ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲ್ಲೂಕಿನ ಕಸಬಾ ಹೋಬಳಿ ಮರಳೇನಹಳ್ಳಿ ಗ್ರಾಮದಲ್ಲಿ ಶ್ರೀದುರ್ಗಾಪರಮೇಶ್ವರಿ ದೇವಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಸಂಪ್ರೋಕ್ಷಣಾ ಮಹೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನೇರವೇರಿತು.
ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ವೆಂಕಟರಮಣಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಭಾಗವಹಿಸಿದ್ದರು.
ವಿಗ್ರಹ ಪ್ರತಿಷ್ಠಪನಾ ಅಂಗವಾಗಿ ಗಣಪತಿ ಪೂಜೆ, ನಂದಿ ಹೋಮ, ಪುಣ್ಯ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ದುರ್ಗಾ ಹೋಮ ಸೇರಿದಂತೆ ವಿವಿಧ ಪೂಜಾವಿಧಿವಿಧಾನಗಳು ನಡೆದವು.
ಶಾಸಕ ಧೀರಜ್ ಮುನಿರಾಜು ಮಾತನಾಡಿ ಗ್ರಾಮಸ್ಥರು ಒಗ್ಗೂಡಿ ನೂತನ ದೇವಸ್ಥಾನವನ್ನು ನಿರ್ಮಿಸುವ ಮೂಲಕ ಗ್ರಾಮದ ಕಲ್ಯಾಣಕ್ಕೆ ಒತ್ತು ನೀಡಿದ್ದಾರೆ. ದೇವರು ಮತ್ತಷ್ಟು ಸುಖ, ಶಾಂತಿ, ನೆಮ್ಮದಿ ನೀಡುವ ಮೂಲಕ ಎಲ್ಲರ ಆರೋಗ್ಯವನ್ನು ಕಾಪಾಡಲಿ. ಮುಂದಿನ ದಿನಗಳಲ್ಲೂ ಎಲ್ಲರೂ ಒಗ್ಗಟ್ಟಿನಿಂದ ಜೀವನ ನಡೆಸಿ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಮಾತನಾಡಿ ಹಿಂದು ಧರ್ಮದಲ್ಲಿ ವಿವಿಧ ಧಾರ್ಮಿಕ ಆಚರಣೆಗಳಿಗೆ ಮಹತ್ವದ ಅರ್ಥ ಇದೆ. ಎಲ್ಲ ಆಚರಣೆಗಳೂ ವೈಜ್ಞಾನಿಕವಾಗಿರುತ್ತದೆ. ದೇಗುಲಗಳು ನೆಮ್ಮದಿಯ ತಾಣಗಳಾಗಬೇಕು. ನಮ್ಮ ಧರ್ಮದಲ್ಲಿ ತಾಯಿ-ತಂದೆಯನ್ನು ದೇವರಂತೆ ಕಾಣುವ ಆಚಾರವಿದೆ. ಇದನ್ನು ಎಲ್ಲರೂ ಅರಿಯಬೇಕು. ಪಾಲಕರು ಹಾಗೂ ಗುರುಹಿರಿಯರನ್ನು ಗೌರವಿಸುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು. ತಾಲ್ಲೂಕಿಗೆ ಬಂದ ನಂತರ ಹಲವಾರು ದೇವಾಲಯಗಳ ನಿರ್ಮಾಣ ಹಾಗೂ ಜೀರ್ಣೊದ್ದಾರ ಕಾರ್ಯಗಳನ್ನು ದೇವರ ಅನುಗ್ರಹದಿಂದ ಮಾಡಿದ್ದು, ನಿರಂತರ ದೇವತಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಶಕ್ತಿ ಭಗವಂತ ಕರುಣಿಸಿದ್ದಾನೆ, ಮುಂದೆಯೂ ನನ್ನ ಕೈಲಾದ ಸೇವೆಯನ್ನು ಸದಾ ಮಾಡುತ್ತೇನೆ ಎಂದರು.
ನನ್ನ ಬಳಿ ದೇವಾಲಯ ನಿರ್ಮಾಣ ವಿಚಾರವಾಗಿ ಬರುವ ಎಲ್ಲರಿಗೂ ನಾನು ಸದಾ ಹೇಳುತ್ತೇನೆ ಕಲ್ಲು ನನಗೆ ಬಿಡಿ ಅದರ ಕೂಲಿ ನಿಮ್ಮದಿರಲಿ ಎಂದು ಕಾರಣ ಕಲ್ಲು ಕೊಡುವ ಶಕ್ತಿ ದೇವರು ನನಗೆ ನೀಡಿದ್ದಾರೆ ಹಾಗಾಗಿ ತಾಲ್ಲೂಕಿನಲ್ಲಿ ಎಷ್ಟೇ ದೇವಾಲಯದ ನಿರ್ಮಾಣ ಮಾಡಿದರು ಆ ದೇವಾಲಯಕ್ಕೆ ಬೇಕಿರುವ ಕಲ್ಲು ನಾನು ವ್ಯವಸ್ಥೆ ಮಾಡುತ್ತೇನೆ ಎಂದರು.
ಮಾಜಿ ಶಾಸಕ ವೆಂಕಟರಮಣಯ್ಯ ಮಾತನಾಡಿ ಮರಳೇನಹಳ್ಳಿ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಅಚ್ಚುಕಟ್ಟಾಗಿ ಮೂಡಿಬಂದಿದ್ದು, ಗ್ರಾಮದ ಸಮಸ್ತ ಗ್ರಾಮಸ್ಥರಿಗೆ ತಾಯಿ ಶುಭ ಉಂಟುಮಾಡಲಿ ಎಂದು ಹಾರೈಸಿದರು.
ಸ್ಥಳೀಯ ಮುಖಂಡ ಅಂಬರೀಷ್ ಮಾತನಾಡಿ ಗ್ರಾಮಸ್ಥರ ಹಲವು ವರ್ಷಗಳ ಕನಸು ಇಂದು ನೆರವೇರಿದೆ, ಗ್ರಾಮ ದೇವತೆಯ ಪ್ರತಿಷ್ಠಾಪನಾ ಕಾರ್ಯವನ್ನು ಸರ್ವ ಗ್ರಾಮಸ್ಥರು ಒಟ್ಟಾಗಿ ನೆರವೇರಿಸಿದ್ದು, ಈ ಕಾರ್ಯಕ್ಕೆ ತಾಲ್ಲೂಕಿನ ಶಾಸಕರಾದ ಧೀರಜ್ ಮುನಿರಾಜು, ಮಾಜಿ ಶಾಸಕರಾದ ಟಿ. ವೆಂಕಟರಮಣಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಬಿ. ಮುನೇಗೌಡ ಸೇರಿದಂತೆ ಹಲವು ಗಣ್ಯರು ಪಕ್ಷತೀತವಾಗಿ ಕೈಜೋಡಿಸಿದ್ದು ಎಲ್ಲರಿಗೂ ನಮ್ಮ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ, ಅಲ್ಲದೇ ನಿರಂತರ ಶ್ರಮಪಟ್ಟು ದೇವಾಲದ ಸಂಪೂರ್ಣ ಜವಾಬ್ದಾರಿ ಹೊತ್ತ ಸ್ಥಳೀಯ ಗ್ರಾಮಸ್ಥರಿಗೆ ಹಾಗೂ ನಾಗೇಶ್ ಕುಟುಂಬದವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.
ಗ್ರಾಮದ ಮುಖಂಡರಾದ ರಂಗನಾಥ, ಶಿವಣ್ಣ, ನಾಗೇಶ್, ನಾಗರಾಜು, ಗ್ರಾಮ ಪಂಚಾಯತ್ ಸದಸ್ಯ ನೇರಳಘಟ್ಟ ರಂಗನಾಥ, ಅಂಬರೀಶ್ ಸೇರಿದಂತೆ ಮರಳೇನಹಳ್ಳಿ ಹಾಗೂ ಶ್ರೀನಿವಾಸಪುರ ಗ್ರಾಮಸ್ಥರು ಉಪಸ್ಥಿತರಿದ್ದರು.