ತಲೆ ಎತ್ತಿದ ಡ್ರಗ್ಸ್ ಜಾಲ, ನಶೆ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ-ಎಸ್ಪಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಡ್ರಗ್ಸ್ ಜಾಲ ಎಲ್ಲಾ ಕಡೆ ವ್ಯಾಪಿಸಿದ್ದು
, ಚಿತ್ರದುರ್ಗ ಜಿಲ್ಲೆಯನ್ನು ನಶೆಮುಕ್ತವಾಗಿಸಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸುವಂತೆ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ಕುಮಾರ್ ಬಂಡಾರು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಿ.ಜಿ.ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ೭೫ ನೇ ನಾಗರೀಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

- Advertisement - 

ನಶೆ ಮುಕ್ತ ಕರ್ನಾಟಕ ಆಪ್ ಡೌನ್‌ಲೋಡ್ ಮಾಡಿಕೊಂಡು ಎಲ್ಲೆಲ್ಲಿ ಡ್ರಗ್ಸ್ ಮಾರಾಟ ಸೇವನೆಯಾಗುತ್ತಿದೆ ಎಂಬ ಸುಳಿವು ಸಿಕ್ಕರೆ ನಮಗೆ ಮಾಹಿತಿ ಕೊಡಿ ನಿಮ್ಮ ಹೆಸರು ವಿಳಾಸವನ್ನು ಗೌಪ್ಯವಾಗಿಡಲಾಗುವುದು. ಇಲಾಖೆಯಲ್ಲಿ ಸಿಬ್ಬಂದಿಗಳ ಕೊರೆತೆಯಿರುವುದರಿಂದ ಜನಸಾಮಾನ್ಯರು ಪೊಲೀಸ್ ಇಲಾಖೆಗೆ ಸಹಕರಿಸಿದಾಗ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಹೇಳಿದರು.

ನಾಗರೀಕ ಬಂದೂಕು ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ಶಿಸ್ತು, ಸಮಯ ಪ್ರಜ್ಞೆ ರೂಢಿಸಿಕೊಳ್ಳಲು ಸಹಕಾರಿಯಾಗಲಿದೆ. ಪ್ರತಿ ನಾಗರೀಕನು ಕಮ್ಯುನಿಟಿ ಪೊಲೀಸ್ ಆಗಬೇಕು. ದಿನನಿತ್ಯ ಬೆಳಿಗ್ಗೆ ಎದ್ದು ವ್ಯಾಯಾಮ, ಯೋಗ, ಧ್ಯಾನ, ವಾಯುವಿಹಾರ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ. ಜಿಲ್ಲೆಯ ಐದು ನೂರು ಯುವಕ-ಯುವತಿಯರಿಗೆ ಇದೇ ತಿಂಗಳ ೨೬ ನೇ ತಾರೀಖಿನಂದು ಫಿಟ್ನೆಸ್ ಚಾಲೆಂಜ್ ಸ್ಪರ್ಧೆ ಏರ್ಪಡಿಸಿ ೫೦ ಮಂದಿಯನ್ನು ಆಯ್ಕೆ ಮಾಡಿ ವಿಜೇತರಿಗೆ ಎರಡು ಸಾವಿರ ರೂ. ನಗದು ಬಹುಮಾನ, ಸರ್ಟಿಫಿಕೇಟ್‌ಗಳನ್ನು ನೀಡಲಾಗುವುದೆಂದರು.

- Advertisement - 

ಸೈಬರ್ ಕ್ರೈಂಗಳು ಜಾಸ್ತಿಯಾಗುತ್ತಿದ್ದು, ಸಹಾಯಕ್ಕಾಗಿ ೧೯೩೦, ಹೆಲ್ಪ್‌ಲೈನ್ ನಂ. ೧೧೨ ಕ್ಕೆ ಸಂಪರ್ಕಿಸಬಹುದೆಂದು ತಿಳಿಸಿದರು.

ಹೆಚ್ಚುವರಿ ರಕ್ಷಣಾಧಿಕಾರಿ ಡಾ.ಶಿವಕುಮಾರ್ ಆರ್. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ. ಜೆ.ಶ್ರೀನಿವಾಸ್, ನಾಗರೀಕ ಬಂದೂಕು ತರಬೇತಿ ಶಿಬಿರದ ಅಧ್ಯಕ್ಷ ಎಂ.ಎಂ.ಮೊಹಮದ್ ಆಲಿ ಇವರುಗಳು ವೇದಿಕೆಯಲ್ಲಿದ್ದರು. ಪತ್ರಕರ್ತ ಮಾಲತೇಶ್ ಅರಸ್ ಸ್ವಾಗತಿಸಿದರು. ಜಾನಪದ ಹಾಡುಗಾರ ಹರೀಶ್ ನಿರೂಪಿಸಿದರು.

ರೈಫಲ್ ಶೂಟಿಂಗ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ ರಾಜೇಶ್ ಮಧುರಿ, ದ್ವಿತೀಯ ಸ್ಥಾನ ಗಳಿಸಿರುವ ಎನ್.ಬಿ.ಬೋರಣ್ಣ, ತೃತೀಯ ಸ್ಥಾನ ಪಡೆದಿರುವ ಪುನೀತ್ ಬಿ. ಇವರುಗಳಿಗೆ ಬಹುಮಾನ ಹಾಗೂ ಸರ್ಟಿಫಿಕೇಟ್‌ಗಳನ್ನು ನೀಡಲಾಯಿತು. ಮಹಿಳಾ ವಿಭಾಗದಿಂದ ಭಾರತಿ ಪ್ರಥಮ ಸ್ಥಾನ ಪಡೆದಿದ್ದಾರೆ.

 

 

Share This Article
error: Content is protected !!
";