ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಮೆರಿಕದಲ್ಲಿ ಹ್ಯಾಟ್ರಿಕ್ ಹೀರೋ, ನಾಯಕ ನಟ ಶಿವರಾಜ್ಕುಮಾರ್ ಅವರಿಗೆ ಕಳೆದ ಡಿಸೆಂಬರ್ 24ರಂದು ಕ್ಯಾನ್ಸರ್ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಯಶಸ್ವಿ ಸರ್ಜರಿ ಆಗಿರುವ ಕುರಿತು ಪತ್ನಿ ಗೀತಾ ಶಿವರಾಜ್ಕುಮಾರ್, ಬಾಮೈದ ಮಧು ಬಂಗಾರಪ್ಪ ಮತ್ತು ವೈದ್ಯರು ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ. ನಟ ಶಿವರಾಜ್ ಕುಮಾರ್ ಚೇತರಿಸಿಕೊಳ್ಳುತ್ತಿದ್ದು, ಶಿವರಾಜ್ಕುಮಾರ್ ಅಭಿಮಾನಿಗಳಿಗಾಗಿ ಗೀತಾ ಅವರು ವಿಡಿಯೋ ಶೇರ್ ಮಾಡಿದ್ದಾರೆ.
ಎಲ್ಲರಿಗೂ ನಮಸ್ಕಾರ. ಹೊಸ ವರ್ಷದ ಶುಭಾಶಯಗಳು. ನಿಮ್ಮ ಪ್ರಾರ್ಥನೆ ಫಲಿಸಿದೆ. ರಿಪೋರ್ಟ್ಗಳೆಲ್ಲವೂ ನೆಗೆಟಿವ್ ಎಂದು ಬಂದಿದೆ. ಇದೀಗ ವೈದ್ಯರು ಅಧಿಕೃತವಾಗಿ ಕ್ಯಾನ್ಸರ್ ಫ್ರೀ ಎಂದು ಘೋಷಿಸಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆ, ಆಶೀರ್ವಾದದಿಂದ ಶಿವರಾಜ್ಕುಮಾರ್ ಅವರು ಚೇತರಿಸಿಕೊಳ್ಳಲು ಸಾಧ್ಯವಾಯಿತು. ನಾನಿದನ್ನು ನನ್ನ ಬದುಕಲ್ಲಿ ಎಂದಿಗೂ ಮರೆಯೋದಿಲ್ಲ ಎಂದು ಗೀತಾ ಶಿವರಾಜ್ಕುಮಾರ್ ತಿಳಿಸಿದ್ದಾರೆ.
ಎಲ್ಲರಿಗೂ ನಮಸ್ಕಾರ. ಹೊಸ ವರ್ಷದ ಶುಭಾಶಯಗಳು. ಮಾತಾಡ್ಬೇಕಾದ್ರೆ ಎಲ್ಲಿ ಭಾವುಕನಾಗುತ್ತೇನೆಂದು ಸ್ವಲ್ಪ ಭಯ ಆಗುತ್ತೆ. ಯಾಕಂದ್ರೆ ಅಲ್ಲಿಂದ ಹೊರಡಬೇಕಾದ್ರೆ ಸ್ವಲ್ಪ ಎಮೋಶನಲ್ ಆಗಿದ್ದೆ. ಮನುಷ್ಯನಿಗೆ ಭಯ ಅನ್ನೋದು ಇದ್ದೇ ಇರುತ್ತೆ. ಆ ಭಯ ನೀಗಿಸೋಕ್ಕೆಂದೇ ಅಭಿಮಾನಿ ದೇವರುಗಳಿರುತ್ತಾರೆ.
ಸಹನಟರಿರುತ್ತಾರೆ, ಸ್ನೇಹಿತರು ಇರುತ್ತಾರೆ, ಸಂಬಂಧಿಕರಿರುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಸ್ಟ್ರಾಂಗ್ ಹ್ಯಾಂಡ್ ವೈದ್ಯರಿರುತ್ತಾರೆ. ಹೀಗೆ ಪ್ರತಿಯೊಬ್ಬರು ನೋಡಿಕೊಂಡ ರೀತಿ ನನಗೆ ಧೈರ್ಯ ಕೊಟ್ಟಿತು ಎಂದು ನಟ ಶಿವರಾಜ್ಕುಮಾರ್ ಅವರು ಅಭಿಮಾನಿಗಳಿಗಾಗಿ ವಿಡಿಯೋದಲ್ಲಿ ಮಾತನಾಡಿದ್ದಾರೆ.