ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಸರ್ಕಾರಿ ಜಾಗಗಳ ಉಳಿಸುವಿಕೆಗೆ ಹಾಗೂ ತಾಲೂಕು ಅಭಿವೃದ್ಧಿಗಳಿಗೆ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಹೋರಾಟಗಳಿಗೆ ನೀರೆರೆಚುವಂತೆ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಒತ್ತುವರಿಯಾಗಿರುವ ಸರ್ಕಾರಿ ಜಾಗಗಳನ್ನು ಉಳಿಸುವಂತೆ ಹಲವು ಬಾರಿ ನಾವು ಮನವಿ ಸಲ್ಲಿಸಿದರು ಅಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ನಿರ್ಲಕ್ಷದೋರಣೆ ಖಂಡಿಸಿ ಜನವರಿ 26ರಂದು ಕಪ್ಪು ಬಾವುಟ ಪ್ರದರ್ಶನ ಮಾಡಲಿದ್ದೇವೆ ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ ಎಸ್ ಚಂದ್ರಶೇಖರ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಸೋಮೇಶ್ವರ ಕುಂಟೆ, ಭಗತ್ ಸಿಂಗ್ ಕ್ರೀಡಾಂಗಣದ ಹಿಂಭಾಗದ ಸರ್ಕಾರಿ ಜಮೀನು ಒಳಗೊಂಡಂತೆ ಹಲವು ಪ್ರಕರಣಗಳು ಬಗೆಹರಿಯಬೇಕಿದೆ.ಅಲ್ಲದೇ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ತಾಲ್ಲೂಕಿನ ಇನ್ನಿತರ ಜಮೀನು ಕಬಳಿಸಿದವರ ವಿರುದ್ಧ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ಹಲವಾರು ಪ್ರಕರಣಗಳು ನಮ್ಮೆದುರಿದ್ದು ಅಧಿಕಾರಿಗಳು ಜನವರಿ 26ರ ಒಳಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇವೆ.
ಸಂಘಟನೆ ವತಿಯಿಂದ ಈಗಾಗಲೇ ತಾಲ್ಲೂಕಿನ ಕಸಬಾ ಹೋಬಳಿ, ಗಂಗಾಧರಪುರ ಗ್ರಾಮದ ಸರ್ವೇ ನಂಬರ್ 17ರ ಸರ್ಕಾರಿ ಕುಂಟೆ 2-04 ಎ/ಗುಂ ಜಾಗವಿದ್ದು, ಸದರಿ ಜಾಗವನ್ನು ಕುಂಟೆಯಾಗಿಯೇ ಉಳಿಸಿ ಅಭಿವೃದ್ಧಿಪಡಿಸುವ ಬಗ್ಗೆ,ಭಾಷೆಟ್ಟಿ ಹಳ್ಳಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಗೋಮಾಳವಿದ್ದು, ಸದರಿ ಜಾಗದ ದಾಖಲೆಗಳನ್ನು ನಕಲು ಸೃಷ್ಟಿಸಿರುವ ಬಗ್ಗೆ, ನಗರದ ರೋಜಿಪುರ ಗ್ರಾಮದ ಸರ್ವೇ ನಂಬರ್ 93ರ 0-23 ಗುಂಟೆಯ ಆ ಖರಾಬು ಜಾಗವಿದ್ದು, ಆ ಜಾಗದಲ್ಲಿ ಖಾಸಗಿಯವರು ಕಾಮಗಾರಿಯನ್ನು ನಡೆಸುತ್ತಿದ್ದು ಅದನ್ನು ನಿಲ್ಲಿಸಲು ಕೋರಿ.ಗಂಗಾಧರಪುರ ಗ್ರಾಮದ ಸರ್ವೇ ನಂಬರ್ 124ರಲ್ಲಿನ ಸ್ಮಶಾನದ ಜಾಗದಲ್ಲಿ 25*70 ಅಡಿಗಳ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸುವ ಬಗ್ಗೆ,ದೊಡ್ಡಬಳ್ಳಾಪುರ ತಾಲ್ಲೂಕಿನ ಭಗತ್ ಸಿಂಗ್ ಕ್ರೀಡಾಂಗಣದ ಬಳಿ ಪರಿಶಿಷ್ಟ ಪಂಗಡದ ಹೆಣ್ಣುಮಕ್ಕಳ ವಿದ್ಯಾರ್ಥಿ ನಿಲಯಕ್ಕೆ ಮೀಸಲಿಟ್ಟ ಜಾಗವನ್ನು ಅತಿಕ್ರಮಿಸಲು ನಾಮಫಲಕ ಹಾಕಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಪದೇ ಪದೇ ಸರ್ಕಾರಿ ಜಾಗಗಳನ್ನು ಅತಿಕ್ರಮಿಸಲು ನಾಮಫಲಕ ನೆಡುತ್ತಿರುವ ಭೂಗಳ್ಳರ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಮನವಿ ನೀಡಿದ್ದು, ನಿರಂತರವಾಗಿ ನಮ್ಮ ಸಂಘಟನೆ ಅನುಸರಿಸಿದರೂ ಕೂಡ ಅಧಿಕಾರಿಗಳಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಹಾಗಾಗಿ ಈ ಮಾದರಿಯನ್ನು ನೋಡಿದರೆ, ಸ್ವಾತಂತ್ರ್ಯ ಹಾಗೂ ಗಣರಾಜ್ಯದ ಹಕ್ಕುಗಳು ಕೇವಲ ಭೂಗಳ್ಳರಿಗೆ ಹಾಗೂ ಭೂಗಳ್ಳರಿಗೆ ಸಹಕರಿಸುವ ಅಧಿಕಾರಿಗಳಿಗಿದೆಯೇ ಹೊರತು ಜನಸಾಮನ್ಯರಿಗಲ್ಲ ಎಂದು ಭಾಸವಾಗುತ್ತಿದೆ. ಅತಿ ಜರೂರಾಗಿ ಮೇಲ್ಕಂಡ ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕೆಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಆಶಿಸುತ್ತದೆ.
ಇಲ್ಲವಾದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ಧಿಕ್ಕರಿಸುತ್ತಾ,ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣಕ್ಕೆ ಗೌರವಸಲ್ಲಿಸಿ, ನಂತರ ಅಧಿಕಾರಿಗಳ ಭಾಷಣವನ್ನು ಖಂಡಿಸಿ, ಕಪ್ಪು ಪಟ್ಟಿ ಧರಿಸಿ ಹೋರಾಟ ಮಾಡಬೇಕೆಂದು ತೀರ್ಮಾನಿಸಿದ್ದೇವೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಪ್ರದಾನ ಕಾರ್ಯದರ್ಶಿ ಆರ್ ರಮೇಶ್. ರಾಜ್ಯ ಮುಖಂಡ ಪಿ ವಾಸು. ಜಿಲ್ಲಾ ಯುವ ಘಟಕ ಅಧ್ಯಕ್ಷ ರಂಜಿತ್ ಗೌಡ. ತಾಲೂಕು ಅಧ್ಯಕ್ಷ ವಿನಯ ಆರಾಧ್ಯ. ತಾಲೂಕು ಕಾರ್ಯದರ್ಶಿ ಪ್ರದೀಪ್ ಕುಮಾರ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

