ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಶ್ರೀಆಂಜನೇಯಸ್ವಾಮಿಯು ಶ್ರೀರಾಮನ ಮೇಲಿಟ್ಟಿದ್ದ ಶುದ್ಧಭಕ್ತಿ, ನಿಷ್ಕಾಮ ಸೇವೆ,ಸ್ವಾಮಿನಿಷ್ಠೆ , ಪೂರ್ಣ ಶರಣಾಗತಿ ಭಾವದ ಘಟನೆಗಳು ಅತ್ಯಂತ ಸ್ಮರಣೀಯವಾದವು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥೆ ಎಚ್ ಲಕ್ಷ್ಮೀದೇವಮ್ಮ ಅಭಿಪ್ರಾಯಪಟ್ಟರು.
ನಗರದ ಗಾಂಧಿನಗರದ ಸದ್ಭಕ್ತರಾದ ಅಂಬಿಕಾ ಪರಮೇಶ್ವರ್ ಅವರ ನಿವಾಸದಲ್ಲಿ “ಶ್ರೀಹನುಮ ಜಯಂತಿ”ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅವರು “ಶ್ರೀಆಂಜನೇಯಸ್ವಾಮಿ”ಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಶ್ರೀರಾಮಚಂದ್ರ ಮತ್ತು ಸೀತಾಮಾತೆ ಆಂಜನೇಯನಿಗೆ ನೀಡುತ್ತಿದ್ದ ಪ್ರಾಮುಖ್ಯತೆ ಬಹಳ ವಿಶೇಷವಾದದ್ದು ಹನುಮಂತನ ರೋಮರೋಮಗಳಲ್ಲಿ ಶ್ರೀರಾಮ ನಾಮದ ಸ್ಮರಣೆಯೇ ತುಂಬಿತ್ತು. ರಾಮ ಎಂಬುವ ಎರಡಕ್ಷರದ ಮಹಿಮೆ ಅನಂತವಾದದ್ದು ಎಂದರು.
ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ವಾಸವಿ ವನಿತಾ ಸಂಘದ ಸಂಧ್ಯಾ ವೆಂಕಟಾಚಲಂ, ವಾಸವಿ ಸತ್ಯನಾರಾಯಣ, ಶ್ರೀರಾಧಾ ಮಾಧವ ಭಜನಾ ಮಂಡಳಿಯ ಪರಿಮಳಾ ನಾಗರಾಜ್, ಕದಳಿ ವಚನ ಮಂಡಳಿಯ ಗೀತಾ ಪ್ರಕಾಶ್, ಅಂಬಿಕಾ ಪರಮೇಶ್ವರ್, ವಿಶಾಲಮ್ಮ, ಸೌಮ್ಯ, ಶೃತಿ, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಎಂ ಗೀತಾ ನಾಗರಾಜ್ ಅವರಿಂದ ವಿಶೇಷ ಭಜನಾ ಕಾರ್ಯಕ್ರಮ, ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.

