ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಗುಲ್ಬರ್ಗ ವಿಭಾಗದ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ನೀಡಿರುವ ವಿಶೇಷ ಯೋಜನೆಗಳ ಮಾದರಿಯಲ್ಲಿ, ಚಿತ್ರದುರ್ಗ ಜಿಲ್ಲೆಗೆ 10 ವರ್ಷಗಳ ಕಾಲ ಅವಧಿಯ ವಿಶೇಷ ಯೋಜನೆ ಪ್ಯಾಕೇಜ್ ನೀಡಿದರೆ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಅಭಿವೃದ್ಧಿ ಹೊಂದಲಿವೆ ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ, ಸೋಮವಾರ ಏರ್ಪಡಿಸಿದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಬೆಂಗಳೂರು ವಿಭಾಗದ ಮಟ್ಟದ ಸಂವಾದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಿತ್ರದುರ್ಗ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದೆ.
ಜಿಲ್ಲೆಯ ಜನಸಂಖ್ಯೆ ಪೈಕಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರು ಶೇ.90 ರಷ್ಟು ಇದ್ದಾರೆ. ಪ್ರತಿ ತಾಲ್ಲೂಕಿನಿಂದಲೂ ಸಾವಿರಾರು ಜನ ಹೆಣ್ಣು ಮಕ್ಕಳು ಗಾರ್ಮೆಂಟ್ಸ್ ಕೆಲಸ ಅರಸಿಕೊಂಡು ಬೆಂಗಳೂರಿಗೆ ವಲಸೆ ಹೋಗಿದ್ದಾರೆ. ಹಿರಿಯೂರಿನಲ್ಲಿರುವ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ತಾಲ್ಲೂಕಿನ ಏಳೆಂಟು ಸಾವಿರ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಇದರಿಂದ ಮಹಿಳೆಯರು ಆರ್ಥಿಕವಾಗಿ ಸ್ವಾಲಂಭಿಯಾಗಲು ಸಹಕಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಗೃಹಲಕ್ಷ್ಮೀ ಯೋಜನೆಯು ರಾಜ್ಯದ ಮಹಿಳೆಯರ ಆರ್ಥಿಕ ಚೈತನ್ಯ ತುಂಬುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಮಧ್ಯ ಕರ್ನಾಟಕ ಭಾಗಕ್ಕೆ ವಾಣಿ ವಿಲಾಸ ಸಾಗರ ಜಲಾಶಯ ಜೀವನಾಡಿಯಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಕೃಷ್ಣರಾಜ ಸಾಗರ ಮಾದರಿಯಲ್ಲಿ ವಿವಿ ಸಾಗರ ಬಳಿ ಉದ್ಯಾನವನ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು.
ಜಿಲ್ಲೆಯ 3 ತಾಲ್ಲೂಕಗಳಿಗೆ ಕೆ.ಎಂ.ಇ.ಆರ್.ಸಿ ಹಾಗೂ ಡಿಎಂಎಫ್ ಅಡಿ ವರ್ಷಕ್ಕೆ ರೂ.500 ಕೋಟಿಗಳಷ್ಟು ಅಭಿವೃದ್ಧಿ ಅನುದಾನ ದೊರಕುತ್ತದೆ.
ಆದರೆ ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು ತಾಲ್ಲೂಕುಗಳಿಗೆ ಈ ಅನುದಾನ ದೊರೆಯುವುದಿಲ್ಲ. ಈ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಅಸಮತೋಲನ ನಿವಾರಣಾ ಸಮತಿ ಜಿಲ್ಲೆಗೆ ವಿಶೇಷ ಅನುದಾನ ಪ್ಯಾಕೇಜ್ ನೀಡುವಂತೆ ಶಿಫಾರಸ್ಸು ಮಾಡಬೇಕು ಎಂದು ಸಚಿವ ಡಿ.ಸುಧಾಕರ್ ಹೇಳಿದರು.