ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ):
ಪ್ರಥಮ್ಗೆ ಜೀವ ಬೆದರಿಕೆ ಹಾಕಿದ ಪ್ರಕರಣದ ಆರೋಪಿಗಳಾದ ಯಶಸ್ವಿನಿ ಮತ್ತು ಬೇಕರಿ ರಘು ಅವರು ಜಾಮೀನು ಪಡೆಯಲು ವಕೀಲರ ಮೂಲಕ ದೊಡ್ಡಬಳ್ಳಾಪುರದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರಾದರು.
ಮಾಧ್ಯಮದವರೊಂದಿಗೆ ಈ ವೇಳೆ ಮಾತನಾಡಿದ ಯಶಸ್ವಿನಿ, ನಟ ಪ್ರಥಮ್ ಮೇಲೆ ಪ್ರತಿದೂರು ದಾಖಲಿಸಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಎಚ್ಚರಿಸಿದರು.
ಎಲ್ಲಮ್ಮ ದೇವಸ್ಥಾನಕ್ಕೆ ಆಗಮಿಸಿದ್ದಾಗ ನನ್ನನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಟ ಪ್ರಥಮ್ ನಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನಿಂದ ದರ್ಶನ್ ಅವರಿಗೆ ಏನಾಗಬೇಕು? ಅವರಿಂದ ನನಗೇನಾಗಬೇಕು? ಸುಮ್ಮನೆ ದರ್ಶನ್ ಹೆಸರು ತಂದಿದ್ದಾರಷ್ಟೇ. ಪ್ರಥಮ್ನನ್ನು ಬಿಡೋ ಮಾತೇ ಇಲ್ಲ, ನಾನಂತೂ ಬಿಡುವ ಮಗಳೇ ಅಲ್ಲ ಎಂದು ಆರೋಪಿ ಯಶಸ್ವಿನಿ ಗುಡುಗಿದರು.
ದರ್ಶನ್ ಅಭಿಮಾನಿಗಳೆಂದು ಹೇಳಿಕೊಂಡಿರುವ ಯಶಸ್ವಿನಿ ಮತ್ತು ಬೇಕರಿ ರಘು ಮೇಲೆ ಭಾರತೀಯ ನ್ಯಾಯ ಸಂಹಿತೆಯಡಿ 351(2)(3), 352,126(2) 3(5) ಪ್ರಕರಣ ದಾಖಲಿಸಿದ್ದರು.
ಆರೋಪಿಗಳು ಕೋರ್ಟ್ಗೆ ಶರಣಾಗುವ ಮಾಹಿತಿ ತಿಳಿದ ಪೊಲೀಸರು, ಬಂಧಿಸುವ ಯತ್ನ ನಡೆಸಿದರು. ಆದರೆ, ಅವರು ಪೊಲೀಸರ ಕಣ್ಣು ತಪ್ಪಿಸಿ ಕೋರ್ಟ್ ಒಳಗೆ ಹೋದರು. ಆರೋಪಿಗಳು ಜಾಮೀನಿಗೆ ಅರ್ಜಿ ಹಾಕಿದ್ದು, ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದೆ.

