ಹೋರಾಟಗಾರ ಮಾರಾಟಗಾರನಾದಾಗ ಹೋರಾಟಗಳು ಅರ್ಥ ಕಳೆದು ಕೊಳ್ಳುತ್ತವೆ-ರೂಪೇಶ್ ರಾಜಣ್ಣ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕನ್ನಡದ ಹಿತಾಸಕ್ತಿಯನ್ನು ರಕ್ಷಿಸಲು ಒಂದು ಆಂದೋಲನವೇ ಆಗಬೇಕಿದೆ. ಏಕೆಂದರೆ ಆಳುವ ಸರ್ಕಾರಗಳು ಕನ್ನಡಿಗರ ಹಿತಾಸಕ್ತಿ ಯನ್ನು ಕಾಯುವಲ್ಲಿ ನಿರ್ಲಕ್ಷ್ಯ ಧೋರಣೆ ತಾಳುತ್ತಿವೆ. ಆದ್ದರಿಂದ ಕನ್ನಡಪರ ಸಂಘಟನೆಗಳು ಸರ್ಕಾರಗಳನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ. ಹೋರಾಟಗಾರ ಹೋರಾಟಗಾರನಾಗಿದ್ದರೆ ಹೋರಾಟಗಳಿಗೆ ಅರ್ಥ ಇರುತ್ತದೆ. ಹೋರಾಟಗಾರನು ಮಾರಾಟಗಾರನಾದರೆ ಹೋರಾಟಗಳು ಅರ್ಥ ಕಳೆದುಕೊಳ್ಳುತ್ತವೆ. ಆದ್ದರಿಂದ ಭಾಷೆ, ನೆಲ, ಜಲ, ಗಡಿ ವಿಚಾರಗಳಲ್ಲಿ ಯಾವುದೇ ರಾಜಿ ಇರಬಾರದು ಎಂದು ಯುವ ಕರ್ನಾಟಕ ವೇದಿಕೆ ಸಂಸ್ಥಾಪಕ ಅಧ್ಯಕ್ಷ ರೂಪೇಶ್ ರಾಜಣ್ಣ ಹೇಳಿದರು.

      ನಗರದ ರಾಜಕುಮಾರ ಕಲಾ ಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಯುವ ಕರ್ನಾಟಕ ವೇದಿಕೆ ತಾಲೂಕು ಶಾಖೆಯನ್ನು ಉದ್ಘಾಟನಾ ಸಮಾರಂಭದಲ್ಲಿ ರೂಪೇಶ್ ರಾಜಣ್ಣ ಮಾತನಾಡಿ ಕನ್ನಡ ಭಾಷೆ, ಬದುಕು ವಿಚಾರದಲ್ಲಿ ರಾಜ್ಯದ ಯುವಕರನ್ನು ಸಂಘಟಿಸಿ ಅವರಲ್ಲಿ ನಾಡು ನುಡಿಯ ಬಗ್ಗೆ ಅರಿವು ಮೂಡಿಸುವುದು ಯುವ ಕರ್ನಾಟಕ ವೇದಿಕೆಯ ಪ್ರಮುಖ ಗುರಿಯಾಗಿದೆ. ನವ ಪೀಳಿಗೆ ಭಾಷಾ ಸಮಸ್ಯೆಯ ಚಳುವಳಿಗಳ ಬಗ್ಗೆ ಜಾಗೃತರಾದಾಗ ಮಾತ್ರ ಹೋರಾಟಗಳಿಗೆ ಹೊಸ ರೂಪ ಬರುತ್ತದೆ. ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕನ್ನಡ ಭಾಷೆ ಬಗ್ಗೆ ಯಾವತ್ತೂ ಸಮಸ್ಯೆ ಇಲ್ಲ. ಇಲ್ಲಿನ ಹಿರಿಯ ಹೋರಾಟಗಾರರು ಕನ್ನಡ ಭಾಷೆಗೆ ಗಟ್ಟಿ ನೆಲೆ ಒದಗಿಸಿದ್ದಾರೆಂದು ಕೇಳಿದ್ದೇನೆ.

- Advertisement - 

ಆದರೆ ಇಲ್ಲಿ ಕನ್ನಡಿಗರಿಗೆ ಹಲವಾರು ಸಮಸ್ಯೆಗಳಿವೆ. ಸ್ಥಳೀಯರಿಗೆ ವಂಚಿತವಾಗುತ್ತಿರುವ ಉದ್ಯೋಗ ಗಳು, ಪರಭಾಷಾ ವಲಸಿಗರ ಹಾವಳಿ ಪ್ರಮುಖ ಸಮಸ್ಯೆಯಾಗಿದ್ದು ಅದರಲ್ಲೂ ತಾಲೂಕಿನಲ್ಲಿ ಕೈಗಾರಿಕೆಗಳು ಹೆಚ್ಚಾಗುವುದರ ಜೊತೆಗೆ ಉದ್ಯಮಗಳೆಲ್ಲವೂ ಉತ್ತರಬಾರತದವರ ಕೈನಲ್ಲಿವೆ. ಇಲ್ಲಿನ ಬಹುತೇಕ ಉದ್ಯೋಗಗಳು ವಲಸಿಗರ ಪಾಲಾಗಿವೆ. ಇದರಿಂದ ಸ್ಥಳೀಯರಿಗೆ ಉದ್ಯೋಗಗಳು ವಂಚನೆಯಾಗುತ್ತಿವೆ. ಇದೊಂದು ಗಮನಾರ್ಹ ವಿಚಾರವಾಗಿದ್ದು ಯುವ ಕರ್ನಾಟಕ ವೇದಿಕೆ ಹೋರಾಟ ಮಾಡಿ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ದೊಡ್ಡಬಳ್ಳಾಪುರ ನಗರದಲ್ಲಿ ನೇಕಾರಿಕೆ ಪ್ರಮುಖ ಉದ್ಯಮವಾಗಿದ್ದು ಇದಕ್ಕೂ ಸಹಾ ವಲಸಿಗ ನೇಕಾರರು ಲಗ್ಗೆ ಇಟ್ಟಿದ್ದಾರೆ. ಈ ಬಗ್ಗೆ ಸ್ಥಳೀಯರಿಂದ ಸರಿಯಾದ ಮಾಹಿತಿ ಸಂಗ್ರಹಿಸಿ ಸ್ಥಳೀಯ ನೇಕಾರ ಕಾರ್ಮಿಕರ ಹಿತಾಸಕ್ತಿ ಯನ್ನು ಕಾಪಾಡಲು ಸೂಕ್ತ ಹೋರಾಟ ರೂಪಿಸುವುದು ನಮ್ಮ ಸಂಘಟನೆಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ರೂಪೇಶ್ ರಾಜಣ್ಣ ಹೇಳಿದರು.

    ಹಿರಿಯ ಕನ್ನಡಪರ ಹೋರಾಟಗಾರ ತ. ನ. ಪ್ರಭುದೇವ್ ಮಾತನಾಡಿ ಕಾಲ ಬದಲಾದಂತೆ ಹೋರಾಟಗಳ ಸ್ವರೂಪಗಳು ಬದಲಾಗುತ್ತವೆ. ಪ್ರಸ್ತುತ ಸನ್ನಿವೇಶದಲ್ಲಿ ಹೊಸ ಯುವ ಪೀಳಿಗೆ ಕನ್ನಡ ಭಾಷೆಯ ಸಮಗ್ರ ಹೋರಾಟಗಳಿಗೆ ಕೈ ಜೋಡಿಸಬೇಕಿದೆ.ಹಾಗಾಗಿ ಯುವಕರ ಆಶಯಗಳಿಗೆ ತಕ್ಕಂತೆ ಹೋರಾಟ ರೂಪರೇಷೆಗಳು ಬದಲಾಗುತ್ತವೆ. ಈ ನಿಟ್ಟಿನಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ ಯುವ ಕರ್ನಾಟಕ ವೇದಿಕೆ ಮುಂಬರುವ ದಿನಗಳಲ್ಲಿ ತಾಲೂಕಿನ ಸಮಗ್ರ ಚಿಂತನೆ ಗಳಿಗೆ ತನ್ನನ್ನು ತೊಡಗಿಸಿಕೊಳ್ಳಬೇಕಿದೆ. ತಾಲೂಕಿನ ಜನಪರ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಕೆಲಸ ಮಾಡುವ ಅಗತ್ಯತೆ ಹೆಚ್ಚಾಗಿದೆ ಎಂದು ಹೇಳಿದರು. 

- Advertisement - 

   ಪ್ರಾಸ್ತವಿಕ ನುಡಿಗಳನ್ನಾಡಿದ ಟಿ. ಜಿ. ಮಂಜುನಾಥ್ ದೊಡ್ಡಬಳ್ಳಾಪುರ ದಲ್ಲಿ ವಲಸಿಗರ ಹಾವಳಿ ಯಿಂದಾಗಿ ಸ್ಥಳೀಯರಿಗೆ ಉದ್ಯೋಗಗಳು ಸಿಗುತ್ತಿಲ್ಲ. ಇಲ್ಲಿನ ಯಾವುದೇ ಕಾರ್ಖಾನೆಗಳಲ್ಲಿ ವಲಸಿಗರದೆ ಪ್ರಾಬಲ್ಯವಾಗಿದೆ. ಜೊತೆಗೆ ತಾಲೂಕಿನ ಹಲವಾರು ಜ್ವಲಂತ ಸಮಸ್ಯೆಗಳಿಗೆ ಸುಮಾರು ವರ್ಷಗಳಿಂದ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಹಲವಾರು ವರ್ಷಗಳಿಂದ ಹೋರಾಟಗಾರರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಹೋರಾಟಗಳಿಗೆ ಸರಿಯಾದ ಬೆಂಬಲ ಸಿಗದ ಕಾರಣ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ. ರೂಪೇಶ್ ರಾಜಣ್ಣ ರವರಂತಹ ದಿಟ್ಟ ನಾಯಕತ್ವ ಇರುವಂತಹ ಯುವ ಕರ್ನಾಟಕ ವೇದಿಕೆ ಮುಖಾಂತರ ಮುಂಬರುವ ದಿನಗಳಲ್ಲಿ ತಾಲೂಕಿನ ಸಮಗ್ರ ಸಮಸ್ಯೆಗಳ ಬಗ್ಗೆ ಹೋರಾಟಗಳನ್ನು ರೂಪಿಸಲಾಗುವುದು ಎಂದು ಹೇಳುದರು.

     ಕಾರ್ಯಕ್ರಮದ ಮೊದಲಿಗೆ ಯುವ ಕರ್ನಾಟಕ ವೇದಿಕೆಯ ರಾಜ್ಯ ಗೌರವಧ್ಯಕ್ಷರಾದ ದೊಮ್ಮಲೂರು ಶ್ರೀನಿವಾಸ್ ರವರು ಸಿದ್ದಲಿಂಗಯ್ಯ ವೃತ್ತದಲ್ಲಿ ದ್ವಜಾರೋಹಣ ನೆರವೇರಿಸಿ ಸಾಹಸ ಸಿಂಹ ವಿಷ್ಣುವರ್ಧನ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಯುವ ಕರ್ನಾಟಕ ವೇದಿಕೆಯ ತಾಲೂಕು ಘಟಕದ ಉದ್ಘಾಟನೆಗೆ ಚಾಲನೆ ನೀಡಿದರು.

     ಕಾರ್ಯಕ್ರಮ ದಲ್ಲಿ ಯುವಘಟಕ ರಾಜ್ಯಾಧ್ಯಕ್ಷ ನವೀನ್ ನರಸಿಂಹ, ರಾಜ್ಯ ಸಂಘಟನಾ ಕಾರ್ಯದರ್ಶಿ ಗೋವಿಂದೆಗೌಡ, ಆಟೋ ಚಾಲಕ ಘಟಕದ ಚಂದನ್ ಗೌಡ, ನಗರ ಯುವ ಘಟಕದ ಆದಿತ್ಯ ಎನ್. ರಾಜು, ಸಿದ್ದು ದರ್ಶನ, ಕಾರ್ತಿಕ್ ಶೆಟ್ಟಿ, ವಿಜಯ್ ಕುಮಾರ್, ದರ್ಗಾಜೋಗಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷೆ ಶಶಿಕಲಾ ನಾಗರಾಜ್, ನಗರಸಭಾ ಸದಸ್ಯೆ ಪ್ರಭಾ ನಾಗರಾಜ್, ವತ್ಸಲಾ, ತಾಲೂಕು ಯುವ ಕರ್ನಾಟಕ ವೇದಿಕೆ ಅಧ್ಯಕ್ಷ ತಮ್ಮೆಗೌಡ, ಉಪಾಧ್ಯಕ್ಷ ಸೋಮಣ್ಣ, ಖಜಾಂಚಿ ಮಹೇಶ್, ಪ್ರದಾನ ಕಾರ್ಯದರ್ಶಿ ಕೆ. ಎಸ್. ಕೃಷ್ಣ, ಸಂಚಾಲಕ ಶ್ರೀನಾಥ್, ಕಾಂತರಾಜ್, ಸಹ ಸಂಚಾಲಕ ಮಂಜುನಾಥ್, ಚಂದ್ರು ಶೆಟ್ಟಿ, ಸಹ ಕಾರ್ಯದರ್ಶಿ ಎಂ. ಹರ್ಷ, ರಾಮಮೂರ್ತಿ, ಕರುಣಾಕರ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

Share This Article
error: Content is protected !!
";