ಮಹಿಳಾ ಕಾಲೇಜು ಕಟ್ಟಡ ನಿರ್ಮಾಣಕ್ಕೆ ವಿದ್ಯಾರ್ಥಿಗಳಿಂದ ತೀವ್ರ ವಿರೋಧ

News Desk
- Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗದ ಆವರಣದಲ್ಲಿ ಸರ್ಕಾರಿ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಆಗದಂತೆ ಸರ್ಕಾರಿ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ  ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ನಗರದ ವಿಜ್ಞಾನ ಕಾಲೇಜು ಮುಂಭಾಗದಿಂದ ವಿದ್ಯಾರ್ಥಿಗಳು ಜಾಥಾವನ್ನು ನಡೆಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ. ನಾವು ಮಹಿಳಾ ಶಿಕ್ಷಣಕ್ಕೆ ಅಥವಾ ಮಹಿಳಾ ಕಾಲೇಜ್ ನಿರ್ಮಾಣಕ್ಕೆ ಯಾವುದೇ ರೀತಿಯ ವಿರೋಧಿಗಳಲ್ಲ, ಮಹಿಳಾ ಶಿಕ್ಷಣವನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಆದರೆ, ಸೈನ್ಸ್ ಕಾಲೇಜಿಗೆ ಮೀಸಲಾದ ಆವರಣವನ್ನು ಬಳಸಿ ಮತ್ತೊಂದು ಕಾಲೇಜ್ ನಿರ್ಮಿಸುವ ತೀರ್ಮಾನವು ಅಯೋಜಿತ, ಅಸೈಂಟಿಫಿಕ್ ಹಾಗೂ ಶೈಕ್ಷಣಿಕವಾಗಿ ಅನ್ಯಾಯಕರವಾಗಿದೆ.

- Advertisement - 

ಈ ಆವರಣದಲ್ಲಿ ಈಗಾಗಲೇ ಸುಮಾರು 4050 ವರ್ಷಗಳಿಂದ ಇರುವ ಅಪರೂಪದ ಮರಗಳು, ಹಸಿರು ವಾತಾವರಣ ಮತ್ತು ಜೀವವೈವಿಧ್ಯವಿದ್ದು, ಇದು ವಿಜ್ಞಾನ ಶಿಕ್ಷಣದ ಅವಿಭಾಜ್ಯ ಭಾಗವಾಗಿದೆ ಹಾಗಾಗಿ ವಿಜ್ಞಾನ ಕಾಲೇಜು ಮುಂಭಾಗದಲ್ಲಿ ಸರ್ಕಾರಿ ಮಹಿಳಾ ಕಾಲೇಜು ಕಟ್ಟಡವನ್ನ ನಿರ್ಮಾಣ ಮಾಡದಂತೆ ನಿರ್ಬಂಧಿಸಬೇಕೆಂದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಕಾಲೇಜು ವಿದ್ಯಾರ್ಥಿ ಸಲೀಂ ಮಾತನಾಡಿ ಕಾಲೇಜು ಆವರಣದಲ್ಲಿ ನಿರ್ಮಾಣ ಕಾರ್ಯ ಆರಂಭವಾದರೆ ವಿದ್ಯಾರ್ಥಿಗಳ ಓಪನ್ ಸ್ಪೇಸ್ ಕಳೆದುಹೋಗುತ್ತದೆ. ಶೈಕ್ಷಣಿಕ ಚಟುವಟಿಕೆಗಳಿಗೆ ಅಡಚಣೆ ಉಂಟಾಗುತ್ತದೆ, ಹಳೆಯ ಮರಗಳು ಮತ್ತು ಪರಿಸರಕ್ಕೆ ಹಾನಿಯಾಗುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಒಂದು ಶೈಕ್ಷಣಿಕ ಸಂಸ್ಥೆಯ ಮೂಲಸೌಕರ್ಯವನ್ನು ನಾಶಪಡಿಸಿ ಮತ್ತೊಂದು ಸಂಸ್ಥೆ ನಿರ್ಮಿಸುವುದು ವೈಜ್ಞಾನಿಕವೂ ಅಲ್ಲ ಎಂದು ತಿಳಿಸಿದರು.

- Advertisement - 

ಚಿತ್ರದುರ್ಗದ ಸುಮಾರು 75 ವರ್ಷದ ಇತಿಹಾಸ ಹೊಂದಿರುವ ಸರ್ಕಾರಿ ವಿಜ್ಞಾನ ಕಾಲೇಜಿಗೆ ತಜ್ಞರ ಸಮಿತಿ ನೇಮಿಸಿ, ಇದರ ಐತಿಹಾಸಿಕ ಹಾಗೂ ಶೈಕ್ಷಣಿಕ ಮಹತ್ವ ಪರಿಗಣಿಸಿ ಪಾರಂಪರಿಕ ಕಟ್ಟಡ ಎಂದು ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.

ಮಧ್ಯ ಕರ್ನಾಟಕದ ಹೆಸರಾಂತ ಹಾಗೂ ಅತಿ ದೊಡ್ಡ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾಗಿರುವ ನಮ್ಮ ಸರ್ಕಾರಿ ವಿಜ್ಞಾನ ಕಾಲೇಜಿಗೆ ಸರ್ಕಾರದ ಅನುದಾನವನ್ನು ಒದಗಿಸಿ, ಸಂಶೋಧನೆ, ಮೂಲಸೌಕರ್ಯ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು.

ಚುನಾವಣೆಯ ಸಮಯದಲ್ಲಿ ನಮ್ಮ ಕಾಲೇಜು ಆವರಣವನ್ನು ಮತ ಎಣಿಕೆ ಅಥವಾ ಇತರೆ ಚುನಾವಣಾ ಕಾರ್ಯಗಳಿಗೆ ಬಳಸುವುದನ್ನು ನಿಲ್ಲಿಸಿ, ಅದಕ್ಕಾಗಿ ಬೇರೆ ಸೂಕ್ತ ಕಟ್ಟಡವನ್ನು ನಿರ್ಮಿಸಬೇಕು ಅಥವಾ ಗುರುತಿಸಬೇಕು, ಏಕೆಂದರೆ ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ನಿರಂತರ ಅಡಚಣೆ ಉಂಟಾಗುತ್ತಿದೆ.

ಸೈನ್ಸ್ ಕಾಲೇಜ್ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರೀಯ ವಿದ್ಯಾಲಯವನ್ನು ಆದಷ್ಟು ಬೇಗ ಬೇರೆ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು, ಇದರಿಂದ ಸರ್ಕಾರಿ ವಿಜ್ಞಾನ ಕಾಲೇಜಿನ ಆವರಣವನ್ನು ಸಂಪೂರ್ಣವಾಗಿ ಶೈಕ್ಷಣಿಕ ಉದ್ದೇಶಕ್ಕೆ ಬಳಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ವಿಜ್ಞಾನ ಕಾಲೇಜ್ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಇದ್ದರು.ಪ್ರತಿಭಟನೆಯಲ್ಲಿ ಕಾಲೇಜಿನ ಹಳೆ ವಿಧ್ಯಾರ್ಥಿಗಳಾದ ಶಂಕರ್,ಕಾಲೇಜು ಅಭಿವೃಧ್ದಿ  ಸದಸ್ಯ ಪ್ರಕಾಶ್ ರಾಮಾನಾಯ್ಕ್, ಪರಿಸರವಾದಿ ಸ್ವಾಮಿ,ಸಲೀಂ ,ರವೀಂದ್ರ,ನಾಗರಾಜ್ ಸಂಗಂ, ಡಾ ದೀಕ್ಷಿತ್, ತರುಣ್,ಮಾರುತಿ ,ಪ್ರವೀಣ್ ಮತ್ತಿತರ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

Share This Article
error: Content is protected !!
";