ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರಾಟೆ ಸೇರಿದಂತೆ ಯಾವುದೇ ಕ್ರೀಡೆಗಳು ದೈಹಿಕ ಕೌಶಲ್ಯಗಳೊಂದಿಗೆ ಮನೋಸ್ಥೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿಸುತ್ತವೆ ಆದ್ದರಿಂದ ಮಕ್ಕಳು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸುನೀತಾ ನರ್ಸಿಂಗ್ ಹೋಂನ ಸ್ತ್ರೀರೋಗ ತಜ್ಞೆ ಡಾ.ಸೌಮ್ಯ ಹೇಳಿದರು.
ಚಿತ್ರದುರ್ಗ ನಗರದ ಸರಸ್ವತಿ ಕಾನೂನು ಕಾಲೇಜ್ ನಲ್ಲಿ ಸರಸ್ವತಿ ಟೇಕ್ವಾಂಡೋ ಅಕಾಡೆಮಿ ಮತ್ತು ರೈಡರ್ಸ್ ಟೇಕ್ವಾಂಡೋ ಅಕಾಡೆಮಿ ಇವರ ವತಿಯಿಂದ ಆಯೋಜಿಸಿದ್ದ ಸರಸ್ವತಿ ಕಪ್-2025 ಅಂಗವಾಗಿ 2ನೇ ಜಿಲ್ಲಾ ಮಟ್ಟದ ಮುಕ್ತ ಟೇಕ್ವಾಂಡೋ ಪಂದ್ಯಾವಳಿ ಉದ್ಘಾಟಿಸಿ ಮತ್ತು ವಿಜೇತರಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಒತ್ತಡ ರಹಿತ ಜೀವನಕ್ಕೆ ಕ್ರೀಡೆ ಅತ್ಯಂತ ಪರಿಣಾಮಕಾರಿಯಾಗಿದೆ. ಕರಾಟೆ ಕೂಡಾ ಒಂದು ಕ್ರೀಡೆಯಾಗಿದ್ದು ಇದು ಆತ್ಮ ರಕ್ಷಣೆ ಮಾಡುವುದರ ಜೊತೆಗೆ ಯಾವುದೇ ಪರಿಸ್ಥಿತಿಯಲ್ಲಿ ತನ್ನನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಕರಾಟೆ ಅಭ್ಯಾಸವು ವಿಪತ್ಕಾಲದಲ್ಲಿ ತಕ್ಷಣ ಸ್ಪಂದಿಸುವ ಸಾಮರ್ಥ್ಯ ಹೆಚ್ಚಿಸುತ್ತದೆ ಎಂದು ಡಾ.ಸೌಮ್ಯ ಅಭಿಪ್ರಾಯಪಟ್ಟರು.

ಸರಸ್ವತಿ ಲಾ ಕಾಲೇಜ್ ಪ್ರಾಧ್ಯಾಪಕ ಎನ್.ಡಿ ಗೌಡ, ಪಶುಸಂಗೋಪನಾ ಇಲಾಖೆಯ ವಿಶ್ರಾಂತ ಸಹಾಯಕ ನಿರ್ದೇಶಕ ಡಾ.ರೆಹಮತ್ ವುಲ್ಲಾ, ಡಾನ್ ಬಾಸ್ಕೋ ಐಸಿಎಸ್ಇ ಶಾಲೆಯ ಬೋಧಕೇತರ ಸಿಬ್ಬಂದಿ ನಾಗಭೂಷಣ ಬಿ ಟಿ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಟೇಕ್ವಾಂಡೋ ಕ್ರೀಡಾ ಸಂಸ್ಥೆಯ ತರಬೇತುದಾರರಾದ ಸಿ.ಆರ್ ಕನಕದಾಸ್, ಇಸ್ಮಾಯಿಲ್, ಶಫಿವುಲ್ಲಾ, ವಿನಯ್ ಕುಮಾರ್.ಎಲ್ ಉಪಸ್ಥಿತರಿದ್ದರು.
ಟೇಕ್ವಾಂಡೋ ಸಂಸ್ಥೆ ಸುಮಾರು 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಪ್ರಸ್ತುತ ಚಿತ್ರದುರ್ಗದಲ್ಲಿ 3-ಶಾಖೆಗಳನ್ನು ಒಳಗೊಂಡಿದೆ. ನಗರದ ಸರಸ್ವತಿ ಲಾ ಕಾಲೇಜ್ ಕೆಳಗೋಟೆ, ವೆಸ್ಟರ್ನ್ ಹಿಲ್ಸ್ ಪಬ್ಲಿಕ್ ಸ್ಕೂಲ್ ಅಗಸನಕಲ್ಲು ಮತ್ತು ಚಂದ್ರವಳ್ಳಿ ರಸ್ತೆಯ ಜ್ಞಾನಭಾರತಿ ಶಾಲೆ ಕಾರ್ಯ ನಿರ್ವಹಿಸುತ್ತಿದ್ದು ಸಂಸ್ಥೆಯ ಮಕ್ಕಳು ಇದುವರೆಗೆ ಜಿಲ್ಲಾ ಮಟ್ಟ,ರಾಜ್ಯಮಟ್ಟ, ರಾಷ್ಟ್ರ ಮಟ್ಟ, ವಿಶ್ವವಿದ್ಯಾಲಯದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ನೂರಾರು ಪದಕಗಳಿಸಿ ಕೀರ್ತಿ ತಂದಿದ್ದಾರೆ.

