ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹನಿ ನೀರಾವರಿ ಕಾಮಗಾರಿ ಎಂದು ಹೇಳಿಕೊಂಡು ಕೆಲವು ಕಂಪನಿಗಳು ಜೆಜೆ ಹಳ್ಳಿ ಹೋಬಳಿ ಕಾಟನಾಯಕನಹಳ್ಳಿ, ಆನೆಸಿದ್ರಿ ಸೇರಿದಂತೆ ಸುತ್ತ ಮುತ್ತಲ ಹಳ್ಳಿಗಳಲ್ಲಿ ಕಾಮಗಾರಿ ಮಾಡುತ್ತಿದ್ದು ಕೂಡಲೇ ಕಾಮಗಾರಿ ಸ್ಥಗಿತ ಮಾಡಿ ವಾಣಿ ವಿಲಾಸ ಸಾಗರಕ್ಕೆ ನೀರು ಭರ್ತಿ ಮಾಡುವಂತ ಕಾಮಗಾರಿಗಳನ್ನು ಮೊದಲು ಪೂರ್ಣಗೊಳಿಸುವಂತೆ ರೈತರು ಒತ್ತಾಯಿಸಿದ್ದಾರೆ.
ಅಜ್ಜಂಪುರ ಸಮೀಪದ ವೈ ಜಂಕ್ಷನ್ ನಿಂದ ತುಮಕೂರು ಮುಖ್ಯ ಕಾಲುವೆ ಮೂಲಕ ನೀರು ಹರಿಸಲಾಗುತ್ತದೆ. ಮಳೆಗಾಲದ ಜುಲೈ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ ನೀರು ಹರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ಆದರೆ ವೈ ಜಂಕ್ಷನ್ ನಿಂದ ಹಿರಿಯೂರು ತಾಲೂಕಿಗೆ ಸುಮಾರು 200 ಕಿ.ಮೀ ಆಗುತ್ತದೆ ಇನ್ನು ಆ ಭಾಗದಲ್ಲಿ ರೈತರ ಜಮೀನು ಭೂಸ್ವಾದಿನ ಆಗಿಲ್ಲ, ಇನ್ನು ಈ ಕಾಮಗಾರಿ ಮುಗಿಯುವ ಹೊತ್ತಿಗೆ ಸುಮಾರು ಹತ್ತು ವರ್ಷ ಬೇಕಾಗುತ್ತದೆ. ಅಷ್ಟು ಹೊತ್ತಿಗೆ ಎಲ್ಲಾ ಪೈಪುಗಳು ಹಾಳಾಗಿ ಹೋಗುತ್ತವೆ. ಇದರ ಬದಲಿಗೆ ವಾಣಿವಿಲಾಸ ಜಲಾಶಯ ಭರ್ತಿ ಮಾಡಿ ಬೇಸಿಗೆ ಕಾಲದಲ್ಲಿ ಇಡೀ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸಬಹುದಾಗಿದೆ.
ಹನಿ ನೀರಾವರಿ ಪದ್ಧತಿಯ ಇಡೀ ಕಾಮಗಾರಿ ಅವೈಜ್ಞಾನಿಕವಾಗಿದ್ದು ಕೂಡಲೇ ಈ ಕಾಮಗಾರಿ ನಿಲ್ಲಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿಲಾಗಿದ್ದು ಇದನ್ನು ಪರಿಗಣಿಸದೆ ಕಾಮಗಾರಿ ಮುಂದುವರಿಸಲಾಗುತ್ತಿದೆ.
ಹನಿ ನೀರಾವರಿ ಕಾಮಗಾರಿಯಲ್ಲಿ ಹೆಚ್ಚಿನ ಕಮಿಷನ್ ಬರುತ್ತಿರುವುದರಿಂದ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಾಧಿಕಾರಿಗಳು ಹನಿ ನೀರಾವರಿ ಯೋಜನೆ ಕಾಮಗಾರಿಗಳಿಗೆ ಒತ್ತು ನೀಡುತ್ತಿರುವುದು ಎಷ್ಟು ಸರಿ ಎಂದು ರೈತರು ಪ್ರಶ್ನಿಸಿದ್ದಾರೆ.
ಮೊದಲ ಹಂತದ ಪ್ಯಾಕೇಜ್-1ರ ತುಂಗಾ ನದಿಯಿಂದ ಭದ್ರಾ ನದಿಗೆ ನೀರು ಪಂಪ್ ಮಾಡುವ ಕಾಮಗಾರಿ ಮುಗಿದಿಲ್ಲ. ಇದಲ್ಲದೆ ಪ್ಯಾಕೇಜ್ 1ರಲ್ಲೇ ಸಾಕಷ್ಟು ಕಾಮಗಾರಿಗಳು ಪೂರ್ಣಗೊಂಡಿಲ್ಲ.
ಪರಿಸ್ಥಿತಿ ಈ ರೀತಿ ಇದ್ದು ಇನ್ನು ಅನೇಕ ಕಡೆ ಕಾಮಗಾರಿ ಮುಗಿಯದೆ ಇದ್ದರೂ ಸಹ ಜವನಗೊಂಡನಹಳ್ಳಿ ಹೋಬಳಿಯ ಕೆಲ ಗ್ರಾಮಗಳಲ್ಲಿ ಹನಿ ನೀರಾವರಿ ಸೌಲಭ್ಯ ಅಳವಡಿಸುವ ಪೈಪ್ ಲೈನ್ ಕಾಮಗಾರಿ ಮಾಡಿ ದುಡ್ಡು ಹೊಡೆಯುವ ಕಾರ್ಯ ಮಾಡಲಾಗುತ್ತಿದೆ. ಇಡೀ ಹನಿ ನೀರಾವರಿ ಸ್ಕೀಮ್ ದುಡ್ಡು ಕೊಳ್ಳೆ ಹೊಡೆಯುವುದಾಗಿರುತ್ತದೆ ಎಂದು ರೈತರು ಆರೋಪಿಸಿದ್ದಾರೆ.
ಮಳೆಗಾಲದಲ್ಲಿ ಹನಿ ನೀರಾವರಿ ಮೂಲಕ ರೈತರಿಗೆ ನೀರು ಹರಿಸುವ ಬದಲು 130 ಅಡಿ ನೀರು ತುಂಬುವ ಸಾಮರ್ಥ್ಯ ಇರುವ ವಾಣಿವಿಲಾಸ ಜಲಾಶಯಕ್ಕೆ ನೀರು ಭರ್ತಿ ಮಾಡಿ ಬೇಸಿಗೆಯ ಕಾಲದಲ್ಲಿ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಜೊತೆಗೆ ಹನಿ ನೀರಾವರಿ ಮೂಲಕ ಹಲವು ಭಾಗಗಳಿಗೆ ನೀರು ಕೊಡಬಹುದಾಗಿದೆ. ಈ ಕೆಲಸ ಮಾಡುವ ಬದಲು ಅವೈಜ್ಞಾನಿಕವಾದ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಹಿರಿಯೂರು ಕಲ್ಲವಳ್ಳಿ ಭಾಗದ ಮುಗ್ಧ ರೈತರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ, ರೈತರಿಗೆ ಯಾವುದೇ ನೋಟಿಸ್ ನೀಡದೆ ರೈತರ ಗಮನಕ್ಕೆ ತರದೆ ಕಂದಾಯ ನಿಯಮಗಳನ್ನು ಪಾಲಿಸದೆ, ಗಿಡ ಮರ ಬೆಳೆ ಮತ್ತು ಭೂಮಿಯನ್ನು ಹಾನಿ ಮಾಡಿ ಕಾಮಗಾರಿ ಮಾಡಲಾಗುತ್ತದೆ. ರೈತರು ಕಾಮಗಾರಿ ಮಾಡದಂತೆ ತಡೆದರೆ ಅವರ ಮೇಲೆ ಗುತ್ತಿಗೆದಾರರ ದೌರ್ಜನ್ಯ ಮಾಡಿ ಹೊಡೆಯಲು ಮುಂದಾಗಿರುತ್ತಾರೆ.
ಕೂಡಲೇ ತಾಲೂಕ್ ಆಡಳಿತ ಮತ್ತು ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಬೇಕು. ಕಂಪನಿಗಳ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸುತ್ತದೆ ಎಂದು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಕೆ ಟಿ ತಿಪ್ಪೇಸ್ವಾಮಿ, ರೈತ ಮುಖಂಡರಾದ ಕುಮಾರ್, ಶಿವಣ್ಣ, ನಿಂಗಪ್ಪ, ರಾಮಣ್ಣ, ಈರಣ್ಣ, ಸಿದ್ದರಾಮಣ್ಣ, ರಂಗಸ್ವಾಮಿ ಮುಂತಾದವರು ಪ್ರತಿಭಟನೆ ಮಾಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.