ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾರ್ವಜನಿಕವಾಗಿ ಕೈಗೊಳ್ಳುವ ದೊಡ್ಡ ಮಟ್ಟದ ಸಭೆ, ಸಮಾರಂಭ ಮತ್ತು ವಿಜಯೋತ್ಸವದಂತಹ ಕಾರ್ಯಕ್ರಮಗಳಿಗೆ ಹೊಸ ಎಸ್‌ಒಪಿ (ಸ್ಟ್ಯಾಂಡರ್ಡ್ ಆಪರೇಟಿವ್ ಪ್ರೊಸಿಜರ್) ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಕ್ರಿಕೆಟ್ ಇತಿಹಾಸದಲ್ಲೇ ಕಾಲ್ತುಳಿದಂತಹ ದುರ್ಘಟನೆ ಆಗಿರಲಿಲ್ಲ. ಸಾವನ್ನಪ್ಪಿರುವವರ ಆತ್ಮಕ್ಕೆ ಶಾಂತಿ ಕೊರುತ್ತೇನೆ. ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಸಿಎಂ ಅವರು ಈಗಾಗಲೇ ಸಭೆ ನಡೆಸಿ, ಅನೇಕ ಮಾಹಿತಿ ಪಡೆದು ಮಾತನಾಡಿದ್ದಾರೆ. ಈ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ಮಾಡಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ಅವರು ಯಾರೇ ಆಗಿರಲಿ, ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ. ತನಿಖೆಯ ವರದಿ ಬರುವವರೆಗೆ ಹೇಳಲು ಸಾಧ್ಯವಿಲ್ಲ ಎಂದು ಪರಮೇಶ್ವರ್ ತಿಳಿಸಿದರು.
ಕಾಲ್ತುಳಿತದ ದುರ್ಘಟನೆಯಲ್ಲಿ 11 ಜನ ಸಾವನ್ನಪ್ಪಿದ್ದಾರೆ. 56 ಜನ ಗಾಯಗೊಂಡಿದ್ದು ಆ ಪೈಕಿ 46 ಜನ ಚಿಕಿತ್ಸೆ ಪಡೆದು ಮನೆಗಳಿಗೆ ಹೋಗಿದ್ದಾರೆ. 10 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮತ್ತೆ ಇಂತಹ ದುರ್ಘಟನೆಗಳು ಆಗಬಾರದು ಎಂಬ ವಿಚಾರದಲ್ಲಿ ಗೃಹ ಇಲಾಖೆಯಿಂದ ಒಂದು ಹೊಸ ಎಸ್‌ಒಪಿ ಜಾರಿ ಮಾಡುತ್ತೇವೆ. ಮುಂದೆ ಯಾವುದೇ ದೊಡ್ಡ ಸಮಾರಂಭ, ಸಭೆ, ವಿಜಯೋತ್ಸವ ನಡೆಯುವಾಗ ಪೊಲೀಸ್ ಇಲಾಖೆಯ ನಿರ್ದೇಶನ ಏನು ಬರುತ್ತದೆ ಅದರ ಚೌಕಟ್ಟಿನಲ್ಲಿ ಕಾರ್ಯಕ್ರಮ ಮಾಡಬೇಕು ಎಂದು ಸಚಿವರು ಹೇಳಿದರು.
ಹೊಸ ಎಸ್‌ಒಪಿ ಜಾರಿ ಮಾಡುತ್ತೇವೆ. ಕೆಲ ಸೂಚನೆಗಳನ್ನು ಕೊಡುತ್ತೇವೆ. ಅಮಾಯಕರ ಸಾವುಗಳು ಆಗಬಾರದು. ಇದೆಲ್ಲವನ್ನು ನೋಡಿದಾಗ ನೋವಾಗುತ್ತದೆ. ಶವಗಾರದಲ್ಲಿ ನೋಡಿದಾಗ ದುಃಖವಾಯಿತು. 20-25 ವರ್ಷ ವಯಸ್ಸಿನವರು ಸಂತೋಷದಿಂದ ಆಚರಣೆಗೆ ಬಂದಾಗ ಜೀವವನ್ನೇ ಕಳೆದುಕೊಂಡಿದ್ದಾರೆ. ಇದೆಲ್ಲವನ್ನು ಯಾರು ಊಹೆ ಮಾಡಿರಲಿಲ್ಲ ಎಂದು ಪರಮೇಶ್ವರ್ ತಿಳಿಸಿದರು.
ಈ ದುರ್ಘಟನೆಗೆ ಸಂಬಂಧಿಸಿದಂತೆ ಎಲ್ಲಿ ಲೋಪವಾಗಿದೆ ಎಂಬುದನ್ನು ಪರಿಶೀಲಿಸುತ್ತೇವೆ. ಒಬ್ಬ ವ್ಯಕ್ತಿ ತನಗಿದ್ದ ಒಬ್ಬ ಮಗನನ್ನು ಕಳೆದಕೊಂಡ ಬಗ್ಗೆ ವೈದೇಹಿ ಆಸ್ಪತ್ರೆಯಲ್ಲಿ ಹೇಳಿಕೊಂಡರು. ಮಗ ಕಾಲೇಜಿಗೆ ಹೋಗುವುದಾಗಿ ಬೆಳಗ್ಗೆ 6 ಗಂಟೆಗೆ ಮನೆ ಬಿಟ್ಟಿದ್ದ. ಈ ರೀತಿಯಾಗಿದೆ. ಇದನ್ನು ಯಾರೂ ಕೂಡ ಊಹಿಸಿರಲಿಲ್ಲ. 34 ಸಾವಿರ ಸೀಟುಗಳ ಸಾಮರ್ಥ್ಯ ಇರುವ ಸ್ಟೇಡಿಯಂಗೆ 3 ಲಕ್ಷ ಜನ ಬಂದಿದ್ದರು ಎಂದು ಗೃಹ ಸಚಿವ ಮಾಹಿತಿ ನೀಡಿದರು.
ಬೆಳಗ್ಗೆ 9 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಮೆಟ್ರೋ ನೀಡಿರುವ ಮಾಹಿತಿ ಪ್ರಕಾರ 8.7 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ತನಿಖೆಯ ವರದಿ ಬರುವವರೆಗೂ ಏನನ್ನು ಹೇಳುವುದಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಘಟನೆ ನಡೆದ ಸ್ಥಳ ಪರಿಶೀಲನೆ ಮಾಡುತ್ತೇನೆ. ಆರ್‌ಸಿಬಿ, ಕೆಎಸ್‌ಸಿಎ ಅವರೊಂದಿಗೆ ಸಭೆ ಮಾಡುತ್ತೇನೆ. ತಾಂತ್ರಿಕವಾಗಿ ಏನೇ ಇದ್ದರು ಸಹ ಡಿಜಿಪಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರು ನೋಡಿಕೊಳ್ಳುತ್ತಾರೆ ಎಂದು ಡಾ.ಜಿ ಪರಮೇಶ್ವರ್ ತಿಳಿಸಿದರು.