡು ಬಾರಿ ಇಳಿಸಿದ್ದಾರೆ. ಈಗ ಜಾಸ್ತಿ ಮಾಡಿದ್ದಾರೆ. ಕಾಂಗ್ರೆಸ್ ಯಾವುದಾದರೂ ಇಳಿಸಿ ಜಾಸ್ತಿ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು ಆಗ ನಾನು ಒಪ್ಪುತ್ತಿದ್ದೆ. ಈಗ ಎಲ್ಲದರ ಮೇಲೂ ತೆರಿಗೆ ಹೆಚ್ಚಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗಟ್ಟಿದೆ. ಗೃಹ ಸಚಿವರು ಇದ್ದು ಇಲ್ಲದಂತಾಗಿದೆ. ಏನೇ ಪ್ರಕರಣ ಆದರೂ ಅಂಕಿ ಅಂಶ ಕೊಟ್ಟು ಸುಮ್ಮನಾಗುತ್ತಿದ್ದಾರೆ. ಈ ಸರ್ಕಾರದ ಮೇಲೆ ರಾಜ್ಯದ ಜನರಿಗೆ ಭರವಸೆ ಇಲ್ಲದಾಗಿದೆ. ಈ ಸರ್ಕಾರ ಯಾವಾಗ ತೊಲಗುತ್ತೊ ಎಂಬ ಆಶಾಭಾವನೆಯಲ್ಲಿ ಜನರಿದ್ದಾರೆ ಎಂದು ವಿಪಕ್ಷ ನಾಯಕರು ಹೇಳಿದರು.
ದೇಶದ ಸ್ವಾತಂತ್ರ್ಯ ಯೋಧರ ಟ್ರಸ್ಟ್ ನ್ಯಾಷನಲ್ ಹೆರಾಲ್ಡ್ ಪತ್ರಿಕೆ. ಅದರ 7,500 ಕೋಟಿ ರೂ. ಆಸ್ತಿಯನ್ನು ಸೋನಿಯಾ ಗಾಂಧಿ ಮತ್ತು ರಾಹುಲ್ ಕಬಳಿಸಿದ್ದಾರೆ. ಈರೀತಿಯ ಯೋಜನೆ ಜಾರಿಗೆ ತಂದ ಕಾಂಗ್ರೆಸ್‌ಗೆ ನೋಬೆಲ್ ಪ್ರಶಸ್ತಿ ಕೊಡಬೇಕು. ಅಮ್ಮ-ಮಗ, ಹಸು ಮತ್ತು ಕರು ಕೋಟಿ ಕೋಟಿ ಲೂಟಿ ಮಾಡಿದ್ದಾರೆ.
ಸೋನಿಯಾ ಎ1, ರಾಹುಲ್ ಎ-2 ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಇಲ್ಲ. ಅದು ಕೋರ್ಟ್ ಆದೇಶವಾಗಿದೆ. ಈ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾದ ಕಾಂಗ್ರೆಸ್ ಯಾವ ನೈತಿಕತೆ ಆಧಾರದ ಮೇಲೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. 7,500 ಕೋಟಿ ಆಸ್ತಿ ಕಾನೂನು ಪ್ರಕಾರ ಸರ್ಕಾರಕ್ಕೆ ಬರಬೇಕು. ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ಅಶೋಕ್ ಆಗ್ರಹ ಮಾಡಿದರು.
ಇಡಿ, ಸಿಬಿಐ, ಐಟಿ ಸ್ವಾಯತ್ತ ಸಂಸ್ಥೆಗಳು. ಸುಬ್ರಹ್ಮಣ್ಯ ಸ್ವಾಮಿ ಇಡಿಗೆ ಹೋಗಿರಲಿಲ್ಲ, ಕೋರ್ಟ್‌ಗೆ ಹೋಗಿದ್ದರು. ಕ್ಲೀನ್ ಚೀಟ್ ಕೊಡಲು ಕಾಂಗ್ರೆಸ್ ಪುಡಾರಿಗಳಿಗೆ ಏನು ಅಧಿಕಾರ ಇದೆ. ಸೋನಿಯಾ, ರಾಹುಲ್ ಬೇಲ್ ಮೇಲೆ ಇದ್ದಾರೆ. ನಮ್ಮ ಮೇಲೆ ಆರೋಪ ಮಾಡುವುದನ್ನು ಬಿಡಬೇಕು ಎಂದು ಅಶೋಕ್ ಕಿಡಿಕಾರಿದರು.