ಪರೀಕ್ಷಾ ಸಮಯದಲ್ಲಿ ಏಕಾಗ್ರತೆ ವೃದ್ಧಿಗೆ “ವಿದ್ಯಾರ್ಥಿ ಚೇತನ” ಸಹಕಾರಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ವೃದ್ಧಿಸಲು ಆಯುಷ್ ಇಲಾಖೆಯ
ವಿದ್ಯಾರ್ಥಿ ಚೇತನಕಾರ್ಯಕ್ರಮವು ಅತ್ಯಂತ ಸಹಕಾರಿಯಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ಎಸ್. ನಾಗಸಮುದ್ರ ಅವರು ತಿಳಿಸಿದರು.

ಚಿತ್ರದುರ್ಗ ತಾಲ್ಲೂಕಿನ ಬಹದ್ದೂರ್ ಘಟ್ಟದ ಮೊರಾರ್ಜಿ ವಸತಿ ಶಾಲೆಯಲ್ಲಿ ಸೋಮವಾರ ಎಸ್‍ಸಿಎಸ್‍ಪಿ ಯೋಜನೆಯಡಿ ಜಿಲ್ಲಾ ಆಯುಷ್ ಇಲಾಖೆ ಹಾಗೂ ಕೋಗುಂಡೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ಚೇತನಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

- Advertisement - 

ವಿದ್ಯಾರ್ಥಿ ಚೇತನವು ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ವಿದ್ಯಾರ್ಥಿಗಳ ಮಾನಸಿಕ ಮತ್ತು ಶಾರೀರಿಕ ಸದೃಢತೆಗಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಪರೀಕ್ಷಾ ಸಂದರ್ಭದಲ್ಲಿ ಬೇಕಾದ ಏಕಾಗ್ರತೆಗಾಗಿ ಧ್ಯಾನ ಮತ್ತು ಪ್ರಾಣಾಯಾಮ ಇಲ್ಲಿ ಹೇಳಿಕೊಡಲಾಗುವುದು. ಅಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಚ್ಯವನಪ್ರಾಶದಂತಹ ಔಷಧಿ ವಿತರಿಸಲಾಗುವುದು. ಈ ಕಾರ್ಯಕ್ರಮವು ಸತತ ಮೂರು ತಿಂಗಳ ಕಾಲ ಈ ವಸತಿ ಶಾಲೆಯಲ್ಲಿ ನಡೆಯಲಿದ್ದು, ವೈದ್ಯಾಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ ಆರೋಗ್ಯ ತಪಾಸಣೆ ಹಾಗೂ ಸಲಹೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ವಸತಿ ಶಾಲೆ ಪ್ರಾಂಶುಪಾಲ ಅಜ್ಜಯ್ಯ ಮಾತನಾಡಿ, ಭಾರತೀಯ ಮೂಲ ವೈದ್ಯ ಪದ್ಧತಿಯಾದ ಆಯುರ್ವೇದವನ್ನು ಉಳಿಸಿ ಬೆಳೆಸಬೇಕಾದ್ದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

- Advertisement - 

ಕೋಗುಂಡೆ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಜಿ.ಸೋಮಶೇಖರ್ ರಾಥೋಡ್ ಅವರು ಪ್ರಾಸ್ತಾವಿಕ ನುಡಿಗಳ ಮೂಲಕ ಯೋಜನೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಕೊಳಾಳ್ ವೈದ್ಯಾಧಿಕಾರಿ ಡಾ. ಯಶವಂತ್ ಅವರು ವಿದ್ಯಾರ್ಥಿಗಳಿಗೆ ಆಯುರ್ವೇದದ ಮಹತ್ವದ ಬಗ್ಗೆ ತಿಳಿಹೇಳಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ನಾಲ್ಕನೇ ಸರಣಿಯ ಅಂಗವಾಗಿ ವಿದ್ಯಾರ್ಥಿಗಳಿಗೆ ವ್ಯಾಧಿಕ್ಷಮತ್ವ ಹೆಚ್ಚಿಸುವ ಚ್ಯವನಪ್ರಾಶ ಹಾಗೂ ವೈಯಕ್ತಿಕ ಸ್ವಚ್ಛತೆಗಾಗಿ ಕೇಶ ತೈಲವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಅಂಜಿನಪ್ಪ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

Share This Article
error: Content is protected !!
";