ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಮುಂಗಾರು ಮಳೆ ಉತ್ತಮ ಆರಂಭವಾಗಿದ್ದು, ರೈತರು ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದಾರೆ. ಆದ್ದರಿಂದ ವರ್ತಕರು ರೈತರಿಗೆ ಬೇಕಾದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಾಕಷ್ಟು ದಾಸ್ತಾನಿದೆ. ಆದರೂ ಕೃತಕ ಅಭಾವ ಸೃಷ್ಠಿಸಿ, ಕಾಳ ಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ರೈತರು ಡಿಎಪಿ ಗೊಬ್ಬರದ ಬದಲಾಗಿ ಗಂಧಕಯುಕ್ತ ಗೊಬ್ಬರ ಬಳಸಿದರೆ ಉತ್ತಮ ಇಳುವರಿ ಕಾಣಬಹುದು. ರೈತರು ಸಹ ಉತ್ತಮ ಗುಣಮಟ್ಟದ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿಯೇ ಖರೀದಿಸಬೇಕು.
ಉತ್ಪನ್ನಗಳನ್ನು ಖರೀದಿಸಿದ ರಶೀದಿಗಳನ್ನು ಬೆಳೆ ಕಟಾವು ಮಾಡುವವರೆಗೂ ಜಾಗೃತವಾಗಿ ಇಟ್ಟುಕೊಂಡಿರಬೇಕು. ಬೀಜ ಗೊಬ್ಬರಗಳಲ್ಲಿ ಲೊಪದೋಷಗಳು ಕಂಡುಬಂದಲ್ಲಿ ಸಂಬಂದಪಟ್ಟವರ ಮೇಲೆ ಕ್ರಮಕೈಗೊಂಡು ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಜೂನ್ 5 ರಿಂದ ಜಿಲ್ಲಾಧಿಕಾರಿಗಳ ಕಚೇರಿ ಇನ್ನೂ ಪ್ಲಾಸ್ಟಿಕ್ ಮುಕ್ತ :
ಮುಂಬರುವ ಜೂನ್ 5 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಿ ಪ್ಲಾಸ್ಟಿಕ್ ಮುಕ್ತ ಕಚೇರಿ ಎಂದು ಘೋಷಿಸಲಾಗುವುದು. ಜಿಲ್ಲೆಯ ವ್ಯಾಪ್ತಿಯಲ್ಲಿನ ಶಾಲಾ ಕಾಲೇಜು ವ್ಯಾಪ್ತಿಯ ಸು.100 ಮೀ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಇನ್ನಿತರೆ ತ್ಯಾಜ್ಯವನ್ನು ಸ್ವಚ್ಚಗೊಳಿಸಿ ನಗರಸಭೆಗೆ ನೀಡಲಿದ್ದಾರೆ. ಅಂಗಡಿ ಮುಂಗಟ್ಟುಗಳಲ್ಲಿ ಮುಂತಾದೆಡೆ ಪ್ಲಾಸ್ಟಿಕ್ ಮಾರಾಟ ಅಥವಾ ಬಳಕೆ ಮಾಡುವುದು ಕಂಡುಬಂದಲ್ಲಿ ಅಧಿಕ ದಂಡ ವಿಧಿಸುವುದಲ್ಲದೇ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.