ರಾಜ್ಯ ಮಟ್ಟದ ದ್ವಿತೀಯ ಪ್ರಶಸ್ತಿ ಪಡೆದ ಬಬ್ಬೂರು ಕೃಷಿ ತರಬೇತಿ ಕೇಂದ್ರ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬಬ್ಬೂರು ಫಾರಂವತಿಯಿಂದ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಕೃಷಿ ಮತ್ತು ಕೃಷಿ ಸಂಬಂಧಿತ ವಿಷಯಗಳ ಕುರಿತು ರೈತರೇ ಸ್ವ ಆಸಕ್ತಿಯಿಂದ ತರಬೇತಿಗಳಿಗೆ ನೋಂದಣಿ ಮಾಡಿಕೊಂಡು ತರಬೇತಿಯ ಸದುಪಯೋಗ ಪಡೆಯುತ್ತಿರುವ ಹಾಗೂ ಸಾಮಾಜಿಕ ಜಾಲತಾಣ ಬಳಸಿಕೊಂಡು ಯುವ ರೈತರಿಗೆ ತಾಂತ್ರಿಕ ಮಾಹಿತಿ ತಲುಪಿಸುತ್ತಿರುವ ವಿನೂತನ ಪ್ರಯತ್ನವನ್ನು ಗುರುತಿಸಿ ೨೦೨೫-೨೬ನೇ ಸಾಲಿನ ಕೃಷಿ ಇಲಾಖೆಯ ರಾಜ್ಯಮಟ್ಟದ ಮುಂಗಾರು ಹಂಗಾಮಿನ ಕಾರ್ಯಗಾರದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬಬ್ಬೂರು ಫಾರಂಗೆ ದ್ವಿತೀಯ ಸ್ಥಾನ ನೀಡಿ ಪ್ರಶಂಸ ಪತ್ರದೊಂದಿಗೆ ಪುರಸ್ಕರಿಸಲಾಗಿದೆ.

ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬಬ್ಬೂರು ಫಾರಂ ಮುಖ್ಯಸ್ಥ ಹಾಗೂ ಸಹಾಯಕ ಕೃಷಿ ನಿರ್ದೇಶಕ  ರಜನೀಕಾಂತ ಆರ್ ಅವರು ಜಂಟಿ ಕೃಷಿ ನಿರ್ದೇಶಕ ಡಾ. ಮಂಜುನಾಥ ಬಿ., ಉಪ ಕೃಷಿ ನಿರ್ದೇಶಕ ಡಾ.ಬಿ ಎನ್ ಪ್ರಭಾಕರ್ ಮತ್ತು ಕೆಎಸ್ ಶಿವಕುಮಾರ ಅವರೊಂದಿಗೆ ಕೃಷಿ ಸಚಿವ ಎನ್ ಚೆಲುವರಾಯ ಸ್ವಾಮಿ, ಕೃಷಿ ಆಯುಕ್ತ ವೈ ಎಸ್ ಪಾಟೀಲ್, ಕೃಷಿ ನಿರ್ದೇಶಕ ಡಾ. ಜಿ . ಟಿ ಪುತ್ರ ಇವರ ಸಮ್ಮುಖದಲ್ಲಿ ಪ್ರಶಸ್ತಿ ಪಡೆದರು.

ರಜನೀಕಾಂತ ಆರ್ ಅವರು ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬಬ್ಬೂರು ಫಾರಂ ವತಿಯಿಂದ ರೈತರಿಗೆ ಆಯೋಜಿಸಲಾದ ಸಾಂಸ್ಥಿಕ, ಹೊರಾಂಗಣ, ಗೂಗಲ್ ಮೀಟ್ ಮೂಲಕ ಅಂತರ್ಜಾಲ ತರಬೇತಿ, ಕೃಷಿ ಅಧ್ಯಯನ ಪ್ರವಾಸಗಳು ಹಾಗೂ ಸಾಮಾಜಿಕ ಜಾಲತಣಗಳ ಸಮರ್ಪಕ ಬಳಕೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತ ಯುವ ರೈತರನ್ನು ತಲುಪುವಲ್ಲಿ ಯಶಸ್ವಿಯಾದ ಯಶೋಗಾಥೆಯನ್ನು ಪವರ್ ಪಾಯಿಂಟ್ ಪ್ರಸಂಟೇಷನ್ ಮೂಲಕ ಹಾಜರಿದ್ದ ಅಧಿಕಾರಿಗಳ ಮುಂದೆ ಅನುಭವ ಹಂಚಿಕೊಂಡರು.

ಈ ಸಂದರ್ಭದಲ್ಲಿ ರಜನೀಕಾಂತ್ ಮಾತನಾಡಿ, ತರಬೇತಿ ಕೇಂದ್ರದ ಯಶಸ್ಸಿಗೆ ಉತ್ತಮ ತರಬೇತಿಯ ವಿಷಯ ಮತ್ತು ಉಪನ್ಯಾಸಕರ ಆಯ್ಕೆ, ಆಸಕ್ತ ರೈತರನ್ನು ತರಬೇತಿಗೆ ನೋಂದಾಯಿಸಲು ವ್ಯಾಪಕ ಪ್ರಚಾರ, ಸುಸಜ್ಜಿತ ತರಬೇತಿ ಕೇಂದ್ರದ ವ್ಯವಸ್ಥೆ ಹಾಗೂ ರೈತರೊಂದಿಗಿನ ಉತ್ತಮ ಬಾಂಧವ್ಯ ಪ್ರಮುಖ ಕಾರಣವಾಗಿದೆಂದರು.

ಪ್ರಸ್ತುತ ರೈತರ ಅವಶ್ಯಕತೆ, ಕೃಷಿಯ ಸ್ಥಳೀಯ ಸಮಸ್ಯೆಗಳು, ಹಂಗಾಮು ಮತ್ತು ಬೆಳೆ ಆಧಾರಿತ, ಇಲಾಖೆಯ ಪ್ರಮುಖ ಯೋಜನೆಗಳಾದ ಕೃಷಿ ಭಾಗ್ಯ, ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮತ್ತು ಅಟಲ್ ಭೂಜಲ ಯೋಜನೆಗಳ ಮೂಲಕ ವಿವಿಧ ತಾಂತ್ರಿಕತೆಗಳ ಅನುಷ್ಟಾನ, ಸುಸ್ಥಿರ ಕೃಷಿ, ನೈಸರ್ಗಿಕ ಕೃಷಿ, ಸಾವಯವ ಕೃಷಿ, ಮಣ್ಣು ಮತ್ತು ನೀರು ಸಂರಕ್ಷಣೆ,

ಸಮಗ್ರ ಕೃಷಿ ಪದ್ದತಿ, ಕೃಷಿ ಮತ್ತು ತೋಟಗಾರಿಕೆ ಬೆಳೆಗಲ್ಲಿ ಸುಧಾರಿತ ಬೇಸಾಯ ಕ್ರಮಗಳು, ಪಶು ಸಂಗೋಪನೆ, ಜೇನು ಸಾಕಾಣಿಕೆ, ಆಹಾರ ಮತ್ತು ಆರೋಗ್ಯ, ಆರೋಗ್ಯಕರ ಜೀವನ ಶೈಲಿ, ಒತ್ತಡ ನಿರ್ವಹಣೆ ಮತ್ತು ಇತರೆ ತರಬೇತಿಯ ವಿಷಯಗಳ ಕುರಿತು ಕೇಂದ್ರದಲ್ಲಿ ಕೃಷಿ ವಿಶ್ವ ವಿದ್ಯಾಲಯ, ಕೆವಿಕೆ, ಸಂಶೋಧನಾ ಕೇಂದ್ರಗಳು, ವಿವಿಧ ಸಂಸ್ಥೆಗಳು, ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ನುರಿತ ಉಪನ್ಯಾಸಕರು ಮತ್ತು ಪ್ರಗತಿಪರ ರೈತರ ಮೂಲಕ ಜಂಟಿ ಕೃಷಿ ನಿರ್ದೇಶಕ ಡಾ. ಮಂಜುನಾಥ ಬಿ. ಅವರ ಮಾರ್ಗದರ್ಶನದಲ್ಲಿ ರೈತರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಕೇಂದ್ರದಲ್ಲಿ ಆಯೋಜಿಸಲಾಗುವ ತರಬೇತಿಗಳ ಬಗ್ಗೆ ಆಸಕ್ತ ರೈತರ ಸ್ವಯಂ ಪ್ರೇರಿತ ನೋಂದಾವಣಿಗೆ ಅನೂಕೂಲವಾಗಲು ಪ್ರಮುಖ ದಿನ ಪತ್ರಿಕೆಗಳಲ್ಲಿ, ತರಬೇತಿ ಕೇಂದ್ರ, ಕೃಷಿ ಸಖಿ, ಇಲಾಖಾ ಅಧಿಕಾರಿಗಳ ವ್ಯಾಟ್ಸ ಆಪ್ ಗುಂಪು ಮತ್ತು ಫೇಸ್‌ ಬುಕ್ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಲಾಯಿತು. ತರಬೇತಿ ನಂತರ ತರಬೇತಿಯಲ್ಲಿ ಮಂಡಿಸಿದ ವಿಷಯದ ಕುರಿತು ಹೆಚ್ಚಿನ ರೈತರಿಗೆ ತಲುಪಿಸಲು ಪತ್ರಿಕಾ ಮಾಧ್ಯಮ ಮೂಲಕ ವ್ಯಾಪಕ ಪ್ರಕಟಣೆ ನೀಡಲಾಯಿತು ಎಂದರು.

ಕಳೆದ ಸಾಲಿನಲ್ಲಿ ೨೫ ಸಾಂಸ್ಥಿಕ ತರಬೇತಿ, ೪೦ ಗೂಗಲ್ ಮೀಟ್ ಮೂಲಕ ತರಬೇತಿ, ೨೪ ಹೊರಾಂಗಣ ತರಬೇತಿ ಒಟ್ಟಾರೆ ೮೯ ತರಬೇತಿಗಳ ಮೂಲಕ ೫೦೦೦ ಕ್ಕೂ ಹೆಚ್ಚಿನ ರೈತರಿಗೆ ತರಬೇತಿ ನೀಡಲಾಗಿದೆ. 

ಪ್ರಾಯೋಗಿಕ ಜ್ಞಾನ ನೀಡಲು ವಿವಿಧ ಕ್ಷೇತ್ರಗಳಲ್ಲಿ ನುರಿತ ಪ್ರಗತಿಪರ ರೈತರ ತಾಕುಗಳು, ಕೃಷಿ ಸಂಶೋಧನಾ ಕೇಂದ್ರಗಳು, ಧಾರವಾಡ, ಶಿವಮೊಗ್ಗ ಮತ್ತು ಬಾಗಲಕೋಟೆ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಅಳವಡಿಸಿದ ತಾಂತ್ರಿಕೆಗಳ ಬಗ್ಗೆ ರೈತರ ಕೃಷಿ ಅಧ್ಯಯನ ಪ್ರವಾಸ ಆಯೋಜಿಸುವ ಮೂಲಕ ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ರಜನೀಕಾಂತ್ ಹೇಳಿದರು.

 

Share This Article
error: Content is protected !!
";