ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡ ಗ್ರಾಮೀಣ ಪ್ರತಿಭೆ ಸೋನು ಬಾಬು

News Desk
- Advertisement -  - Advertisement - 

ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸತತ ಪರಿಶ್ರಮ, ಶದ್ಧೆ ಇದ್ದರೆ ಯಾವುದೇ ಕಠಿಣ ಸಾಧನೆ ಮಾಡಬಹುದು ಎನ್ನುವುದನ್ನ ಪ್ರಥಮ ಪ್ರಯತ್ನದಲ್ಲೇ ತೋರಿಸಿಕೊಟ್ಟ ಛಲಗಾತಿ ಕುಮಾರಿ ಬಿ.ಸೋನು ಬಾಬು.
2025ರ ಕರ್ನಾಟಕ ನ್ಯಾಯಾಂಗ ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಸಿವಿಲ್ ನ್ಯಾಯಾಧೀಶರಾಗಿ ಸೋನು ಅವರು ಆಯ್ಕೆಯಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಯಾವುದೇ ಕೋಚಿಂಗ್ ಗೆ ಹೋಗದೆ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ಸೋನು ಅವರು ಮಹತ್ವದ ಸಾಧನೆ ಮಾಡಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ.
ಇವರ ಆಯ್ಕೆ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದೆ. ಯುವ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಸೋನು ಬಾಬು ಅವರು ನ್ಯಾಯಾಂಗ ಕ್ಷೇತ್ರಕ್ಕೆ ಹೊಸ ವೇಗ ನೀಡುವ ನಿರೀಕ್ಷೆಯಿದೆ.
ಹುಟ್ಟೂರು:
ಚಿತ್ರದುರ್ಗ ತಾಲೂಕು ಗುಡ್ಡದರಂಗವ್ವನಹಳ್ಳಿ(ಜಿ.ಆರ್.ಹಳ್ಳಿ)ಯ ಬಿ.ಸೋನು ಅವರು ಚಿತ್ರದುರ್ಗದ ಕೆಎಸ್‌ಎಫ್‌ಸಿ ವ್ಯವಸ್ಥಾಪಕ ಆರ್. ಬಾಬು ಮತ್ತು ಮಂಜುಳಾ ದಂಪತಿಯ ಪುತ್ರಿಯಾಗಿದ್ದಾರೆ.
ವಕೀಲ ವೃತ್ತಿ ಆರಂಭ:
2023ರಲ್ಲಿ ಬಾರ್ ಕೌನ್ಸಿಲ್ ನಲ್ಲಿ  ನೋಂದಣಿ ಮಾಡಿಕೊಂಡು ಕಳೆದ ಎರಡೂವರೆ ವರ್ಷಗಳಿಂದ ವಕೀಲರಾಗಿ ಪ್ರಾಕ್ಟಿಸ್ ಮಾಡುತ್ತಲೇ ಪರೀಕ್ಷೆಗೂ ಸಿದ್ಧತೆ ನಡೆಸಿ ಹಿರಿಯ ವಕೀಲರಾದ ಕೆ.ಎನ್ ವಿಶ್ವನಾಥಯ್ಯ ಸೇರಿದಂತೆ ವಕೀಲರ ಸಂಘದ ಹಿರಿಯರ ಮಾರ್ಗದರ್ಶನ, ಸಲಹೆ, ಸೂಚನೆಗಳೊಂದಿಗೆ ಪರೀಕ್ಷೆ ಪಾಸು ಮಾಡಿದ್ದಾರೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ್‌ ವಾಸುದೇವ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ. ವಿಜಯ್ ಅವರಲ್ಲೂ ಒಮ್ಮೊಮ್ಮೆ ಸಲಹೆ ಮತ್ತು ಮಾರ್ಗದರ್ಶನ ಪಡೆದಿದ್ದಾರೆ.
ಹಾಸನ ಹಿರಿಯ ನ್ಯಾಯಾಧೀಶ ರವಿಕುಮಾರ್ ಅವರು ನಡೆಸಿಕೊಡುತ್ತಿದ್ದ ಆನ್ ಲೈನ್ ಕ್ಲಾಸ್‌, ಸಿವಿಲ್ ನ್ಯಾಯಾಧೀಶರ ಆಯ್ಕೆ ಕುರಿತ ಕಾರ್ಯಾಗಾರಗಳು, ಸತತ ಪರಿಶ್ರಮದ ಓದು ಅವರನ್ನ ದಡ ಸೇರಿಸಿದೆ.
ಕಾರ್ಯಾಗಾರಗಳು ಪ್ರಿಲಿಮನರಿ, ಮೇನ್ಸ್ ಹಾಗೂ ಸಂದರ್ಶನಕ್ಕೆ ಸಾಕಷ್ಟು ನೆರವಾಗಿತು ಎಂದು ಬಿ.ಸೋನು ಬಾಬು ಅವರು ಚಂದ್ರವಳ್ಳಿ ಪತ್ರಿಕೆಯೊಂದಿಗೆ ತನ್ನ ಅಭಿಪ್ರಾಯ ಹಂಚಿಕೊಂಡರು.
ಶಿಕ್ಷಣ ಪರಿಚಯ:
ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣವನ್ನು ಚಿತ್ರದುರ್ಗದ ಕ್ರೆಸೆಂಟ್ ಇಂಗ್ಲೀಷ್ ಸ್ಕೂಲ್ ನಲ್ಲಿ ಪಡೆದಿದ್ದರು. ಎಸ್ ಆರ್ ಎಸ್ ಕಾಲೇಜಿನಲ್ಲಿ ಪಿಯು ದಾವಣಗೆರೆಯ ದವನ್ ಕಾಲೇಜಿನಲ್ಲಿ ಬಿಬಿಎಂ, ಬೆಂಗಳೂರಿನ ಆಚಾರ್ಯ ಕಾಲೇಜಿನಲ್ಲಿ ಎಂಬಿಎ ಉನ್ನತ ಶಿಕ್ಷಣ ಪಡೆದಿದ್ದಾರೆ.
ಚಿತ್ರದುರ್ಗದ ಎಸ್ ಜೆಎಂ ಲಾ ಕಾಲೇಜಿನಲ್ಲಿ 2023ರಲ್ಲಿ ಕಾನೂನು‌ಪದವಿ ಪದವಿ ಪಡೆದು ಹೊರ ಬರುತ್ತಿದ್ದಂತೆ ಅದೇ ವರ್ಷ ಬಾರ್ ಕೌನ್ಸಿಲ್ ನಲ್ಲಿ ನೋಂದಣಿ ಮಾಡಿಕೊಂಡು ಕಾನೂನು ಪ್ರಾಕ್ಟೀಸ್ ಸಹ ಮಾಡುತ್ತಾರೆ. ಜೊತೆ ಜೊತೆಯಲ್ಲಿ ಕರ್ನಾಟಕ ನ್ಯಾಯಾಂಗ ಪರೀಕ್ಷೆಗೂ ಸಿದ್ಧತೆ ಮಾಡುತ್ತಾ ಸತತ ಪರಿಶ್ರಮದೊಂದಿಗೆ ಮೊದಲ ಪ್ರಯತ್ನದಲ್ಲೇ ಪಾಸ್ ಮಾಡುವ ಮೂಲಕ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.‌


ಪುತ್ರಿಯ ಯಶಸ್ಸಿನಿಂದ ಪೋಷಕರಲ್ಲಿ ಇಮ್ಮಡಿಸಿದ ಸಂತಸ:
ಪುತ್ರಿ ಬಿ.ಸೋನು ಬಾಬು ಅವರು ಕರ್ನಾಟಕ ಹೈಕೋರ್ಟ್​ ಪ್ರಕಟಿಸಿದ ಫಲಿತಾಂಶದಲ್ಲಿ ನ್ಯಾಯಾಧೀಶರ ಆಯ್ಕೆ ಪಟ್ಟಿಯಲ್ಲಿ ಹೆಸರಿರುವುದನ್ನು ಖಚಿತ ಪಡಿಸಿಕೊಂಡರು. ಪುತ್ರಿಯ ಸಾಧನೆಯಿಂದಾಗಿ ನ್ಯಾಯಾಧೀಶನಾಗಿರುವುದು ಸಂತಸ ತಂದಿದೆ ಎಂದು ತಂದೆ ಆರ್. ಬಾಬು, ತಾಯಿ ಎ.ಮಂಜುಳ ಅವರು ಚಂದ್ರವಳ್ಳಿ ಪತ್ರಿಕೆಯೊಂದಿಗೆ ಖುಷಿ ಹಂಚಿಕೊಂಡರು.
ಸನ್ಮಾನ:
ಚಿತ್ರದುರ್ಗ ಜಿಲ್ಲೆಯಿಂದ ನೂತನವಾಗಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಮಧು ಹಾಗೂ ಕುಮಾರಿ ಬಿ.ಸೋನಾ ಅವರನ್ನು ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದಿಂದ ಹಾಗೂ ವಕೀಲರ ಬಳಗದಿಂದ ಸನ್ಮಾನಿಸಿ ಗೌರವಿಸಲಾಗಿದೆ. ಈ ಸಂದರ್ಭದಲ್ಲಿ ಹಿರಿಯ ವಕೀಲ ಪಿ.ಎಂ ಹನುಮಂತರಾಯ, ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.

- Advertisement - 

Share This Article
error: Content is protected !!
";