ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಸಂಭವಿಸಿರುವ ಎರಡು ಭೀಕರ ಅಪಘಾತಗಳಲ್ಲಿ 14 ಜನ ಸಾವನ್ನಪ್ಪಿರುವ ವಾರ್ತೆ ಕೇಳಿ ನನಗೆ ತೀವ್ರ ಆಘಾತ ಉಂಟಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿಯ ಅರೆಬೈಲ್ ಬಳಿ ಸಂಭವಿಸಿದ ಅಪಘಾತದಲ್ಲಿ 10 ಜನರು ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ಬಳಿ ರಸ್ತೆ ದುರಂತದಲ್ಲಿ ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ದುರ್ಮರಣಕ್ಕೆ ತುತ್ತಾಗಿರುವುದು ನನಗೆ ಅತೀವ ನೋವುಂಟು ಮಾಡಿದೆ ಎಂದು ಕುಮಾರಸ್ವಾಮಿ ಕಂಬನಿ ಮಿಡಿದ್ದಾರೆ.
ಮೃತರ ಆತ್ಮಗಳಿಗೆ ಚಿರಶಾಂತಿ ಸಿಗಲಿ, ದುಃಖತಪ್ತ ಕುಟುಂಬಗಳಿಗೆ ತಮ್ಮವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಕುಮಾರಸ್ವಾಮಿ ಅವರು ಪ್ರಾರ್ಥಿಸಿದ್ದಾರೆ.
ಅಸಮರ್ಪಕ ರಸ್ತೆ ಮೂಲಸೌಕರ್ಯ, ವಾಹನಗಳ ಆತುರದ ಚಾಲನೆ, ನಿದ್ದೆಗಣ್ಣಿನಲ್ಲಿ ವಾಹನ ಚಾಲನೆ, ಸಂಚಾರ ನಿಯಮಗಳ ಉಲ್ಲಂಘನೆ ಇತ್ಯಾದಿ ಕಾರಣಗಳು ಅಪಘಾತಗಳಿಗೆ ಕಾರಣವಾಗುತ್ತಿವೆ.
ಈ ಬಗ್ಗೆ ಅಧಿಕಾರಿಗಳು ಹೆಚ್ಚು ಗಮನ ಕೊಟ್ಟು ಅಮೂಲ್ಯ ಜೀವಗಳ ಹರಣ ತಪ್ಪಿಸಬೇಕು ಎಂದು ಕೇಂದ್ರ ಸಚಿವರು ತಾಕೀತು ಮಾಡಿದ್ದಾರೆ.