ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ವಿವಿಧ ಸರ್ವೆ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಪರವಾನಗಿ ಭೂಮಾಪಕರ ಖಾಯಂ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.
ವಿಧಾನಸೌಧದ ಮುಂಭಾಗ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಇಲಾಖೆಯ ನೌಕರರ ಸಂಘಗಳ 36ನೇ ರಾಷ್ಟ್ರೀಯ ಭೂಮಾಪನಾ ದಿನಾಚರಣೆಯನ್ನು ಅವರು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಕಂದಾಯ ಇಲಾಖೆ ಸರ್ಕಾರದ ಮಾತೃ ಇಲಾಖೆ ಇದ್ದಂತೆ. ಈ ಇಲಾಖೆ ಅಚ್ಚುಕಟ್ಟಾಗಿ ಕೆಲಸ ಮಾಡಿದರೆ ರೈತ ಸಮುದಾಯ ನೆಮ್ಮದಿಯಾಗಿರುತ್ತದೆ. ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಅತ್ಯುತ್ತಮ ಕೆಲಸಗಳಾಗುತ್ತಿವೆ ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ಸೂಚಿಸಿದರು.
ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿ ಕಂದಾಯ ಇಲಾಖೆಯ, ನೌಕರರ ಬಹಳಷ್ಟು ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಪೂರ್ತಿ ಸಮಸ್ಯೆ ಬಗೆಹರಿದಿಲ್ಲ ಎನ್ನುವ ಬೇಸರ ನನಗೂ ಇದೆ. ತಹಶೀಲ್ದಾರ್, ಎಸಿ ಕಚೇರಿಗಳಲ್ಲಿ ಸುಗಮ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ, ನಾಡಿನ ಜನತೆ, ರೈತ ಸಮುದಾಯ ಅತ್ಯಂತ ನೆಮ್ಮದಿಯಾಗಿರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.