ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ಆ ತಂಡಗಳು ಶೋಧಕ್ಕೆ ಮುಂದಾಗಿವೆ. ಆರೋಪಿಗಳು ಯಾರೇ ಆಗಿದ್ದರೂ ಬಿಡುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿಕಾಪಾಡಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ. ಈಗಾಗಲೇಕಾನೂನು ಸುವ್ಯವಸ್ಥೆ ಎಡಿಜಿಪಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲಿ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ಜರುಗಬಾರದು ಎಂಬ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಜನರು ಕೂಡ ಶಾಂತಿ ಕಾಪಾಡಬೇಕು ಎಂದು ಮನವಿಮಾಡುತ್ತೇನೆ. ಸರ್ಕಾರ ಮತ್ತುಪೊಲೀಸ್ ಇಲಾಖೆ ನಿಮ್ಮ ಜೊತೆಯಲ್ಲಿದೆ ಎಂದು ಪರಮೇಶ್ವರ್ ತಿಳಿಸಿದರು.
ನಿನ್ನೆಯ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಘಟನೆ ಕುರಿತು ಸಂಪೂರ್ಣ ವರದಿ ಕೇಳಿದ್ದೇನೆ. ತನಿಖೆ ಆರಂಭಿಸಲಾಗಿದ್ದು ಆರೋಪಿಗಳನ್ನು ಬಿಡುವುದಿಲ್ಲ. ಯಾವುದೇ ಪಕ್ಷ, ಸಂಘಟನೆಯವರು ಅಥವಾ ಬೇರೆ ಯಾರೇ ಆಗಿದ್ದರೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಬಿಜೆಪಿ ಮುಖಂಡರ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಜವಾಬ್ಧಾರಿಯುತ ಸರ್ಕಾರವಾಗಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಜವಾಬ್ಧಾರಿ. ಯಾರು ಕೂಡ ಕೊಲೆ ಆಗಬೇಕು ಎಂದು ಬಯಸುವುದಿಲ್ಲ. ಈಗಾಗಲೇ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇಂತಹ ಘಟನೆಗಳಾದಾಗ ಕಾನೂನುಪ್ರಕಾರ ಏನೆಲ್ಲಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್‌ನಲ್ಲಿ ಬೇರೆಯವರಿದ್ದಾರಾ? ನಾವೆಲ್ಲ ಹಿಂದುಗಳಲ್ಲವಾ? ನಾವು ಬೇರೆಯವರಾ? ಆ ರೀತಿ ಘಟನೆಯನ್ನು ವಿಶ್ಲೇಷಣೆ ಮಾಡುವುದು ಸರಿಯಲ್ಲ. ಘಟನೆಗೆ ಬೇರೆ ಬೇರೆ ಬಣ್ಣಕಟ್ಟುವುದು ಬೇಡ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.
ಜಾತಿ ಗಣತಿಗೆ ಸ್ವಾಗತ: ದೇಶದಾದ್ಯಂತ ಜಾತಿ ಜನಗಣತಿ ನಡೆಯಬೇಕು ಎಂದು ರಾಹುಲ್ ಗಾಂಧಿ ಅವರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು. ಕರ್ನಾಟಕದ ಬಗ್ಗೆ ಮಾತನಾಡುವಾಗ ರಾಷ್ಟ್ರದಲ್ಲಿ ಆಗಬೇಕು ಎಂದು ಅನೇಕಸಂದರ್ಭಗಳಲ್ಲಿ ಹೇಳಿದ್ದರು. ಜಾತಿಗಣತಿ ನಡೆಸುವ ಅಗತ್ಯತೆ ಇದೆ ಎಂಬುದು ಕೇಂದ್ರ ಸರ್ಕಾರಕ್ಕೆ ಅರ್ಥವಾಗಿದೆ. ಕೇಂದ್ರದ ಜಾತಿಗಣತಿ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು.
ಸಾಮಾಜಿಕ, ಶೈಕ್ಷಣಿಕಮತ್ತು ಆರ್ಥಿಕ ಸ್ಥಿತಿಗಳನ್ನ ಅಧ್ಯಯನ ನಡೆಸಿ ಹಿಂದೆ ಉಳಿದವರನ್ನು ಸಮಾಜದಮುಖ್ಯವಾಹಿನಿಗೆ ತರಬೇಕು ಎಂಬುದು ಜನಗಣತಿಯ ಉದ್ದೇಶ. ಈ ಬಾರಿ ರಾಜ್ಯದ ಆಯವ್ಯಯದಲ್ಲಿ ಜಾತಿಗಣತಿಯನ್ನು ಆಧಾರವಾಗಿಟ್ಟುಕೊಂಡು ಕಾರ್ಯಕ್ರಮ ರೂಪಿಸುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆಎಂದು ಪರಮೇಶ್ವರ್ ತಿಳಿಸಿದರು.