ವಿಶ್ವ ಒಕ್ಕಲಿಗರ ಮಠಕ್ಕೆ ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮೀಜಿ ಉತ್ತರಾಧಿಕಾರಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ ನೂತನ ಪೀಠಾಧಿಪತಿಯಾಗಿ ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮೀಜಿ ಅವರು ನೂರಾರು ಸ್ವಾಮೀಜಿಗಳ ಸಮ್ಮುಖದಲ್ಲಿ ಸಕಲ ವಿಧಿ ವಿಧಾನಗಳೊಂದಿಗೆ ಭಾನುವಾರ ಜವಾಬ್ದಾರಿ ವಹಿಸಿಕೊಂಡರು.

ಮೈಸೂರು ರಸ್ತೆಯ ಕೆಂಗೇರಿಯಲ್ಲಿರುವ ಮಠದ ಆವರಣದಲ್ಲಿ ಪೋಷಕರೊಂದಿಗಿನ ಸಂಬಂಧ ತ್ಯಾಗ, ಸನ್ಯಾಸತ್ವ ದೀಕ್ಷೆ ಸೇರಿದಂತೆ ಸಕಲ ವಿಧಿ ವಿಧಾನಗಳು ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆ ವರೆಗೆ ನಡೆದವು. ಭಾನುವಾರ ಬೆಳಗ್ಗೆ ನಾಡಿನ ಗಣ್ಯ ಮಠಾಧೀಶರು, ಸಾವಿರಾರು ಜನರ ಸಮ್ಮುಖದಲ್ಲಿ ಡಾ.ಎಚ್.ಎಲ್.ನಾಗರಾಜ್ ಅವರು ನಿಶ್ಚಲಾನಂದನಾಥ ಮಹಾಸ್ವಾಮೀಜಿ ಆಗಿ ಪೀಠವನ್ನು ಅಲಂಕರಿಸಿದರು.

ಉತ್ತರಾಧಿಕಾರ ಮಹೋತ್ಸವದಲ್ಲಿ ಮಾತನಾಡಿ ಆದಿಚುಂಚನಗಿರಿ ಮಠದ ಡಾ. ನಿರ್ಮಾಲನಂದನಾಥ ಸ್ವಾಮೀಜಿ, ನಾಗರಾಜ್ ಅವರು ನಿಶ್ಚಲಾನಂದನಾಥರಾಗಿ ಬದಲಾಗುವ ಸಂದರ್ಭದಲ್ಲಿ ಇಷ್ಟು ಜನ ಸೇರಿರುವುದು ಖುಷಿಯ ವಿಚಾರ. ನಾವೆಲ್ಲಾ ಒಂದೇ ಗುರು ಪರಂಪರೆಯವರು. ಕಾಲದ ಸಂದರ್ಭ ಇಂದು ನಿಶ್ಚಲಾನಂದನಾಥ  ಸ್ವಾಮಿಗಳು ಕಂಕಣ ತೊಟ್ಟು ಸಮಾಜದ ಅಭಿವೃದ್ಧಿಗೆ ಪಟ ತೊಟ್ಟಿದ್ದಾರೆ. ಚಂದ್ರಶೇಖರನಾಥ ಸ್ವಾಮೀಜಿಯವರದ್ದು ನಾಲ್ಕು ದಶಕಗಳ ಪರಿಶ್ರಮವಿದೆ.

ಒಕ್ಕಲಿಗರ ಮಹಾ ಸಂಸ್ಥಾನ ನಿನ್ನೆ ಮೊನ್ನೆ ಹುಟ್ಟಿದ್ದಲ್ಲ. ಚಂದ್ರಶೇಖರ ಶ್ರೀಗಳು ಸಮಾಜದಲ್ಲಿ ಸಾಕಷ್ಟು ಬದಲಾವಣೆ ತಂದು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಇನ್ನಷ್ಟು ಎತ್ತರಕ್ಕೆ ಈ ಸಮಾಜವನ್ನ ಕೊಂಡೊಯ್ಯಲು ನಾಗರಾಜ್ ಅವರು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಹಾಲು ಜೇನಿನ‌ರೀತಿಯಲ್ಲಿ ಬೆರೆತು ಸಂಸ್ಥಾನಗಳನ್ನು ನಡೆಸಿಕೊಂಡು ಹೋಗೋಣಾ. ಎರಡು ಮಠಗಳ ನಡುವೆ ಯಾವುದೇ ಸಮಸ್ಯೆ ಇಲ್ಲ. ಪೂಜ್ಯರು ಹೇಳಿದಂತೆ ಒಂದೇ ಗುರು, ಒಂದೇ ಸುಮುದಾಯ, ಒಂದೇ ತಾಯಿಯ ಮಕ್ಕಳಂತೆ ಮುಂದೆಯೂ ಕೂಡ ಯಾವುದೇ ರೀತಿ ಸಮಸ್ಯೆಗಳು ಬಾರದಂತೆ ನಡೆಸಿಕೊಂಡು ಹೋಗಬೇಕು ಎಂದರು.

ಶ್ರೀಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿ, ನನಗೆ 80 ವರ್ಷ ಆಗಿರುವುದರಿಂದ ಆರೋಗ್ಯ ಕ್ಷೀಣಿಸುತ್ತಾ ಇದೆ. ಹೀಗಾಗಿ, ಮುಂದಿನ ಉತ್ತರಾಧಿಕಾರಿ ಮಾಡಬೇಕು ಎನ್ನುವ ತೀರ್ಮಾನ ತೆಗೆದುಕೊಂಡೆವು. ಅದರಂತೆ ನಾವು ಎಚ್.ಎಂ ನಾಗರಾಜ್ ಅವರಿಗೆ ಇಂದು ಪಟ್ಟಾಭಿಷೇಕ ಮಾಡಿದ್ದೇವೆ. ನಾಡಿನ ಎಲ್ಲಾ ಶ್ರೀಗಳು ಬಂದಿದ್ದಾರೆ. ಬಹಳ ಸಂತೋಷವಾಗಿದೆ. ನಾಗಾರಾಜು ಅವರು ಇಡೀ ಕರ್ನಾಟಕಕ್ಕೆ ಪರಿಚಯವಾಗಬೇಕು ಅಂತ ಎಲ್ಲರನ್ನು ಕೇಳಿಕೊಂಡೆವು. ಹಾಗೇ ಎಲ್ಲರೂ ಬಂದು ಶುಭಕೋರಿದ್ದು ಬಹಳ ಸಂತೋಷವಾಗಿದೆ. ಬಡ ಜನರು ಎಂಜಿನಿಯರಿಂಗ್, ಮೆಡಿಕಲ್ ವಿದ್ಯಾಭ್ಯಾಸ ಮಾಡಲು ಕಾಲೇಜು ನಿರ್ಮಾಣದ ಸಂಕಲ್ಪ ಮಾಡಬೇಕಾಗಿದೆ. ನಿಮ್ಮೆಲ್ಲರ ಸಹಕಾರ ಬೇಕು ಎಂದರು.

ಮನುಷ್ಯನಾದವನು ಇಷ್ಟದೇವರನ್ನು ಪ್ರಾರ್ಥಿಸಬೇಕು. ತಂದೆ-ತಾಯಿ, ಮಕ್ಕಳನ್ನು ಹತೋಟಿಯಲ್ಲಿ ಬೆಳೆಸಬೇಕು. ದ್ವೇಷ ಅಸೂಯೆ ಬಿಡಬೇಕು. ದುಶ್ಚಟ ಬಿಡಬೇಕು. ಇವು ಮನುಷ್ಯನ ಮೂಲಮಂತ್ರವಾಗಬೇಕು. ಹೊಸ ಶ್ರೀಗಳು ಸ್ವಾರ್ಥಿಯಾಗಬಾರದು, ಪಕ್ಷಪಾತಿಯಾಗಬಾರದು, ಸುಳ್ಳು ಹೇಳಬಾರದು. ಜನರ ಅನೂಕೂಲಕ್ಕೆ ಶ್ರಮಿಸಬೇಕು ಎಂದು ಸ್ವಾಮೀಜಿ ಕರೆ ನೀಡಿದರು.

ನೂತನ ಪೀಠಾಧಿಪತಿ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ನಾನು ಇಂದು ಸಮಾಜಕ್ಕೆ ಅರ್ಪಣೆಯಾಗಲು ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಹಾಗೂ ಆದಿಚುಂಚನಗಿರಿ ಶ್ರೀಗಳು ಕಾರಣ ಎಂದರು.
ನಾನು ವೈಯಕ್ತಿಕವಾಗಿ ಬುದ್ದ, ಬಸವೇಶ್ವರ, ಗಾಂಧಿಜೀ, ಸ್ವಾಮಿ ವಿವೇಕಾನಂದರ ತತ್ವವನ್ನ ಅನುಸರಿಸಿದ್ದೇನೆ. ಸಮಾಜ ಸೇವೆಯೇ ವೃತ್ತಿ, ಪ್ರವೃತ್ತಿ, ಉಸಿರಾಗಿಸಿಕೊಂಡಿದ್ದೇನೆ. ನಿಷ್ಠೆಯ ಅಧಿಕಾರಿಗೆ ಮುಕ್ತ ಅವಕಾಶ ಇದೆ ಎನ್ನುವುದಕ್ಕೆ ಇದೇ ಉದಾಹರಣೆ. ಮಠದ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕು ಎಂದರು.

ನಾಡು ಕಂಡ ಮುತ್ಸದಿ ರಾಜಕಾರಣಿ, ಮಣ್ಣಿನ ಮಗ ಮಾಜಿ ಪ್ರಧಾನಮಂತ್ರಿ ನಮ್ಮೆಲ್ಲರ ಕಣ್ಮಣಿ ದೇವೆಗೌಡರ ಆಶೀರ್ವಾದವು ನಮಗೆ ಸಿಕ್ಕಿತು. ಪರಮಪೂಜ್ಯ ಚಂದ್ರಶೇಖರ ಶ್ರೀಗಳು ಉತ್ತಮ ಕಾರ್ಯಗಳೊಂದಿಗೆ ಉನ್ನತ ಸ್ಥಾನಕ್ಕೆ ಏರಲು ದೇವೇಗೌಡರೇ ಕಾರಣ. ಅವರ ಆಶೀರ್ವಾದ ಮಠದ ಮೇಲೆ ಸದಾ ಇರಲಿ. ನಾನು ಅಧಿಕಾರದಲ್ಲಿದ್ದಾಗ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದೆ. ಅವರು ಕೂಡ ನಮಗೆ ಹಾರೈಸಿದ್ದರು. ಅವರನ್ನು ಕೂಡ ಇಂದು ನಾನು ಸ್ಮರೀಸುತ್ತೇನೆ ಎಂದು ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ಸಂಸ್ಥಾನ ಮಠಕ್ಕೆ ಹಲವರ ತ್ಯಾಗ ಕೊಡುಗೆ ಇದೆ. ನಾನು ಎಲ್ಲವನ್ನು ತ್ಯಾಗ ಮಾಡಿ ಬಂದಿದ್ದೇನೆ. ಅನೇಕರು, ಹಲವು ರೀತಿಯಾಗಿ ಹೇಳಿದರು. ಆದರೆ, ಭಾರತೀಯ ಧರ್ಮ, ಸಮಾಜದ ಕಾರ್ಯಕ್ಕೆ ನನ್ನನ್ನು ನಾನು ಸಮರ್ಪಣೆ ಮಾಡಿಕೊಳ್ಳುತ್ತಿದ್ದೇನೆ. ನಿರ್ಮಲಾನಂದನಾಥ ಶ್ರೀಗಳು ಕೂಡ ನನಗೆ ಸಲಹೆ ನೀಡಿದ್ದಾರೆ. ಹಿಂಜರಿಕೆ ಇಲ್ಲದೆ ನಾವಿಬ್ಬರೂ ಸಮಾಜವನ್ನು ಮುನ್ನಡೆಸೋಣಾ ಎಂದಿದ್ದಾರೆ ಎಂದು ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟಾಧಿಕಾರ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಶ್ರೀಗಳು ಬರುವುದಿಲ್ಲ ಎಂದು ಹಲವರು ಹೇಳಿದ್ದರು. ಆದರೆ, ಇವತ್ತು ನನ್ನ ಪಕ್ಕ ಕುಳಿತು ನನ್ನ ಶಕ್ತಿಯಾಗಿ ನಿಂತಿದ್ದಾರೆ ಎಂದು ಹೇಳಿದರು.

ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಹಾಲಿ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕೆಲಸ ಮಾಡಿದ್ದೇನೆ. ನಾನು ಸರ್ಕಾರಕ್ಕೆ ಸದಾ ಋಣಿ ಆಗಿದ್ದೇನೆ ಎಂದು ಸ್ವಾಮೀಜಿ ಹೇಳಿದರು.
ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡಿ
, ನೂತನ ಪೀಠಾಧಿಪತಿಯವರು ಸಮುದಾಯ, ಸಮಾಜದ ಸೇವೆಯ ಉದ್ದೇಶದೊಂದಿಗೆ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಲಿ ಎಂದು ಶುಭ ಹಾರೈಸಿದರು.

ಪಟ್ಟಾಧಿಕಾರ ಮಹೋತ್ಸವದಲ್ಲಿ ನಿಡುಮಾಮಿಡಿ ಜಗದ್ಗುಗು ಮಠದ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮೀಜಿ, ಬೇಲಿಮಠದ ಶಿವಾನುಭವ ಚರಮೂರ್ತಿ ಮಹಾಸ್ವಾಮೀಜಿ, ನಂಜಾವಧೂತ ಮಹಾಸ್ವಾಮೀಜಿ, ವಿನಯ್ ಗುರೂಜಿ ಸೇರಿದಂತೆ ನಾಡಿನ ವಿವಿಧ ಮಠಗಳ ಪೂಜ್ಯ ಸ್ವಾಮೀಜಿಗಳು ಉಪಸ್ಥಿತರಿದ್ದರು. ನೂತನ ಪೀಠಾಧಿಪತಿಗಳಿಗೆ ಶುಭಾಶೀರ್ವಾದ ಮಾಡಿದರು.

 

 

- Advertisement -  - Advertisement - 
Share This Article
error: Content is protected !!
";