ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಕಬ್ಬಡಿ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನ ಧೀರಜ್ ಮುನಿರಾಜು ಯುವ ಬ್ರಿಗೇಡ್ ವತಿಯಿಂದ ಜನವರಿ 6, 7 ಮತ್ತು 8ರಂದು ಆಯೋಜಿಸಲಾಗಿದೆ ಎಂದು ಕರ್ನಾಟಕ ಕಬಡ್ಡಿ ಅಸೋಸಿಯೇಷನ್ ಮಾಜಿ ಕಾರ್ಯದರ್ಶಿ ಮುನಿರಾಜು ತಿಳಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪಂದ್ಯಾವಳಿ ಕುರಿತ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು. ಇದೇ ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈ ಪಂದ್ಯಾವಳಿಯಲ್ಲಿ ಏಳು ಸಾವಿರಕ್ಕೂ ಅಧಿಕ ಕ್ರೀಡಾಭಿಮಾನಿಗಳು ಮತ್ತು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಂದ 500ಕ್ಕೂ ಅಧಿಕ ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ನಗರದ ದರ್ಗಾಪುರ ಖಾಸ್ ಬಾಗ್ ಸಮೀಪದ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿದೆ ಎಂದರು.
ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷ ಆನಂದಮೂರ್ತಿ ಮಾತನಾಡಿ, ಶಾಸಕ ಧೀರಜ್ ಮುನಿರಾಜುರವರ ಹುಟ್ಟು ಹಬ್ಬದ ಅಂಗವಾಗಿ ಜನವರಿ 6, 7 ಮತ್ತು 8ರಂದು ಮೂರು ದಿನಗಳ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿಗಳನ್ನ ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳನ್ನು ರಾಜ್ಯಮಟ್ಟದ ತಂಡಕ್ಕೆ ಆಯ್ಕೆ ಮಾಡಲಾಗುತ್ತಿದೆ , ಪಂದ್ಯಾವಳಿಗಳಿಗೆ ಭಾಗವಹಿಸಿ ಜಯಗಳಿಸಿದ ತಂಡಗಳು / ಕ್ರೀಡಾಪಟುಗಳು ಮುಂದೆ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದರು. ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಡಿಪಿಎ ಮಾಜಿ ನಿರ್ದೇಶಕ ಎನ್.ಕೆ ರಮೇಶ್, ಹಿರಿಯ ಕಬಡ್ಡಿ ಆಟಗಾರ ಮನ್ಸೂರ್ ಪಾಷ, ಅಂತಾರಾಷ್ಟ್ರೀಯ ರೆಫರಿ ಶಾಮಣ್ಣಗೌಡ, ಖಜಾಂಚಿ ಆರ್. ಶೇಖರ್, ಕಬಡ್ಡಿ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಶ್ರೀನಾಥ, ಕಾರ್ಯದರ್ಶಿ ಹರೀಶ್, ಉಪಾಧ್ಯಕ್ಷ ನಾಗರಾಜು, ನಗರಸಭಾ ಸದಸ್ಯ ವೆಂಕಟೇಶ್, ಮುಖಂಡರಾದ ಹಾಡೋನಹಳ್ಳಿ ನಾಗರಾಜು, ವಾಸು ಮತ್ತಿತ್ತರಿದ್ದರು.