ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕು ವಿ.ವಿ.ಪುರ ಗ್ರಾಮ ಪಂಚಾಯಿತಿಯ ಝಾನ್ಸಿರಾಣಿ ಸಂಜೀವಿನಿ ಮಹಿಳಾ ಗ್ರಾಮ ಪಂಚಾಯಿತಿ ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ಶ್ರೀರಾಮ ಆತ್ಮ ಮಹಿಳಾ ಆಹಾರ ಭದ್ರತಾ ಗುಂಪಿಗೆ ಮಹಿಳಾ ಸಬಲೀಕರಣ ಉದ್ಯಮಶೀಲತೆ ಮತ್ತು ಜೀವನೋಪಾಯ ಅಭಿವೃದ್ಧಿಯಲ್ಲಿ ತೋರಿದ ಶ್ರೇಷ್ಠ ಕಾರ್ಯಕ್ಕಾಗಿ ರಾಜ್ಯ ಮಟ್ಟದ ಉತ್ತಮ ಸ್ವ ಸಹಾಯ ಗುಂಪಿನ ಪ್ರಶಸ್ತಿ ಲಭಿಸಿದೆ.
ಕೌಶಲಾಭಿವೃದ್ಧಿ ಉದ್ಯಮಿಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಈಚೆಗೆ ಬೆಂಗಳೂರಿನ ಲಲಿತ ಅಶೋಕ್ ಹೋಟೆಲ್‍ನಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾದ ಬೆಂಗಳೂರು ಕೌಶಲ್ಯ ಶೃಂಗಸಭೆ-2025ರಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ ಮತ್ತು ಜೀವನೋಪಾಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಹಾಗೂ ಇತರೆ ಗಣ್ಯರಿಂದ ಪ್ರಶಸ್ತಿ ಸ್ವೀಕರಿಸಿದರು.
ರಾಷ್ಟ್ರೀಯ ಜೀವನೋಪಾಯ ಅಭಿಯಾನ (NRLM&NULM) ಅಡಿಯಲ್ಲಿ ಅತ್ಯುತ್ತಮ ಸಾಧನೆಗೈದ ರಾಜ್ಯದ ಎಂಟು ಜಿಲ್ಲೆಗಳ ಸ್ವಸಹಾಯ ಗುಂಪುಗಳ ಸದಸ್ಯರನ್ನು ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯ ವಿವಿಧ ಅಂಗ ಸಂಸ್ಥೆಗಳ ಅತ್ಯುತ್ತಮ ಕಾರ್ಯಕ್ಕೆ ನೀಡಲಾಗುವ ಪ್ರಶಸ್ತಿಯಲ್ಲಿ ಸಂಘದ ಸದಸ್ಯರನ್ನು ಆಯ್ಕೆ ಮಾಡಿ, ಸಂಘಗಳು ಮಹಿಳಾ ಸಬಲೀಕರಣ ಉದ್ಯಮಶೀಲತೆ ಮತ್ತು ಜೀವನೋಪಾಯ ಅಭಿವೃದ್ಧಿಯಲ್ಲಿ ತೋರಿದ ಶ್ರೇಷ್ಠ ಕಾರ್ಯಕ್ಕಾಗಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಪ್ರಶಸ್ತಿ ಪಡೆದ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಅವರು ಅಭಿನಂದಿಸಿ, ಇನ್ನೂ ಹೆಚ್ಚು ಸಾಧನೆ ಮಾಡುವಂತೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಯೋಜನಾ ನಿರ್ದೇಶಕಿ ಜಯಲಕ್ಷ್ಮೀ, ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಎನ್‍ಆರ್‍ಎಲ್‍ಎಂ ಜಿಲ್ಲಾ ಅಭಿಯಾನ ನಿರ್ವಾಹಣ ಘಟಕದ ಸಿಬ್ಬಂದಿಗಳು ಹಾಗೂ ಸ್ವ ಸಹಾಯ ಗುಂಪಿನ ಸದಸ್ಯರು ಇದ್ದರು.

