ಭಿನ್ನಾಭಿಪ್ರಾಯಗಳಿಗೆ ಅವಕಾಶ ಕೊಡಬೇಡಿ : ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಸಂಘಟನೆ ಬಲಿಷ್ಠವಾಗಿ ಬೆಳೆಯಬೇಕಾದರೆ ಸಂಘದ ಪದಾಧಿಕಾರಿಗಳು
, ಸದಸ್ಯರು ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶ ಮಾಡಿ ಕೊಡಬೇಡಿ ಎಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಕಿವಿ ಮಾತು ಹೇಳಿದರು.

 ಮಂಡ್ಯ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಸಂಘದಲ್ಲೂ ಎಲ್ಲರ ಅಭಿಪ್ರಾಯ ಒಂದಾಗಿರುವುದಿಲ್ಲ. ಅದೇ ರೀತಿ ನಮ್ಮ ಸಂಘದಲ್ಲೂ ಭಿನ್ನಾಭಿಪ್ರಾಯಗಳು ಇದ್ದೆ ಇರುತ್ತವೆ. ಆಗಂತ ಅದನ್ನೂ ಬೆಳೆಯಲು  ಬಿಡುವುದಿಲ್ಲ. ಎಲ್ಲಾ ಪತ್ರಿಕೆಗಳ ಸಂಪಾದಕರನ್ನು ಒಗ್ಗೂಡಿಸಿ ಕರೆದುಕೊಂಡು ಹೋಗುವುದು ನಮ್ಮ ಸಂಘದ ಆಶಯವಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಹೇಳಿದರು.

 ನಮ್ಮ ಪತ್ರಿಕೆಗಳು ನಾವು ಬೆಳೆಸಿದ ಕೂಸು. ಅದು ಸಂಕಷ್ಠಕ್ಕೆ ಸಿಲುಕಿದರೆ ಅದನ್ನು ಸಹಿಸಲು ಆಗದು. ಅದನ್ನು ಪೋಷಣೆ ಮಾಡುವುದು ಪೋಷಕನಾದ ನನ್ನ ಮತ್ತು ನಿಮ್ಮಗಳ ಕರ್ತವ್ಯ. ಆದ್ದರಿಂದ ನಾನು ನನ್ನ ಶಕ್ತಿ ಮೀರಿ ಪತ್ರಿಕೆಗಳ ಏಳಿಗೆಗೆ ಶ್ರಮಿಸುತ್ತೇನೆ. ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಉಳುವಿಗೆ‌ಮತ್ತು ಸರ್ಕಾರದ ಸೌಲಭ್ಯಗಳನ್ನು ಒದಗಿಸಿ ಕೊಡಲು ನಮ್ಮ ಸಂಘ  ಶತಾಯಗತಾಯ ನಿರಂತರ ಪ್ರಯತ್ನ ಮಾಡುತ್ತದೆ ಎಂದು ಭರವಸೆ ನೀಡಿದರು.

 ನನಗೆ ಯಾವುದೇ ಜಾತಿ-ಮತಗಳಿಲ್ಲ. ಪತ್ರಿಕೋದ್ಯಮ ನನ್ನ ಕುಟುಂಬ. ಅವರನ್ನು ಒಗ್ಗೂಡಿಸಿ ಕರೆದೊಯ್ಯಬೇಕೆನ್ನುವುದೇ ನನ್ನ ಗುರಿ. ಇದನ್ನ ಬಿಟ್ಟು ನನ್ನ ಬಳಿ ಯಾವುದೇ ಆಸೆ ಆಕಾಂಶೆ ಇಲ್ಲ. ನನ್ನ ಈ ನಿಲುವಿಗೆ ಎಲ್ಲರ ಸಹಕಾರ ಅಗತ್ಯವಷ್ಟೆ ಎಂದು ತಮ್ಮ ಮನದಾಳದ ಮಾತು ಹೇಳಿದರು.

 ಪತ್ರಕರ್ತರ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವುದಕ್ಕಾಗಿ ನಮ್ಮ ಈ ಸಂಘಟನೆ ಹುಟ್ಟು ಹಾಕಲಾಗಿದೆ. ಜನವರಿಯಿಂದ ಈವರೆಗೆ ಸಾಕಷ್ಟು ಸಮಸ್ಯೆಗಳನ್ನು ಇತ್ಯರ್ಥ ಮಾಡಿಕೊಂಡು ಬರಲಾಗಿದೆ. ಮುಂದೆಯೂ ನಿಮ್ಮ ಪರವಾಗಿ ಸಂಘ ಟೊಂಕಕಟ್ಟಿ ನಿಲ್ಲುತ್ತದೆ. ಸರ್ಕಾರ ಪತ್ರಿಕೆಗಳ ಅಭಿವೃದ್ದಿಗೆ ಹಲವಾರು ಸೌಲಭ್ಯಗಳನ್ನ ನೀಡುತ್ತಾ ಬಂದಿದೆ. ಇದರಿಂದ ಪತ್ರಿಕೆಗಳ ಅಸ್ತಿತ್ವ ರಾಜ್ಯದಲ್ಲಿ ಉಳಿದುಕೊಂಡಿದೆ ಎಂದು ಅವರು ಹೇಳಿದರು.

 ಸರ್ಕಾರದಿಂದ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಐದು ವರ್ಷದೊಳಗಿನ ಓಬಿಸಿ, ಬ್ರಾಹ್ಮಣ ಸಮುದಾಯದ ಪತ್ರಿಕೆಗಳಿಗೆ ಒಂದು ಪುಟ ಜಾಹೀರಾತು ಮಂಜೂರು, ಶೇ.12 ರಷ್ಟು ಜಾಹೀರಾತು ದರ ಹೆಚ್ಚಳ, ಏಜೆನ್ಸಿಗಳಿಗೆ ಕಾನೂನು ಬಾಹಿರವಾಗಿ ನೀಡುತ್ತಿರುವ ಶೇ. 15 ರಷ್ಟು ಕಮಿಷನ್ ನಿಂದ ಶೇ.10 ರಷ್ಟು ಕಮಿಷನ್ ಗೆ ಇಳಿಕೆ, ಗಡಿ ಪತ್ರಿಕೆಗಳಿಗೆ ಜಾಹೀರಾತು ಬಿಡುಗಡೆ ಹೀಗೆ ಹಲವಾರು ಸಮಸ್ಯೆಗಳ ಈಡೇರಿಕೆಗೆ ಆಗಿಂದಾಗಲೇ  ಸರ್ಕಾರ, ಮುಖ್ಯಮಂತ್ರಿಗಳ ಕಛೇರಿ, ಇಲಾಖೆ ಕಾರ್ಯದರ್ಶಿ ಹಾಗೂ ವಾರ್ತಾ ಇಲಾಖೆಯ ಆಯುಕ್ತರ ಕಛೇರಿಗೆ ಓಡಾಡುತ್ತಿದ್ದೇವೆ.

ಈ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಇದೇ ತಿಂಗಳ 29ರಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯ ಜಿಲ್ಲಾ ಘಟಕದ  ಖಜಾಂಚಿ ನಾಗೇಶ್ ಅವರ ಮಳವಳ್ಳಿ ತೋಟದ ಮನೆಯಲ್ಲಿ ಸಂಘದ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಂಘದ ಈ ಪ್ರಮುಖ ಬೇಡಿಕೆಗಳ ಕುರಿತು ಸಮಗ್ರವಾಗಿ ಚರ್ಚಿಸಿ ಹೋರಾಟದ ರೂಪುರೇಷೆಗಳನ್ನು ರೂಪಿಸಲಾಗುತ್ತದೆ. ಅದಕ್ಕಾಗಿ ಪ್ರತಿಯೊಂದು ಜಿಲ್ಲೆಯಿಂದ ಸಂಘದ ಪದಾಧಿಕಾರಿಗಳು ಬರಬೇಕು, ಸಭೆಯನ್ನು ಯಶಸ್ವಿಗೊಳಿಸಬೇಕು. ಈ ಸಭೆಗೆ ಜಿಲ್ಲಾ ಘಟಕದ ಪದಾಧಿಕಾರಿಗಳು, ಕೇಂದ್ರ ಸಂಘದ ಪದಾಧಿಕಾರಿಗಳು ತಪ್ಪದೇ ಭಾಗವಹಿಸಿ ಸಲಹೆ ಸೂಚನೆ ನೀಡುವಂತೆ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಅವರು  ವಿನಂತಿಸಿದರು.

 ಈ ಸಭೆಯಲ್ಲಿ ರಾಜ್ಯ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಮಾಮರ, ಜಂಟಿ ಕಾರ್ಯದರ್ಶಿ ಗೋಪಾಲ್, ಸಹ ಕಾರ್ಯದರ್ಶಿಗಳಾದ  ಗುರುಬಸವಯ್ಯ, ಡಾ.ಕೆ.ಎಸ್.ಸ್ವಾಮಿ, ಶಿವಶಂಕರ್ಕಾರ್ಯದರ್ಶಿ ಟಿ.ಎಸ್.ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಅರುಣಾ ಜ್ಯೋತಿ ಬಿ.ಕೆ., ಪದಾಧಿಕಾರಿಗಳಾದ  ಪುಟ್ಟಸ್ವಾಮಿ, ರವಿ, ಕುಮಾರ್ ,ಜಿಲ್ಲಾ ಸಂಘದ ಅಧ್ಯಕ್ಷ ಶಿವಶಂಕರ್, ಖಜಾಂಚಿ ನಾಗೇಶ್ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಘಟಕವನ್ನು ಪುನರ್ ರಚಿಸಲಾಯಿತು.

 

- Advertisement -  - Advertisement - 
Share This Article
error: Content is protected !!
";