ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಉಲ್ಲಂಘನೆಯಿಂದ ಗೋವುಗಳ ವಧೆ ಹಾಗೂ ಸಾವಿರಾರು ಗೋವುಗಳ ಅಕ್ರಮ ಸಾಗಾಟವಾಗುತ್ತಿರುವುದನ್ನು ತಡೆಯುವಂತೆ ಶ್ರೀರಾಮ ಸೇನಾ ಕರ್ನಾಟದಿಂದ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಸಂವಿಧಾನಿಕ ಅಧಿಕಾರವನ್ನು ಬಳಸಿ ಗೋಹತ್ಯೆ ನಿಷೇಧ ಕಾಯಿದೆ ಮತ್ತು ಪ್ರಾಣಿ ಕ್ರೌರ್ಯ ನಿಷೇಧ ಕಾಯಿದೆಯನ್ನು ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷೆಯಿಂದ ಗೋಹತ್ಯೆ ಹೆಚ್ಚುತ್ತಿದ್ದು, ಸೂಕ್ತ ತನಿಖೆಗೆ ಕೇಂದ್ರ ಗೃಹ ಸಚಿವಾಲಯಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬೇಕು. ಗೋಸಂರಕ್ಷಣೆಯಲ್ಲಿ ಕಾನೂನುಬದ್ದವಾಗಿ ತೊಡಗಿರುವ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿದ್ದು, ಕೇಸು ದಾಖಲಿಸಿರುವುದನ್ನು ಪರಿಶೀಲಿಸಿ ಹಿಂದಕ್ಕೆ ಪಡೆಯುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ಮಾರ್ಗದರ್ಶನ ನೀಡಬೇಕು.
ರಾಜ್ಯ ಮಟ್ಟದಲ್ಲಿ ವಿಶೇಷ ಗೋರಕ್ಷಣಾ ನಿಯಂತ್ರಣ ದಳ ರಚಿಸಿ ಗೋವುಗಳ ಅಕ್ರಮ ಸಾಗಾಣಿಕೆ ವಿರುದ್ದ ನಿಗಾ ಇಡಬೇಕೆಂದು ಕರ್ನಾಟಕ ರಾಜ್ಯ ದಕ್ಷಿಣ ಪ್ರಾಂತ ರಾಜ್ಯಾಧ್ಯಕ್ಷ ಸುರೇಶ್‌ಬಾಬು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಶ್ರೀರಾಮ ಸೇನಾ ಕರ್ನಾಟಕ ರಾಜ್ಯ ದಕ್ಷಿಣ ಪ್ರಾಂತ ಜಿಲ್ಲಾಧ್ಯಕ್ಷ ಹರೀಶ್ ಟಿ.ಎನ್. ಉಪಾಧ್ಯಕ್ಷ ಎಸ್.ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಟಿ.ಆನಂದ್, ಕಾರ್ಯದರ್ಶಿ ಸಿ.ರಂಗಸ್ವಾಮಿ, ಸಹ ಸಂಘಟನಾ ಕಾರ್ಯದರ್ಶಿ ಯಶವಂತರಾಜ್ ಎಂ.ಆರ್. ಸಹ ಕಾರ್ಯದರ್ಶಿ ಕುಮಾರ್ ಎಂ. ತಾಲ್ಲೂಕು ಅಧ್ಯಕ್ಷ ರಾಘವೇಂದ್ರ ಜೆ.ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

