ಜುಲೈ 13ರಂದು ರಾಜ್ಯ ಮಟ್ಟದ ಗಾಳಿಪಟ ಉತ್ಸವ-ಪ್ರಕಾಶ್

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಜುಲೈ 13ರಂದು ನಗರದ ಭುವನೇಶ್ವರಿನಗರದಲ್ಲಿರುವ ಮುನಿನಂಜಪ್ಪನವರ ಜಮೀನಿನಲ್ಲಿ ರಾಜ್ಯ ಮಟ್ಟದ ಗಾಳಿಪಟ ಉತ್ಸವವನ್ನು ಏರ್ಪಡಿಸಲಾಗಿದೆ ಎಂದು ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ ಕಾರ್ಯದರ್ಶಿ ಪ್ರಕಾಶ್ ತಿಳಿಸಿದರು.

ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ ವತಿಯಿಂದ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ತಾಲ್ಲೂಕಿನ ಅತ್ಯಂತ ಪ್ರಾಚೀನ ಹಾಗೂ ಜನಪ್ರಿಯ ಕಲೆಯಾದ ಗಾಳಿಪಟ ತಯಾರಿಸುವ ಹಾಗೂ ಹಾರಿಸುವ ಕಲೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ನಮ್ಮ ಸಂಘವು ಕಳೆದ 18 ವರ್ಷಗಳಿಂದ  ಗಾಳಿಪಟ ಉತ್ಸವ ಹಾಗೂ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿದೆ.

- Advertisement - 

 ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಯುನೆಸ್ಕೋ ಮಾನ್ಯತೆ ಪಡೆದಿರುವ ಕರ್ನಾಟಕ ಜಾನಪದ ಪರಿಷತ್ತು ನಮ್ಮೊಂದಿಗೆ ಮೂರನೇ ಬಾರಿ ಈ ಗಾಳಿಪಟ ಉತ್ಸವಕ್ಕೆ ಕೈಜೋಡಿಸಿದೆ ಎಂದರು.

 ದೊಡ್ಡಬಳ್ಳಾಪುರ ಗಾಳಿಪಟ ಕಲಾಸಂಘ ಮತ್ತು ಕರ್ನಾಟಕ ಜಾನಪದ ಪರಿಷತ್ತು ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆಸಲಾಗುತ್ತಿರುವ ಈ ರಾಜ್ಯ ಮಟ್ಟದ ಗಾಳಿಪಟ ಉತ್ಸವದಲ್ಲಿ ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ ಅಂತರರಾಷ್ಟ್ರೀಯ ಗಾಳಿಪಟ ಪಟುಗಳ ಜೊತೆಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಿಂದ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿರುವ ಬೆಳಗಾವಿಯ ಹೈಫೈಯರ್ಸ್ ತಂಡದ ಸಂದೇಶ್ ಕಡ್ಡಿ ಸೇರಿದಂತೆ ಮಂಡ್ಯದ ಗಾಳಿಪಟ ಕಲಾವಿದರೂ ಭಾಗವಹಿಸಿ ತಮ್ಮ ಗಾಳಿಪಟ ಕಲೆಯ ಕೈಚಳಕವನ್ನು ಪ್ರದರ್ಶಿಸಲಿದ್ದಾರೆ ಎಂದರು.

- Advertisement - 

ಈ ಉತ್ಸವವನ್ನು ತಾಲ್ಲೂಕಿನ ಶಾಸಕ ಧೀರಜ್ ಮುನಿರಾಜ್ ಉದ್ಘಾಟಿಸಲಿದ್ದು ಮುಖ್ಯ ವೇದಿಕೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಹಿ.ಚಿ. ಬೋರಲಿಂಗಯ್ಯ, ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್‌, ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ ಅಧ್ಯಕ್ಷ ಎಲ್.ಎನ್. ಶ್ರೀನಾಥ್ ರವರು ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.

ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ದೊಡ್ಡಬಳ್ಳಾಪುರದಲ್ಲಿ ವಿವಿಧ ಕ್ಷೇತ್ರಗಳಲ್ಲಿ  ನಿಸ್ವಾರ್ಥ ಸೇವೆ ಸಲ್ಲಿಸಿರುವ  ಐದು ಜನ ಸಾಧಕರಿಗೆ ಸನ್ಮಾನವನ್ನು ನೆರವೇರಿಸಲಾಗುತ್ತದೆ ಅಲ್ಲದೇ ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ದ ಉದ್ಘಾಟನೆಯನ್ನು ಸಹ ಮಾಡಲಾಗುವುದು ಹಾಗೂ ಮಕ್ಕಳಿಗಾಗಿ ಉಚಿತ ಗಾಳಿಪಟ ತಯಾರಿಕಾ ಕಾರ್ಯಾಗಾರವನ್ನು ಸಹ ಆಯೋಜನೆ ಮಾಡಲಾಗಿದೆ ಎಂದರು. 

ಈ ರಾಜ್ಯ ಮಟ್ಟದ ಗಾಳಿಪಟ ಉತ್ಸವಕ್ಕೆ ತಾವೆಲ್ಲರೂ ಆಗಮಿಸಿ ಗಾಳಿಪಟ ಉತ್ಸವವನ್ನು ಯಶಸ್ವಿಗೊಳಿಸಬೇಕಾಗಿ ತಾಲ್ಲೂಕಿನ ಜನತೆಯಲ್ಲಿ ಮನವಿ ಮಾಡಿದರು. ಈ ವೇಳೆ ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

 

Share This Article
error: Content is protected !!
";