ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ : 2024-25 ನೇ ಶೈಕ್ಷಣಿಕ ಸಾಲಿನ ಪ್ರೌಢಶಾಲಾ ವಿಭಾಗದ ಜಿಲ್ಲಾಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯು ಶಿವಮೊಗ್ಗದ ಮೇರಿ ಇಮ್ಯಾಕುಲೆಟ್ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದಿದ್ದು, ಈ ಸ್ಪರ್ಧೆಯಲ್ಲಿ ಸಾಗರ, ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ, ಸೊರಬ, ಈ ಆರು ತಾಲೂಕುಗಳಿಂದ ಆರು ತಂಡಗಳು ಮಾನವ ಕುಲದ ಪ್ರಯೋಜನಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ಮೂಲ ವಿಷಯವನ್ನು ಆಧಾರವಾಗಿಟ್ಟುಕೊಂಡು ಪ್ರದರ್ಶನವನ್ನು ನೀಡಿದವು.
ಈ ಸ್ಪರ್ಧೆಯಲ್ಲಿ ಪದ್ಮದೀಪ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಸತತ ಮೂರನೆಯ ಬಾರಿ ಪ್ರಥಮ ಸ್ಥಾನವನ್ನು ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಪ್ರಥಮ ಸ್ಥಾನ ಪಡೆದ ಈ ವಿಜ್ಞಾನ ನಾಟಕವನ್ನು ಸಜಿ.ಆರ್.ತುಮರಿ ನಿರ್ದೇಶಿಸಿ ರಚನೆ ಮಾಡಿದ್ದು, ಸಂಗೀತವನ್ನು ದಿಗ್ವಿಜಯ ಹೆಗ್ಗೋಡು ನೀಡಿರುತ್ತಾರೆ. ರಂಗಸಜ್ಜಿಗೆಯನ್ನು ಪ್ರಕಾಶ್.ಯು.ಕುಂಬಾರ್ ನಿರ್ಮಾಣ ಮಾಡಿದ್ದು, ರಂಗದಲ್ಲಿ ಪದ್ಮದೀಪ ಪ್ರೌಢಶಾಲೆಯ ತಿಲಕ್.ಜಿ.ಎಲ್, ಇಂದ್ರಜಿತ್.ವಿ, ಗಣೇಶ್.ಕೆ.ಆರ್, ಯೋಗೇಶ್.ಜಿ.ಹೆಚ್, ಆದಿತ್ಯ.ಸಿ.ಪಿ, ಗೌತಮ್.ಹೆಚ್.ಎಸ್, ರಕ್ಷಾ.ಎಸ್.ವಿ, ಸಾಕ್ಷಿ.ಎಸ್.ಎ ವಿದ್ಯಾರ್ಥಿಗಳು ಮಲ್ಲಾಡಿಹಳ್ಳಿಯ ತಿರುಕನಾಮಾಂಕಿತ ನಿಸ್ವಾರ್ಥ ಸೇವಾ ಜೀವಿ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಜೀವನಾಧಾರಿತ ನಾಟಕದಲ್ಲಿ ಸ್ವಚ್ಛತೆಯ ಮೂಲಕ ದೈಹಿಕ ನೈರ್ಮಲ್ಯ ಹಾಗೂ ಯೋಗ, ವ್ಯಾಯಾಮ, ಆಯುರ್ವೇದ, ಪ್ರಕೃತಿ ಪ್ರೀತಿ ಇವೆಲ್ಲವುಗಳಿಂದ ಮಾನಸಿಕ ನೈರ್ಮಲ್ಯತೆಯನ್ನು ಹೇಗೆ ಶುಚಿಗೊಳಿಸಿಕೊಳ್ಳಬೇಕೆಂಬ ಕಥಾ ಹಂದರದೊಂದಿಗೆ ಪ್ರೇಕ್ಷಕರ ಮನಮುಟ್ಟುವಂತೆ ಅಭಿನಯಿಸಿ ಸತತ ಮೂರನೇ ಬಾರಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ನಾಟಕಕ್ಕೆ ಸಂಪೂರ್ಣ ಸಹಕಾರ ನೀಡಿರುವ ಪದ್ಮದೀಪ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಕಿರಣ್ ಕುಮಾರ್.ಎಸ್.ಯು, ಪ್ರಾಂಶುಪಾಲರಾದ ತಂಗರಾಜು.ಕೆ ಹಾಗೂ ಭದ್ರಾವತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ನಾಗೇಂದ್ರಪ್ಪರವರು ಕೂಡ ಅಭಿನಂದನೆಗಳನ್ನು ತಿಳಿಸಿ ಹಿಂದಿನ ಬಾರಿಯಂತೆ ಈ ಬಾರಿಯೂ ಕೂಡ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ವಿದ್ಯಾರ್ಥಿಗಳು ಆಯ್ಕೆಯಾಗಲಿ ಎಂದು ಅಭಿನಂದಿಸಿದ್ದಾರೆ.