ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕೋವಿಡ್ ಸೃಷ್ಠಿಸಿದ ತಲ್ಲಣ, ರಾಜ್ಯ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆ, ಜಿಲ್ಲಾ ಉಸ್ತುವಾರಿ ಸಚಿವರು, ಹಿರಿಯೂರು ಕ್ಷೇತ್ರದ ಶಾಸಕರ ಉಡಾಫೆ ಉತ್ತರಗಳಿಂದ ಬಸ್ ಸಂಚಾರದಲ್ಲಿ ಭಾರೀ ವ್ಯತ್ಯಯ ಆಗುತ್ತಿದ್ದು ಬಸ್ಸಿಗಾಗಿ ವಿದ್ಯಾರ್ಥಿಗಳು, ವಯೋವೃದ್ಧರು, ಕೂಲಿ ಕಾರ್ಮಿಕರು ನಿತ್ಯ ಹಿಡಿ ಶಾಪ ಹಾಕುವ ಪರಿಸ್ಥಿತಿ ಹಿರಿಯೂರು ಕ್ಷೇತ್ರದಲ್ಲಿ ಕಂಡು ಬರುತ್ತಿದೆ.
ಕೋವಿಡ್ ಸೃಷ್ಠಿಸಿದ ಸಂಕಷ್ಟದ ನಂತರ ಖಾಸಗಿ ಬಸ್ ಸಂಚಾರ ವ್ಯವಸ್ಥೆಯಲ್ಲಿ ತುಂಬಾ ವ್ಯತ್ಯಾಸಗಳಾಗಿ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಕೆಲವು ಖಾಸಗಿ ಬಸ್ ಗಳ ಸಂಚಾರವನ್ನು ಮಾಲೀಕರು ಸ್ಥಗಿತಗೊಳಿಸಿದರು.
ಇನ್ನೂ ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಆರಂಭಿಸಿದ ಶಕ್ತಿ ಯೋಜನೆಯ ಭಾರೀ ಹೊಡೆತದಿಂದಾಗಿ ಖಾಸಗಿ ಬಸ್ ಗಳ ಸಂಚಾರದಲ್ಲಿ ಮತ್ತೊಷ್ಟು ವ್ಯತ್ಯಯವಾಗಿತು.
ಇನ್ನೇನು ಹಿರಿಯೂರು ಕೆಎಸ್ಆರ್ ಟಿಸಿ ಡಿಪೋ ಆರಂಭವಾಗಿಯೇ ಬಿಟ್ಟಿತು ಎನ್ನುವ ಆಸೆಯಲ್ಲಿ ಪ್ರಯಾಣಿಕರು ನಿಟ್ಟುಸಿರುವ ಬಿಡುವ ಮುನ್ನವೇ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಡಿಪೋ ಉದ್ಘಾಟಿಸಲು ತೋರುತ್ತಿರುವ ಉದಾಸೀನ ಮತ್ತು ಉಡಾಫೆ ಉತ್ತರಗಳಿಂದಾಗಿ ಧರ್ಮಪುರ ಹೋಬಳಿ ಸೇರಿದಂತೆ ಇಡೀ ಕ್ಷೇತ್ರದಲ್ಲಿ ಸರ್ಕಾರಿ ಬಸ್ ಪ್ರಯಾಣ ಅತ್ಯಂತ ಪ್ರಯಾಸವಾಗಿದೆ.
ಧರ್ಮಪುರದಿಂದ-ಶಿರಾ ಮಾರ್ಗವಾಗಿ ತುಮಕೂರು ಮತ್ತು ಬೆಂಗಳೂರಿನತ್ತ ಸಂಚರಿಸುವ ಮಾರ್ಗ, ಹಿರಿಯೂರು-ಚಿತ್ರದುರ್ಗಕ್ಕೆ ನಿತ್ಯ ಸಂಚರಿಸುವ ಮಾರ್ಗಗಳ ಸರ್ಕಾರಿ ಬಸ್‌ನಲ್ಲಿ ಸೀಟ್ ಸಿಗುವುದಿರಲಿ ಒಳಗಡೆ ಕಾಲಿಡಲೂ ಆಗದ ಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ನಿತ್ಯ ಬೆಳಿಗ್ಗೆ 4.30ಕ್ಕೆ ಪರಶುರಾಂಪುರದಿಂದ ಧರ್ಮಪುರಕ್ಕೆ ಬರುವ ಸಾರಿಗೆ ಬಸ್ ಗಳು ಒಮ್ಮೊಮ್ಮೆ ನಿಲ್ಲಿಸದೇ ಹೋಗುತ್ತಾರೆ. ಇದರಿಂದ ಬೆಳಿಗ್ಗೆ ನಾಲ್ಕು ಗಂಟೆಗೆ ಸುತ್ತಮುತ್ತಲಿನ ಹಳ್ಳಿಗಳಿಂದ ಬಂದು ಬಸ್ಸಿಗಾಗಿ ಕಾಯುವ ವಿದ್ಯಾರ್ಥಿಗಳು, ವಯೋವೃದ್ಧರು ಮತ್ತು ಪ್ರಯಾಣಿಕರು ಹತಾಶೆಯಿಂದ ಊರಿಗೆ ಹಿಂತಿರುಗುತ್ತಿದ್ದಾರೆ. ನಂತರದ ಸಮಯದಲ್ಲಿ ಶಿರಾಕ್ಕೆ ಬಸ್ ಇದ್ದರೂ ಪ್ರಯಾಣಿಕರಿಂದ ತುಂಬಿಕೊಂಡು ನೇತಾಡುವ ದೃಶ್ಯ ಕಂಡುಬರುತ್ತಿದೆ ಎಂದು ವಿದ್ಯಾರ್ಥಿಗಳು, ವಯೋವೃದ್ಧರು ನೋವು ತೋಡಿಕೊಂಡಿದ್ದಾರೆ.
ಧರ್ಮಪುರದಿಂದ ಬೆಂಗಳೂರಿಗೆ ಬೆಳಿಗ್ಗೆ 9.30ಕ್ಕೆ ಸಾರಿಗೆ ಸಂಸ್ಥೆಯ ಬಸ್ ಇದೆ. ಕನಿಷ್ಠ 60 ರಿಂದ 70 ಪ್ರಯಾಣಿಕರು ಕಾಯುತ್ತಿರುತ್ತಾರೆ. ಇದರಿಂದ ಬಸ್ ಹತ್ತುವುದೇ ದುಸ್ತರ. ನೂಕು ನುಗ್ಗಲಿನ ಪರಿಸ್ಥಿತಿಯಿಂದ ಜೇಬು, ಚಿನ್ನದ ಸರ ಕಳವು ಪ್ರಕರಣಗಳು ನಡೆಯುತ್ತವೆ. ಬಸ್ ಹತ್ತುವಾಗ ಕಿಟಕಿ ಮತ್ತು ಚಾಲಕರ ಬಾಗಿಲಿನಿಂದ ಜನರು ಹತ್ತುವ ದೃಶ್ಯ ನಿತ್ಯ ಕಂಡುಬರುತ್ತದೆ. ಈ ಪರಿಸ್ಥಿತಿ ಕೇವಲ ಧರ್ಮಪುರ ಕೇಂದ್ರದಲ್ಲಿ ಮಾತ್ರ ಇರದೆ ಹಿರಿಯೂರು ಬಸ್ ನಿಲ್ದಾಣದಲ್ಲೂ ನಿತ್ಯ ಕಂಡು ಬರುತ್ತಿದೆ.
ರಾಜ್ಯ ಸರ್ಕಾರ ಮಹಿಳೆಯರಿಗೆ ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಬಸ್ ಸೇವೆಯನ್ನು ನೀಡಿರುವುದರಿಂದ ಆಗಿರುವ ಅನುಕೂಲಕ್ಕಿಂತ, ಅನಾನುಕೂಲಗಳೇ ಹೆಚ್ಚಾಗಿವೆ. ಪ್ರಮುಖವಾಗಿ ಬಸ್ ಗಳಲ್ಲಿ ಕಾಲಿಡಲು ಜಾಗ ಇಲ್ಲದಿರುವುದರಿಂದ ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ವಯೋವೃದ್ಧರು ಸ್ಥಿತಿಯಂತೂ ಅಯೋಮಯವಾಗಿದೆ. ಸಚಿವರು ಡಿಪೋ ಆರಂಭಿಸಿದ ನಂತರ ಬಸ್ ಗಳ ಸಂಚಾರ ಹೆಚ್ಚಾಗಿ ವ್ಯವಸ್ಥೆ ಸುಧಾರಿಸಲಿದೆ ಎನ್ನುವ ಆಶಾಭಾವನೆ ಈಗ ಉಳಿದಿಲ್ಲ. ಡಿಪೋ ರೆಡಿಯಾಗಿ ವರ್ಷವಾಗಿದೆ. ಆದರೂ ಡಿಪೋ ಮಾತ್ರ ಆರಂಭವಾಗುತ್ತಿಲ್ಲ.
ತಾಲೂಕಿನ ಕೆಲವೆಡೆ ಸಾರಿಗೆ ಬಸ್ ತುಂಬಿ ತುಳುಕುವುದರಿಂದ ಪ್ರಯಾಣಿಕರು ಬಸ್ ಹತ್ತಲಾಗದೇ ವಯೋವೃದ್ಧರು ವಿದ್ಯಾರ್ಥಿಗಳು ಬಸ್ ನಿಂದ ಬಿದ್ದ ಘಟನೆ ಕೂಡ ನಡೆದಿವೆ. ಜೊತೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ, ಬಂದರೂ ಭರ್ತಿಯಾಗಿರುತ್ತವೆ. ತುಂಬಿ ತುಳುಕುವ ಸಾರಿಗೆ ಬಸ್ ಗಳು ಬಸ್ ನಿಲ್ದಾಣಗಳಲ್ಲಿ ನಿಲುಗಡೆ ನೀಡದೆ ಮುಂದೆ ಹೋಗುತ್ತಿವೆ. ಶಕ್ತಿ ಯೋಜನೆ ಜಾರಿ ಮಾಡಿದಾಗಿನಿಂದ ವಯೋವೃದ್ಧರು ಬಸ್ ಪ್ರಯಾಣವನ್ನೇ ತೊರೆದಿದ್ದಾರೆ. ಇನ್ನೂ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಸಮಸ್ಯೆ ಗೀಡಾಗಿದ್ದಾರೆ. ಬಸ್ ಗಳ ಸಂಖ್ಯೆ ಹೆಚ್ಚಿಸಬೇಕು.
ಬಸ್ ಗಳಲ್ಲಿ ನಡೆಯುತ್ತಿರುವ ಗಲಾಟೆಗಳನ್ನು ಸ್ಥಗಿತಗೊಳಿಸಬೇಕು. ವಯೋವೃದ್ಧರಿಗೆ ಬಸ್ಸಿನಲ್ಲಿ ವಿದ್ಯಾರ್ಥಿಗಳು ಆಸನಗಳನ್ನ ಬಿಟ್ಟುಕೊಡುವ ಸೌಜನ್ಯವನ್ನೂ ಮಾಡುತ್ತಿಲ್ಲ. ವಯೋವೃದ್ಧರ ಪರಿಸ್ಥಿತಿ ಅತ್ಯಂತ ಭಯಾನಕವಾಗಿರುತ್ತದೆ.
ಸಾರಿಗೆ ಸಂಸ್ಥೆಯ ಬಸ್ ಗಳ ಪ್ರಯಾಣ ನೆಮ್ಮದಿ ಕೆಡಿಸಿದೆ. ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಬಸ್ ಹತ್ತಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಜೀವದ ಹಂಗನ್ನು ತೊರೆದು ಪ್ರಯಾಣಿಸುವ ಪರಿಸ್ಥಿತಿ ಬಂದೋದಗಿದೆ.
“ಬಸ್ ಸಂಚಾರ ಆಪತ್ತು ತರುತ್ತಿರುವುದರಿಂದ ಜನಸಾಮಾನ್ಯರ, ಬಡವರ ಮಕ್ಕಳು, ವಯೋವೃದ್ಧರು ಜೀವಕ್ಕೆ ಬೆಲೆನೇ ಇಲ್ವಾ? ರಾಜಕಾರಣಿ ಮತ್ತು ಅಧಿಕಾರಿಗಳ ಮಕ್ಕಳು ಓದುವ ವಯಸ್ಸಿನಲ್ಲೇ ಐರಾಮಿ ಕಾರುಗಳಲ್ಲಿ ಓಡಾಡುತ್ತಾರೆ.
ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರು, ಬಡ ವಿದ್ಯಾರ್ಥಿಗಳು ಜೀವವನ್ನೇ ಪಾಣಕಿಟ್ಟು ಓಡಾಡುವ ಪರಿಸ್ಥಿತಿ ಎದುರಾಗಿದೆ. ಹಿರಿಯೂರಿನಲ್ಲಿ ಡಿಪೋ ನಿರ್ಮಾಣವಾಗಿದೆ. ಆದರೆ, ಉದ್ಘಾಟನೆಯ ಭಾಗ್ಯ ಕಾಣದೇ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಮರೀಚಿಕೆಯಾಗಿಯೇ ಉಳಿದಿದೆ.
ಗ್ರಾಮೀಣ ಭಾಗಗಳಲ್ಲಿನ ಪ್ರಯಾಣಿಕರು ಬಸ್ ಸಂಚಾರ ಇಲ್ಲದ್ದರಿಂದ ಹಿಡಿಶಾಪ ಹಾಕುಂತಾಗಿದೆ. ಸಚಿವರು ತುರ್ತಾಗಿ ಇದರ ಬಗ್ಗೆ ಗಮನಹರಿಸಿ ಡಿಪೋ ಉದ್ಘಾಟಿಸುವ ಮೂಲಕ ಗಡಿ ಭಾಗಗಳಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಲಿ ಎಂಬುದು ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರ ಒತ್ತಾಯ.
‘ಡಿಪೋ ನಿರ್ಮಾಣ ಕಾಮಗಾರಿ ಮುಗಿದಿದೆ. ಉದ್ಘಾಟನೆಯ ದಿನಾಂಕ ಗೊತ್ತಿಲ್ಲ‘. ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್‌ನಲ್ಲಿ ಓಡಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಅದಕ್ಕಾಗಿ ಸರ್ಕಾರಿ ಬಸ್ ಸಂಚಾರವನ್ನು ಮತ್ತಷ್ಟು ಹೆಚ್ಚಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಮಾಡಲಾಗುವುದು”. ಕನಕರಾಜ್, ಕೋಡಿಹಳ್ಳಿ, ಜಿಲ್ಲಾ ಸಂಚಾಲಕ್, ಎಬಿವಿಪಿ, ಚಿತ್ರದುರ್ಗ.