ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ತಾಲ್ಲೂಕಿನ ಕೊವೇರಹಟ್ಟಿ ಗ್ರಾಮದ ವಿದ್ಯಾರ್ಥಿನಿ ವರ್ಷಿತಾ ಕೊಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ, ಪರಿಹಾರ ವಿತರಿಸಿದರು.
ವಿದ್ಯಾರ್ಥಿನಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಮಾಧ್ಯಮದರೊಂದಿಗೆ ಅವರು ಮಾತನಾಡಿದರು.
ಕೊವೇರಹಟ್ಟಿ ಗ್ರಾಮದ ನಿವಾಸಿ ವರ್ಷಿತಾ ಅವರು, ಚಿತ್ರದುರ್ಗ ನಗರದಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಈ ಯುವತಿಯು ಮೃತ ದೇಹ ಆ.19ರಂದು ಪತ್ತೆಯಾಗಿದೆ. ಹೋಟೆಲ್ ಸಿಬ್ಬಂದಿಯೊಬ್ಬರು ನೀಡಿದ ಮಾಹಿತಿ ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ತ್ರೀವಗತಿಯಲ್ಲಿ ನಡೆಯುತ್ತಿದ್ದು, ಪ್ರಕರಣದ ಶಂಕಿತರೊಬ್ಬರನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಶೀಘ್ರದಲ್ಲಿ ಒಂದು ಹಂತಕ್ಕೆ ಬರಲಿದ್ದು, ಯಾರೇ ಅಪರಾಧ ಮಾಡಿದರೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ತಿಳಿಸಿದರು.
ಸಂತ್ರಸ್ಥೆ ಕುಟುಂಬಸ್ಥರಿಗೆ ಜಿಲ್ಲಾಡಳಿತದ ವತಿಯಿಂದ ನೀಡಿದ ರೂ.2.50 ಲಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ವೈಯಕ್ತಿಕವಾಗಿ ನೀಡಿದ ರೂ.2.50 ಲಕ್ಷ ಸೇರಿದಂತೆ ಒಟ್ಟು ರೂ.5 ಲಕ್ಷದ ಪರಿಹಾರದ ಚೆಕ್ ಹಸ್ತಾಂತರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೋನೂರು ಗ್ರಾಮದ ಎನ್.ಹೆಚ್.48ರ ಖಾಲಿ ಜಾಗದಲ್ಲಿ ಆ.19ರಂದು ಮಂಗಳವಾರ ಯುವತಿಯ ಮೃತದೇಹ ಪತ್ತೆಯಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಮೃತಪಟ್ಟ ಯುವತಿಯು ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊವೇರಹಟ್ಟಿ ಗ್ರಾಮದ ನಿವಾಸಿ ವರ್ಷಿತಾ(19) ಎಂಬ ಮಾಹಿತಿ ತಿಳಿಯಿತು.
ಇನ್ಸ್‍ಪೆಕ್ಟರ್ ಮುದ್ದುರಾಜ್, ಸಬ್‍ಇನ್ಸ್‍ಪೆಕ್ಟರ್ ಸುರೇಶ, ಡಿವೈಎಸ್‍ಪಿ ಪಿ.ಕೆ.ದಿನಕರ್ ಅವರ ನೇತೃತ್ವದಲ್ಲಿ 4 ತಂಡಗಳನ್ನು ರಚಿಸಿ, ಶಂಕಿತರೊರ್ವರನ್ನು ಬಂಧಿಸಿ, ವಿಚಾರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಉಪಸ್ಥಿತರಿದ್ದರು.

