ಚಂದ್ರವಳ್ಳಿ ನ್ಯೂಸ್, ಕಾನ ಹೊಸಹಳ್ಳಿ :
ಸಮೀಪದ ಸಕಲಾಪುರದ ಹಟ್ಟಿ ಗ್ರಾಮದಲ್ಲಿ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಮತ್ತು ಭಾರತೀಯ ಜನಕಲಾ ಸಮಿತಿ ಚಿತ್ರದುರ್ಗ ಇವರ ಸಹಯೋಗದಲ್ಲಿ ಸಾರ್ವಜನಿಕರಿಗೆ ನೀರಿನ ಸಂರಕ್ಷಣೆ, ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವಿಕೆ, ಅರಣ್ಯ ರಕ್ಷಣೆ, ಮತ್ತು ಸ್ವಚ್ಛತೆ, ನೈರ್ಮಲ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬೀದಿ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಗೌರವ ಅಧ್ಯಕ್ಷೆ ದಯಾ ಪುತ್ತೂರ್ಕರ್ ಮಾತನಾಡಿ ನೀರಿನ ಸಂರಕ್ಷಣೆ, ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವಿಕೆ, ಅರಣ್ಯ ರಕ್ಷಣೆ, ಮತ್ತು ಸ್ವಚ್ಛತೆ, ನೈರ್ಮಲ್ಯದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬೀದಿ ನಾಟಕಗಳನ್ನು ನಡೆಸಲಾಗುತ್ತದೆ. ಕಲಾವಿದರು ತಮ್ಮ ಪ್ರದರ್ಶನಗಳ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಎತ್ತಿ ತೋರಿಸಿ,
ಪ್ರೇಕ್ಷಕರೊಂದಿಗೆ ಸಂವಾದ ನಡೆಸಿ, ಪರಿಸರ ಬದಲಾವಣೆ ತರಲು ಅವರನ್ನು ಪ್ರೋತ್ಸಾಹಿಸುತ್ತಾರೆ. ಈ ತರದ ಕಾರ್ಯಕ್ರಮಗಳಿಗೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಅವರಿಗೆ ಪ್ರೋತ್ಸಾಹಿಸಬೇಕು ಮತ್ತು ತಮ್ಮ ಮನೆಯ ಸುತ್ತ ಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಕಸವನ್ನು ಸಂಗ್ರಹಿಸಿ ಬೇರ್ಪಡಿಸಿ ಸೂಕ್ತವಾಗಿ ವಿಲೇವಾರಿ ಮಾಡಬೇಕು ಎಂದು ಸಲಹೆ ನೀಡಿದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಸದಸ್ಯೆ ಲೇಖಕಿ ಶಾರದಾ ಜೈರಾಂ ಮಾತನಾಡಿ ಮರಗಳ ನಾಶದಿಂದ ದಿನೇ ದಿನೇ ತಾಪಮಾನ ಏರಿಕೆಗೆ ಕಾರಣವಾಗಿದೆ ಆದಷ್ಟು ಮನೆಗೆ ಒಂದರಂತೆ ಸಸಿ ನೆಡಿ, ಯಥೇಚ್ಛವಾಗಿ ಶುದ್ಧ ನೀರು ಕುಡಿಯಿರಿ, ರಾಸಾಯನಿಕ ಕ್ರಿಮಿನಾಶಕ ಔಷಧಗಳ ಬಳಕೆ ತಗ್ಗಿಸಿ ಸಾವಯವ ಗೊಬ್ಬರ ಹಾಕಿ ಬೆಳೆ ಬೆಳೆಯುವ ಕಡೆ ಗಮನಹರಿಸುವುದು ಅತ್ಯಗತ್ಯ ಹಾಗೆಯೇ ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕಿ ಸಾಹಿತಿ ತಿಪ್ಪಮ್ಮ, ಜಯದೇವ ಮೂರ್ತಿ, ಭಾರತೀಯ ಜನಕಲಾ ಸಮಿತಿ ಸದಸ್ಯರಾದ ಜಯದೇವ್ ಮೂರ್ತಿ, ತಿಪ್ಪೀರಮ್ಮ ಸಕಲಾಪುರದಟ್ಟಿ, ಕವಯಿತ್ರಿ ಡಾ.ಗೌರಮ್ಮ, ಶಿವರುದ್ರಪ್ಪ ಪಂಡ್ರಹಳ್ಳಿ, ಚನ್ನಬಸಪ್ಪ, ಯಲ್ಲಪ್ಪ, ಶ್ರೀನಿವಾಸ, ಶಶಿಕಲಾ, ಆಂಜನೇಯ, ಪಂಚಾಕ್ಷರಯ್ಯ ಸೇರಿದಂತೆ ಇತರರು ಇದ್ದರು.

