ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟಕ್ಕೆ 2023-24ನೇ ಸಾಲಿನ ಒಟ್ಟು ಮೂರು ರಾಷ್ಟ್ರೀಯ ಸಾರ್ವಜನಿಕ ಬಸ್ ಸಾರಿಗೆ ಪ್ರಶಸ್ತಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಲಭಿಸಿವೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ ವ್ಯಾಪ್ತಿಯಲ್ಲಿ ದೇಶದ 62 ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಸದಸ್ಯತ್ವ ಹೊಂದಿವೆ. ಭಾರತ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ನಿರ್ದೇಶನದ ಅನುಸಾರ ಕಾರ್ಯನಿರ್ವಹಿಸುತ್ತದೆ.
ಈ ಸಂಸ್ಥೆಯು 59 ವರ್ಷಗಳ ಅನುಭವವನ್ನು ಹೊಂದಿದ್ದು, ದೇಶದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಕೆಎಸ್ಆರ್ಟಿಸಿಗೆ ಅಶ್ವಮೇಧ ಬ್ರ್ಯಾಂಡಿಂಗ್ ಹಾಗೂ ವರ್ಚಸ್ಸು ಅಭಿವೃದ್ಧಿ, ಕಾರ್ಮಿಕರ ಕಲ್ಯಾಣಕ್ಕಾಗಿ ಕೈಗೊಂಡಿರುವ ವಿನೂತನ ಯೋಜನೆಗಳು ಹಾಗೂ ಗಣಕೀಕರಣ ಉಪಕ್ರಮಗಳಿಗಾಗಿ ಮೂರು ಪ್ರಶಸ್ತಿಗಳು ಲಭಿಸಿದೆ.
ನವದೆಹಲಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಡಾ. ಕಿರಣ್ ಬೇಡಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ, ಐಎಎಸ್ ಅಧಿಕಾರಿ ಪ್ರಿಯಾಂಗ, ಸಾರಿಗೆ ಬಸ್ ಒಕ್ಕೂಟದ ನಿರ್ವಾಹಕ ನಿರ್ದೇಶಕ ಸೂರ್ಯಕಿರಣ್ ಉಪಸ್ಥಿತರಿದ್ದು, ಉಪಮುಖ್ಯ ಸಂಚಾರ ವ್ಯವಸ್ಥಾಪಕ ಗುರುರಾಜ ಹೆಚ್ ಹಾಗೂ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ರಾಧಾ ಅವರು ನಿಗಮದ ಪರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.