ದ್ರೌಪದಿ ಮುರ್ಮು ಅವರನ್ನು ‘ಬಡಪಾಯಿ ಮಹಿಳೆ’ ಎಂದು ಅಪಮಾನಿಸಿದ ಸೋನಿಯಾ ಗಾಂಧಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸವಿಂಧನಾ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನೇ ಸಹಿಸಿಕೊಳ್ಳದ ಕಾಂಗ್ರೆಸ್ ಹಾಗೂ ನೆಹರು ಮನೆತನ ಆದಿವಾಸಿ ಮೂಲದ ಶ್ರೀಮತಿ ದ್ರೌಪದಿ ಮುರ್ಮು ಅವರು ದೇಶದ ಅತ್ಯುನ್ನತ ಸ್ಥಾನ ರಾಷ್ಟ್ರಪತಿ ಹುದ್ದೆಯಲ್ಲಿರುವುದನ್ನು ಹೇಗೆ ಸಹಿಸಿಕೊಳ್ಳುತ್ತಾರೆ? ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರು ದ್ರೌಪದಿ ಮುರ್ಮು ಅವರನ್ನು ಕುರಿತು ಬಡಪಾಯಿ ಮಹಿಳೆಎಂದು ಅಪಮಾನಿಸಿ ರಾಷ್ಟ್ರಪತಿ ಸ್ಥಾನದ ಘನತೆಗೆ ಧಕ್ಕೆ ತರುವ ಮೂಲಕ ಭಾರತವನ್ನೂ ಕೂಡ ಅಪಮಾನಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಿಸಿದ್ದಾರೆ.

ಸ್ವಾತಂತ್ರ್ಯಾ ನಂತರ ದೇಶದ ಅಧಿಕಾರವನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದ್ದ ನೆಹರು ಮನೆತನ ಪ್ರಜಾತಂತ್ರ ವ್ಯವಸ್ಥೆಯಲ್ಲೂ ಸರ್ವಾಧಿಕಾರಿ ಆಡಳಿತ ಮೆರೆದ ಇತಿಹಾಸದ ಹಿನ್ನೆಲೆ ಹೊಂದಿದೆ.  ಬಡವರು, ಹಿಂದುಳಿದವರು ಹಾಗೂ ಆದಿವಾಸಿ ಸಮುದಾಯಗಳನ್ನು ಕಾಂಗ್ರೆಸ್ ಪಕ್ಷ ತನ್ನ ಮತಬ್ಯಾಂಕ್ ಮಾಡಿಕೊಂಡಿತ್ತೇ ಹೊರತು ಈ ಸಮುದಾಯಗಳ ರಾಜಕೀಯ ಅಧಿಕಾರ ಹಾಗೂ ಶಿಕ್ಷಣವನ್ನು ನೀಡುವಲ್ಲಿ ವಂಚಿಸುತ್ತಲೇ ಬಂದಿದೆ ಎಂದು ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.

- Advertisement - 

ಶೋಷಿತ ಹಾಗೂ ಬುಡಕಟ್ಟು ಸಮುದಾಯಗಳು ಉನ್ನತ ಸ್ಥಾನ ಅಲಂಕರಿಸುವುದನ್ನು ಸಹಿಸದ ಮನಸ್ಥಿತಿ ಸೋನಿಯಾ ಅವರ ಹೇಳಿಕೆಯಲ್ಲಿ ಪ್ರತಿಫಲನಗೊಂಡಿದೆ. ಒಬ್ಬ ಮಹಿಳೆಯಾಗಿ ಅತ್ಯುನ್ನತ ಸ್ಥಾನದಲ್ಲಿರುವ ಮತ್ತೊಬ್ಬ ಮಹಿಳೆಯನ್ನು ಸೋನಿಯಾ ಅವರು ಹಿಯಾಳಿಸಿರುವುದು ಸ್ತ್ರೀ ಕುಲವನ್ನೂ ಸಹ ಅಪಮಾನಿಸಿದಂತಾಗಿದೆ ಎಂದು ಅವರು ಗುಡುಗಿದ್ದಾರೆ.

ಸೋನಿಯಾ ಗಾಂಧಿ ಅವರ ಹೇಳಿಕೆ ಅವರ ಪುತ್ರಿ ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಭಟ್ಟಂಗಿ ಕಾಂಗ್ರೆಸ್ಸಿಗರು ಸಮರ್ಥಿಸಲು ಹೊರಟಿರುವುದು ಅವರ ಭಂಡತನವನ್ನು ಸಾಕ್ಷೀಕರಿಸುತ್ತಿದೆ. ದೇಶದ ಪ್ರಥಮ ಪ್ರಜೆಯನ್ನು ಅವಮಾನಿಸಿರುವ ಸೋನಿಯಾ ಗಾಂಧಿ ಅವರು ಈ ಕೂಡಲೇ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದ ಜನತೆಯ ಮುಂದೆ ಕ್ಷಮೆ ಯಾಚಿಸಲಿ ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

- Advertisement - 

Share This Article
error: Content is protected !!
";