ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
‘ಕರ್ನಾಟಕದ ಆಡಳಿತ ನಡೆಯುತ್ತಿರುವುದು ವಿಧಾನಸೌಧದಿಂದಲ್ಲ, ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ನಿವಾಸದಿಂದ ಎಂಬುದು ಇದೀಗ ಸ್ಪಷ್ಟವಾಗಿದೆ‘ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.
ದೆಹಲಿಗೆ ಹೋಗಿ ರಾಹುಲ್ ಗಾಂಧಿ ಅವರ ಆದೇಶ ಪಡೆದು ಅಲ್ಲಿಂದಲೇ ನಿರ್ಧಾರಗಳನ್ನು ಪ್ರಕಟಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಅಂಕುಶ ಹಾಕಿದಂತಿರುವ ಹೈಕಮಾಂಡ್ (ಉದಾಹರಣೆಗೆ ಕಾಂತರಾಜು ಆಯೋಗದ ವರದಿ ತಿರಸ್ಕಾರ) ಪಕ್ಷದ ಉಸ್ತುವಾರಿ ಸುರ್ಜೇವಾಲಾ ಅವರನ್ನು ಸರ್ಕಾರದ ಆಡಳಿತವನ್ನು ನಿಯಂತ್ರಿಸುವ ರಾಯಭಾರಿಯನ್ನಾಗಿ ನೇಮಿಸಿರುವುದರ ಸಾಕ್ಷಿಯಾಗಿ ಅವರು ಸರ್ಕಾರಿ ಹಿರಿಯ ಅಧಿಕಾರಿಗಳ ಜೊತೆ ನಿರಂತರ ಸಭೆ ನಡೆಸುತ್ತಿರುವುದೇ ಸಾಕ್ಷಿಯಾಗಿದೆ ಎಂದು ವಿಜಯೇಂದ್ರ ಹೇಳಿದರು.
ಈ ಸಂಬಂಧ ಅನೇಕ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದು ಸಚಿವ ಕೆ.ಎನ್ ರಾಜಣ್ಣ ಅವರು ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಬಹುತೇಕ ಅಸ್ಥಿತ್ವ ಕಳೆದುಕೊಂಡಿರುವ ಭಾರತೀಯ ಕಾಂಗ್ರೆಸ್ ಗೆ ಕರ್ನಾಟಕ ರಾಜ್ಯ ಒಂದೇ ಆಧಾರಸ್ತಂಭವಾಗಿದೆ, ನೆಹರು ಕುಟುಂಬಕ್ಕೆ ATM ಕೇಂದ್ರವಾಗಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವಿನ ಭರವಸೆ ಪಡೆದುಕೊಂಡ ಸಂಕಷ್ಟಿತ ರೋಗಿಗಳ ಚಿಕಿತ್ಸೆಗೂ ಹಣ ಜಮೆ ಆಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುವಷ್ಟರ ಮಟ್ಟಿಗೆ ಸರ್ಕಾರದ ಆರ್ಥಿಕ ಸ್ಥಿತಿ ದಿವಾಳಿಯ ಹಂತ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕ ರಾಜ್ಯದ ಜನತೆಯ ಗೋಳು ಕೇಳುವವರೇ ಇಲ್ಲದಂತಾಗಿದೆ ಎಂದು ವಿಜಯೇಂದ್ರ ತಿಳಿಸಿದರು.
ಆಂತರಿಕ ಕಲಹದಲ್ಲಿ ರಾಜ್ಯದ ಆಡಳಿತ ಯಂತ್ರ ಈಗಾಗಲೇ ನಿಂತ ನೀರಾಗಿದ್ದರೆ, ಸುರ್ಜೇವಾಲ ಅವರು ತಳಕಚ್ಚಿರುವ ಬಾವಿಯಲ್ಲೇ ನೀರು ಸೇದುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ನಡುವೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ನಡುವಿನ ಶೀತಲ ಸಮರ, ದೆಹಲಿಯ ಅವರ ಇಬ್ಬರು ಅತ್ಯಾಪ್ತ ಸಿಬ್ಬಂದಿಗಳ ವರೆಗೂ ವ್ಯಾಪಿಸಿದೆ. ಕರ್ನಾಟಕದ ಆಡಳಿತವನ್ನು ದೇವರೇ ಬಂದು ಸರಿದೂಗಿಸಬೇಕಾದ ಸ್ಥಿತಿ ಬಂದೊದಗಿದೆ ಎಂದು ವಿಜಯೇಂದ್ರ ತಿಳಿಸಿದರು.

