ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಕೂನಿಕೆರೆ ಗ್ರಾಮದಲ್ಲಿ ಪವರ್ ಗ್ರಿಡ್ ವತಿಯಿಂದ ಗ್ರಾಮಸಭೆ ಹಮ್ಮಿಕೊಳ್ಳಲಾಗಿತ್ತು.
ವಿದ್ಯುತ್ ಕಂಬದ ಸುರಕ್ಷತಾ ಜಾಗೃತಿ ಎಂದರೆ ವಿದ್ಯುತ್ ಸಂಬಂಧಿತ ಅಪಘಾತಗಳನ್ನು ತಡೆಯಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳಾಗಿರುತ್ತವೆ.
ಬೃಹತ್ ವಿದ್ಯುತ್ ಕಂಬಗಳ ಬಳಿ ಬಟ್ಟೆ ಹಾಕುವುದು, ಫಲಕ ಅಳವಡಿಸುವುದು, ವಿದ್ಯುತ್ ತಂತಿಗಳಿಗೆ ಯಾವುದೇ ವಸ್ತುಗಳನ್ನು ಕಟ್ಟದಿರುವುದು, ವಿದ್ಯುತ್ ಕಂಬ ಏರದೇ ಇರುವುದು ಮತ್ತು ತುಂಡಾದ ವಿದ್ಯುತ್ ತಂತಿಗಳಿಂದ ದೂರವಿರುವುದು ಮುಖ್ಯವಾಗಿದೆ. ಸಾರ್ವಜನಿಕರು ಈ ನಿಯಮಗಳನ್ನು ಪಾಲಿಸುವುದರೊಂದಿಗೆ, ವಿದ್ಯುತ್ ಕಂಬದ ಬಳಿ ಯಾವುದೇ ಅಪಾಯಕಾರಿ ಚಟುವಟಿಕೆಗಳು ಕಂಡು ಬಂದಲ್ಲಿ ತಕ್ಷಣವೇ ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸಭೆಯಲ್ಲಿ ಜಾಗೃತಿ ಮೂಡಿಸಲಾಯಿತು.
ಸುರಕ್ಷತಾ ಕ್ರಮಗಳು:
ವಿದ್ಯುತ್ ಕಂಬ ಏರಬೇಡಿ: ವಿದ್ಯುತ್ ಕಂಬದ ಮೇಲೆ ಯಾವುದೇ ಕಾರಣಕ್ಕೂ ಹತ್ತಬೇಡಿ. ಇದು ಅತ್ಯಂತ ಅಪಾಯಕಾರಿ.
ಕಟ್ಟಬೇಡಿ: ಜಾಹೀರಾತು ಫಲಕ, ಧ್ವಜಗಳು, ಕುರಿ, ಜಾನುವಾರು ಇತ್ಯಾದಿಗಳನ್ನು ವಿದ್ಯುತ್ ಕಂಬಕ್ಕೆ ಕಟ್ಟಬೇಡಿ.
ತುಂಡಾದ ತಂತಿಗಳಿಂದ ದೂರವಿರಿ: ತುಂಡಾದ ವಿದ್ಯುತ್ ತಂತಿಗಳನ್ನು ಯಾವುದೇ ಕಾರಣಕ್ಕೂ ಮುಟ್ಟಬೇಡಿ. ಅವುಗಳ ಬಳಿ ಹೋಗಬೇಡಿ.
ವಿಸರ್ಜನೆ ಮಾಡಬೇಡಿ: ಯಾವುದೇ ಸಂದರ್ಭದಲ್ಲಿ ಸಾರ್ವಜನಿಕರು ವಿದ್ಯುತ್ ಕಂಬದ ಬಳಿ ಮೂತ್ರ ವಿಸರ್ಜನೆ ಮಾಡುವುದು ಅಪಾಯಕಾರಿ ಮತ್ತು ಸೂಕ್ತವಲ್ಲ. ಬಟ್ಟೆ ಒಣಗಿಸಲು ವಿದ್ಯುತ್ ತಂತಿಗಳನ್ನು ಬಳಸಬೇಡಿ.
ಅಕ್ರಮ ಸಂಪರ್ಕ ಬೇಡ: ವಿದ್ಯುತ್ ಕಂಬಗಳಿಂದ ನೇರವಾಗಿ ತಂತಿಗಳನ್ನು ಎಳೆದು ವಿದ್ಯುತ್ ಕಳ್ಳತನ ಮಾಡುವುದರಿಂದ ದೊಡ್ಡ ಅವಘಡಗಳು ಸಂಭವಿಸಬಹುದು. ಕೆಲಸಗಳನ್ನು ಮಾಡಬೇಡಿ.
ಅಧಿಕಾರಿಗಳಿಗೆ ತಿಳಿಸಿ: ನಿಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಸುರಕ್ಷತೆ ಉಲ್ಲಂಘನೆಯಾದರೆ, ತಕ್ಷಣವೇ ಬೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿ. ವೃತ್ತಿಪರರಿಂದಲೇ ಕೆಲಸ: ಮನೆಯಲ್ಲಿ ಯಾವುದೇ ವಿದ್ಯುತ್ ಕೆಲಸ ಮಾಡಬೇಕಾದಲ್ಲಿ, ಪರವಾನಗಿ ಪಡೆದ ವೈರಿಂಗ್ ಗುತ್ತಿಗೆದಾರರಿಂದಲೇ ಕೆಲಸ ಮಾಡಿಸಿ ಎಂದು ಪವರ್ ಗ್ರಿಡ್ ತಾಂತ್ರಿಕ ಅಧಿಕಾರಿಗಳು ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.
ಜಾಗೃತಿ ಸಪ್ತಾಹ ಕಾರ್ಯಕ್ರಮ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೂನಿಕೆರೆ ಗ್ರಾಪಂ ಪಂಚಾಯತಿ ಅಧ್ಯಕ್ಷ ಗೋವಿಂದರಾಜು, ಸರ್ಕಾರಿ ಕನ್ನಡ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ್, ಸರ್ಕಾರಿ ಉರ್ದು ಹಿರಿಯ ಶಾಲೆಯ ಮುಖ್ಯೋಪಾಧ್ಯಾಯ ರಮೇಶ್, ಜಿಕೆಎಂ ಸಂಸ್ಥೆ ಸದಸ್ಯೆ ಲತಾ, ಕರಿಯಣ್ಣ, ಆಂಜನೇಯ ದೇವಾಲಯದ ಕಾರ್ಯದರ್ಶಿ ಕೂನಿಕೆರೆ ಲಿಂಗಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಪಿಡಿಪಿಐ ಮತ್ತು ವಿದ್ಯುತ್ ಕಂಬದ ಸುರಕ್ಷತಾ ಜಾಗೃತಿ ಬಗ್ಗೆ ಸಂಕ್ಷಿಪ್ತ ಮಾಹಿತಿ ಕೊಡಲಾಯಿತು.

