ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸರ್ದಾರ್ ವಲ್ಲಭಾಯ್ ಪಟೇಲ್ ರವರ ಜನ್ಮದಿನದ ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ಪೊಲೀಸ್ ಇಲಾಖೆ ವತಿಯಿಂದ ಗುರುವಾರ ಭೀಮನಬಂಡೆ ಸಮೀಪದ ಯಾಜ್ಞವಲ್ಕ್ಯ ಪದವಿಪೂರ್ವ ಕಾಲೇಜಿನಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳು ಸ್ವತಂತ್ರ ಹೋರಾಟಗಾರರ, ರಾಷ್ಟ್ರ ನಾಯಕರ ಜೀವನ ಚರಿತ್ರೆಗಳನ್ನು ತಿಳಿದುಕೊಳ್ಳಬೇಕು, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಮತ್ತು
ಇಂದಿನ ಯಾಂತ್ರಿಕ ಬದುಕಿನ ಹಾಗೂ ಪಠ್ಯಕ್ರಮಗಳ ಒತ್ತಡದಿಂದ ವಿದ್ಯಾರ್ಥಿಗಳು ಹೊರಬಂದು ಮಾನಸಿಕವಾಗಿ ಸದೃಢವಾಗಿ ಮುಂದಿನ ವಾರ್ಷಿಕ ಪರೀಕ್ಷೆಗಳ ಸವಾಲನ್ನು ಎದುರಿಸಬೇಕು ಎಂದು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಆನಂದ್ ತಿಳಿಸಿದರು.
ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮೊದಲನೇ ಮತ್ತು ಎರಡನೇ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆ ವತಿಯಿಂದ ನಗದು ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪರಮೇಶ್, ಖಾಸೀಂ, ಸಂಸ್ಥೆಯ ಆಡಳಿತಾಧಿಕಾರಿ ಶ್ರೀನಿವಾಸ್ ಮೂರ್ತಿ, ಉಪನ್ಯಾಸಕರಾದ ವೇಣುಕುಮಾರ್, ಪ್ರವೀಣ್, ಶಿವಾನಂದ್, ವರದೇ ಗೌಡ, ನೇತ್ರಾವತಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

