ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾಡಿನ ಪ್ರಖ್ಯಾತ ಸಾಹಿತಿ ಡಾ.ಮೊಗಳ್ಳಿ ಗಣೇಶ್ ಅವರ ಹಠಾತ್ ನಿಧನಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕೇಂದ್ರ ಸಚಿವರು ಸಂತಾಪ ಸೂಚಿಸಿದ್ದಾರೆ. ಸಾಹಿತಿ ಡಾ.ಮೊಗಳ್ಳಿ ಗಣೇಶ್ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಕನ್ನಡ ಸಾಹಿತ್ಯ ಲೋಕಕ್ಕೆ ಕತೆ, ಕಾವ್ಯ, ಕಾದಂಬರಿಗಳನ್ನು ನೀಡುವುದರ ಜೊತೆಯಲ್ಲಿ ಜಾನಪದವನ್ನೂ ಒಳಗೊಂಡಂತೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರು ಮಾಡಿರುವ ಅಧ್ಯಯನ ಮತ್ತು ಸಂಶೋಧನೆ ಅನನ್ಯವಾದುದು ಎಂದು ಸಿಎಂ ಸಿದ್ದರಾಮಯ್ಯ ಕಂಬನಿ ಮಿಡಿದ್ದಾರೆ.
ಸತ್ಯ ನಿಷ್ಠುರಿಯಾಗಿದ್ದ ಡಾ.ಮೊಗಳ್ಳಿ ಅವರು ಖಚಿತವಾದಂತಹ ಒಲವು-ನಿಲುವುಗಳನ್ನು ಹೊಂದಿದವರು. ಅವರಿನ್ನೂ ಬಹಳಷ್ಟು ಬರೆಯುವುದಿತ್ತು. ಅವರ ಅನಿರೀಕ್ಷಿತ ನಿರ್ಗಮನದಿಂದ ಕನ್ನಡ ಸಾಹಿತ್ಯ ಬಡವಾಗಿದೆ.
ಡಾ.ಮೊಗಳ್ಳಿ ಅವರ ನಿಧನಕ್ಕೆ ನನ್ನ ಸಂತಾಪಗಳು. ಅವರ ಕುಟುಂಬ ಮತ್ತು ಗೆಳೆಯರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಿಟ್ಟು ಹೋದ ಸಾಹಿತಿ ಡಾ.ಮೊಗಳ್ಳಿ ಗಣೇಶ್-ಉಪಮುಖ್ಯಮಂತ್ರಿ-
ನಾಡಿನಖ್ಯಾತ ಸಾಹಿತಿ, ಕವಿ, ಕಾದಂಬರಿಕಾರ, ವಿಮರ್ಶಕ ಡಾ.ಮೊಗಳ್ಳಿ ಗಣೇಶ್ ಅವರ ನಿಧನ ಅತ್ಯಂತ ದುಃಖಕರ ಸಂಗತಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
ನಮ್ಮ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಂತೇಮೊಗಳ್ಳಿಯ ಗಣೇಶ್ ಮೊಗಳ್ಳಿ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಲ್ಲದೆ, ದಲಿತ ಚಳುವಳಿ ಹಾಗೂ ಸತ್ಯದ ಪರವಾದ ಬರಹಗಳ ಮೂಲಕ ಸಮಾಜದ ಬದಲಾವಣೆಗೆ ಪ್ರಯತ್ನಿಸಿದವರು. ಅವರ ಅಕಾಲಿಕ ನಿಧನ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟವಾಗಿದೆ.
ಡಾ.ಮೊಗಳ್ಳಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿಯನ್ನು ನೀಡಲಿ ಎಂದು ಡಿಸಿಎಂ ಶಿವಕುಮಾರ್ ಪ್ರಾರ್ಥಿಸಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಸಂತಾಪ-
ಕನ್ನಡದ ಹಿರಿಯ ಸಾಹಿತಿಗಳಾಗಿದ್ದ ಡಾ. ಮೊಗಳ್ಳಿ ಗಣೇಶ್ ಅವರ ನಿಧನದ ಸುದ್ದಿ ಕೇಳಿ ಅತೀವ ನೋವುಂಟಾಯಿತು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಮೂಲತಃ ಚನ್ನಪಟ್ಟಣ ತಾಲೂಕಿನ ಸಂತೇಮೊಗಳ್ಳಿಯವರಾದ ಗಣೇಶ್ ಅವರು ಕಥೆ, ಕಾದಂಬರಿ, ಕಾವ್ಯ ಹಾಗೂ ವಿಮರ್ಶೆ ಕ್ಷೇತ್ರದಲ್ಲಿ ಸಾಹಿತ್ಯ ಕೃಷಿ ಮಾಡಿದ್ದರಲ್ಲದೆ, ದಲಿತ ಚಳವಳಿಗೂ ಅನನ್ಯ ಕೊಡುಗೆ ನೀಡಿದ್ದರು. ಅವರ ನಿಧನ ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟ.
ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದ ಸದಸ್ಯರು, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಾರ್ಥಿಸಿದ್ದಾರೆ.

