ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ 2025-26 ನೇ ಸಾಲಿನಲ್ಲಿ ಪತ್ರಕರ್ತರ ಕಲ್ಯಾಣಕ್ಕೆ ವಿಶೇಷ ಕಾರ್ಯಕ್ರಮಗಳನ್ನು ಕ್ರಿಯಾ ಯೋಜನೆಯಲ್ಲಿ ರೂಪಿಸಲಾಗುವುದೆಂದು ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ತಿಳಿಸಿದರು.
ಅವರು ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ 2024-25ನೇ ಸಾಲಿನ ಲೆಕ್ಕ ಪತ್ರ ಮಂಡನೆ, 2025-26 ನೇ ಸಾಲಿನ ಕ್ರಿಯಾ ಯೋಜನೆ ಹಾಗೂ 2023-24, 2024-25ನೇ ಸಾಲಿನ ಎಸ್‍ಸಿ ಎಸ್‍ಪಿ/ಟಿಎಸ್‍ಪಿ ಉಪಸಮಿತಿ ಆಯ್ಕೆ ಕುರಿತಾದ ಚರ್ಚೆ ನಡೆಸಲು ಹಮ್ಮಿಕೊಳ್ಳಲಾದ ಸಭೆಯಲ್ಲಿ ಈ ವಿಷಯ ತಿಳಿಸಿದರು.
2024-25 ನೇ ಸಾಲಿನಲ್ಲಿ ಅಕಾಡೆಮಿಯಲ್ಲಿ ವಿವಿಧ ಯೋಜನೆ, ಸಿಬ್ಬಂದಿ ವೇತನ ಇತ್ಯಾದಿಗೆ 2,50,54,775 ರೂ ಗಳು ಖರ್ಚಾಗಿರುತ್ತದೆ. ಎಸ್ಸಿಪಿ / ಟಿಎಸ್‍ಪಿ ಯೋಜನೆಯಡಿ 20 ಪರಿಶಿಷ್ಟ ಜಾತಿ ಹಾಗೂ 8 ಪರಿಶಿಷ್ಟ ಪಂಗಡದ ಸಂಪಾದಕರು/ ವರದಿಗಾರರಿಗೆ ಮೊಜೊ ಕಿಟ್ (ಮೊಬೈಲ್ ಹಾಗೂ ಮೊಬೈಲ್ ಸ್ಟಾಂಡ್) ನೀಡಲಾಗಿದೆ.
ಅಲ್ಲದೆ ಪತ್ರಕರ್ತರಿಗ ತರಬೇತಿ, ವಿವಿಧ ಜಿಲ್ಲೆಗಳಲ್ಲಿ ವಿಚಾರ ಸಂಕಿರಣ ಆಯೋಜನೆ, ಪತ್ರಕರ್ತರಿಗೆ ವಿವಿಧ ದತ್ತಿ, ವಾರ್ಷಿಕ ಪ್ರಶಸ್ತಿಗಳನ್ನು ನೀಡಿಕೆ ಮುಂತಾದ ಕಾರ್ಯಕ್ರಮಗಳನ್ನು ಅಕಾಡೆಮಿ ಹಮ್ಮಿಕೊಂಡು ಯಶಸ್ವಿಯಾಗಿದೆ ಎಂದರು.
2025-26ನೇ ಸಾಲಿನಲ್ಲಿ ಒಟ್ಟು 2,16,49,000 ರೂ. ಗಳ ಕ್ರಿಯಾ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ವಿವಿಧ ಕಾರ್ಯಕ್ರಮಗಳನ್ನು ಪತ್ರಕರ್ತರಿಗಾಗಿ ಹಮ್ಮಿಕೊಳ್ಳಲಾಗುವುದು. ಪರಿಶಿಷ್ಟ ಜಾತಿ, ಪಂಗಡದವರಿಗೆ, ಗ್ರಾಮೀಣ ಪತ್ರಕರ್ತರಿಗೆ, ಮಹಿಳೆಯರಿಗೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುವುದೆಂದರು.
ಸಭೆಯಲ್ಲಿ ಕರ್ನಾಟಕ ಕಾರ್ಯನಿರಿತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ.ಎಂ ಸೇರಿಂದತೆ ಅಕಾಡೆಮಿಯ ಸದಸ್ಯರು ಭಾಗವಹಿಸಿದ್ದರು.