ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಶ್ರಮ, ಸಮರ್ಪಣೆ, ಬದ್ದತೆ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಾಗ ಯಾವ ವೃತ್ತಿಯಲ್ಲಾದರೂ ಯಶಸ್ಸು ಸಾಧಿಸಲು ಸಾಧ್ಯ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವ(ಪರೀಕ್ಷಾಂಗ) ಪ್ರೊ.ಸತೀಶ್‌ಗೌಡ ಎನ್.ಕಾನೂನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸರಸ್ವತಿ ಕಾನೂನು ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ವಿದ್ಯಾರ್ಥಿ ಕಾನೂನು ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆ, ಮಾನವ ಹಕ್ಕುಗಳ ವೇದಿಕೆ, ರೆಡ್‌ಕ್ರಾಸ್ ಘಟಕ, ಇಕೋ ಕ್ಲಬ್ ಹಾಗೂ ಕ್ರೀಡಾ ಚಟುವಟಿಕೆ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಕಷ್ಟ ಪಟ್ಟು ಓದಬೇಡಿ, ಇಷ್ಟ ಪಟ್ಟು ಓದಿ ಒಳ್ಳೆಯ ನಾಗರೀಕರಾಗಿ ಬೆಳೆದು ದೇಶದ ಅಭಿವೃದ್ದಿಗೆ ಪೂರಕವಾಗಿ, ಮಾರಕವಾಗಬೇಡಿ. ಪ್ರತಿ ಕುಟುಂಬದಲ್ಲಿಯೂ ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ಬಿತ್ತಿದರೆ ಅಪರಾಧವೆ ಇರುವುದಿಲ್ಲ. ಸ್ವಾತಂತ್ರ್ಯ ಹೋರಾಟಗಾರರು, ಸಂವಿಧಾನ ರಚನಾಕಾರರು, ರೈತರು, ಕಾರ್ಮಿಕರು, ದೇಶ ಕಾಯುವ ಸೈನಿಕರನ್ನು ಪ್ರತಿನಿತ್ಯದ ಜೀವನದಲ್ಲಿ ಎಲ್ಲರೂ ನೆನೆಪಿಸಿಕೊಳ್ಳಬೇಕು. ಇಂಗ್ಲಿಷ್ ಬರುವುದಿಲ್ಲವೆಂದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೀಳರಿಮೆಯಿಂದ ಹೊರ ಬರಬೇಕು. ಅಬ್ರಾಹಂ ಲಿಂಕನ್, ನೆಲ್ಸ್‌ನ್ ಮಂಡೇಲಾ ಇವರುಗಳು ಜೀವನದಲ್ಲಿ ಸಾಕಷ್ಟು ಅವಮಾನಗಳನ್ನು ಅನುಭವಿಸಿದ್ದಾರೆಂದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರನ್ನು ಓದಿದರೆ ಅವರ ಮಹತ್ವ ಏನೆಂಬುದು ಗೊತ್ತಾಗುತ್ತದೆ. ವಿಚಾರಗಳು ಪ್ರಚಾರಗಳಾಗಬೇಕೆ ವಿನಃ ಪ್ರಚಾರಗಳೆ ವಿಚಾರಗಳಾಗಬಾರದು. ಗ್ರಾಮೀಣ ಭಾಗದಲ್ಲಿ ಹುಟ್ಟಿದ್ದು, ಶಾಪ ಎಂದುಕೊಳ್ಳುವುದು ಬೇಡ. ರೈತ, ಕೂಲಿ ಕಾರ್ಮಿಕ ಮಗನೆಂದು ಎದೆ ತಟ್ಟಿ ಹೇಳಿಕೊಳ್ಳಿ. ನಿಮ್ಮ ಸಾಧನೆಗಳಿಂದ ತಂದೆ-ತಾಯಿಗಳಿಗೆ ಆಗುವ ಆನಂದ ಅಷ್ಟಿಷ್ಟಲ್ಲ. ಸಾಧನೆ ಮಾಡುವವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳೆ ಎನ್ನುವುದನ್ನು ಮರೆಯಬೇಡಿ ಎಂದು ಕಾನೂನು ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿದ್ಯೆ ಸಾಗರ, ಈಜಲು ಬಲು ಬೇಸರ, ಈಜಿ ದಡ ಸೇರಿದರೆ ಸುಖಸಾಗರ. ಐದು ವರ್ಷಗಳ ಕಾಲ ಕಷ್ಟಪಟ್ಟು ಓದಿದರೆ ಐವತ್ತು ವರ್ಷಗಳವರೆಗೆ ನೆಮ್ಮದಿಯಿಂದ ಇರಬಹುದು. ಮಹಾತ್ಮಗಾಂಧಿ, ಅಂಬೇಡ್ಕರ್, ಸ್ವಾಮಿವಿವೇಕಾನಂದರ ಜಯಂತಿಯನ್ನು ಆಚರಿಸುತ್ತೇವೆ. ಅದೇ ಕುಬೇರರ ಪಟ್ಟಿಯಲ್ಲಿರುವವರ ಜಯಂತಿಯನ್ನು ಆಚರಿಸುವುದಿಲ್ಲ. ಅನೇಕ ಭಾಷೆ, ಜಾತಿ, ಧರ್ಮ, ಸಂಸ್ಕೃತಿ, ಸಂಪತ್ತಿನಿಂದ ಕೂಡಿದ ದೇಶ ನಮ್ಮದು. ಶಿಕ್ಷಣಕ್ಕೆ ಆಸಕ್ತಿ ಬೇಕು. ಪರೀಕ್ಷೆಯನ್ನು ಹಬ್ಬದಂತೆ ಸ್ವೀಕರಿಸಿ. ಓದು ನಿರಂತರವಾಗಿರಬೇಕು. ಮಿತ ಆಹಾರ ಸೇವಿಸಿ ಆರೋಗ್ಯವಂತನಾಗಿರುವವನೆ ನಿಜವಾದ ಶ್ರೀಮಂತ. ಎನ್.ಎಸ್.ಎಸ್.ಎಂದರೆ ಸೇವಾ ಮನೋಭಾವನೆ. ಜೀವನದಲ್ಲಿ ದೊಡ್ಡ ಕನಸು ಕಾಣಿರಿ. ಗುರಿ ಮುಟ್ಟುವವರೆಗೂ ನಿದ್ರಿಸಬೇಡಿ. ಸಿರಿಧಾನ್ಯಗಳನ್ನು ಸೇವಿಸಿ ರೋಗದಿಂದ ದೂರವಿರಿ ಎಂದರು.
ಬೆಂಗಳೂರು ವಿವೇಕಾನಂದ ಕಾನೂನು ಕಾಲೇಜಿನ ಪ್ರಾಚಾರ್ಯರಾದ ಡಾ.ಕೆ.ಬಿ.ಕೆಂಪೆಗೌಡ ಮಾತನಾಡಿ ಸಾಂಸ್ಕೃತಿಕ, ಕ್ರೀಡೆ, ದೈಹಿಕ ಶಿಕ್ಷಣದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಧಕರುಗಳ ಮಧ್ಯೆ ನಾನು ಒಬ್ಬ ಸಾಧಕನಾಗಬೇಕೆಂಬ ಮನೋಭಾವ ಬೆಳೆಸಿಕೊಳ್ಳಿ. ಪ್ರತಿ ವಿದ್ಯಾರ್ಥಿಯಲ್ಲಿಯೂ ಒಂದೊಂದು ಪ್ರತಿಭೆಯಿರುತ್ತದೆ. ಗುರುತಿಸಿ ಹೊರೆ ತೆಗೆಯುವುದು ಶಿಕ್ಷಕರ ಜವಾಬ್ದಾರಿ. ವಕೀಲಿ, ಶಿಕ್ಷಕ, ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರವಾದುದು. ಕೋಟ್ಯಾಂತರ ರೂ.ಗಳನ್ನು ಗಳಿಸುವುದು ವೃತ್ತಿಯಲ್ಲ. ಬದ್ದತೆಯಿರಬೇಕು ಎಂದು ಕಾನೂನು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಿಕ್ಷಣಕ್ಕೆ ಕೊಟ್ಟಷ್ಟೆ ಆದ್ಯತೆಯನ್ನು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೂ ಕೊಡಬೇಕು. ದೈಹಿಕ ಶ್ರಮವಿಲ್ಲದೆ ಅತಿಯಾದ ಆಹಾರ ಸೇವನೆ ಆರೋಗ್ಯಕ್ಕೆ ಹಾನಿಕರ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಜೀವನವನ್ನು ಮತ್ತೊಂದು ಮಜಲಿನಲ್ಲಿ ನೋಡಬಹುದು. ಪ್ರಸಿದ್ದ ವಕೀಲರುಗಳಾಗಬೇಕಾದರೆ ತಪ್ಪದೆ ಸಾಹಿತ್ಯ ಓದಿ. ಸಾಮಾನ್ಯ ಜ್ಞಾನವಿದ್ದರೆ ಒಳ್ಳೆಯದು. ಸಾಹಿತ್ಯದ ಓದಿನಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಶರಣರ ವಚನ, ದಾರ್ಶನಿಕರ ಕೀರ್ತನೆಗಳು ಜೀವನಕ್ಕೆ ಬೇಕು ಎಂದು ನುಡಿದರು.
ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎಂ.ಎಸ್.ಸುಧಾದೇವಿ ಅಧ್ಯಕ್ಷತೆ ವಹಿಸಿದ್ದರು. ಸರಸ್ವತಿ ಕಾನೂನು ಕಾಲೇಜಿನ ಅಧ್ಯಕ್ಷ ಹೆಚ್.ಹನುಮಂತಪ್ಪ, ಉಪಾಧ್ಯಕ್ಷ ಫಾತ್ಯರಾಜನ್, ಕಾರ್ಯದರ್ಶಿ ಡಿ.ಕೆ.ಶೀಲಾ, ಆಡಳಿತ ಮಂಡಳಿ ಸದಸ್ಯ ರಾಮರಾವ್, ಕಾನೂನು ವೇದಿಕೆ ಅಧ್ಯಕ್ಷ ಅಣ್ಣಪ್ಪ ವೇದಿಕೆಯಲ್ಲಿದ್ದರು.
ಸಹಾಯಕ ಪ್ರಾಧ್ಯಾಪಕ ಡಾ.ರವಿಕುಮಾರ್ ಡಿ.ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಹಾಯಕ ಪ್ರಾಧ್ಯಾಪಕ ಡಾ.ರಮೇಶ್ ಕೆ. ಸಂವಿಧಾನ ಪೀಠಿಕೆ ಓದಿದರು. ಸಹಾಯಕ ಪ್ರಾಧ್ಯಾಪಕ ಡಾ.ಎನ್.ಡಿ.ಗೌಡ ಸ್ವಾಗತಿಸಿದರು. ದೈಹಿಕ ಶಿಕ್ಷಕ ಮುರುಗೇಶ್ ನಿರೂಪಿಸಿದರು.

