ಚಂದ್ರವಳ್ಳಿ ನ್ಯೂಸ್, ಶ್ರೀನಗರ:
ಕಾಶ್ಮೀರದ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಮೂಸಾನನ್ನು ಭಾರತೀಯ ಸೇನೆಯ ವಿಶೇಷ ಪಡೆಗಳು ಎನ್ಕೌಂಟರ್ ಮಾಡಿವೆ.
ಪ್ರವಾಸಿಗರ ಮೇಲೆ ಪಹಲ್ಗಾಮ್‌ನಲ್ಲಿ ನಡೆಸಿದ ದಾಳಿಯ ವೇಳೆ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಪತ್ನಿಗೆ ‘ಹೋಗಿ ಮೋದಿಗೆ ಹೇಳು ಎಂದು ಸವಾಲು ಹಾಕಿದ್ದ ಮೂಸಾ ಇದೀಗ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾನೆ.
ಪಾಕಿಸ್ತಾನದ ಸೇನಾ ವಿಶೇಷ ಪಡೆಗಳ ಮಾಜಿ ಕಾರ್ಯಕರ್ತ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ ಸೋಮವಾರ ಶ್ರೀನಗರದ ಬಳಿಯ ಡಚಿಗಾಮ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗಿನ ಎನ್ಕೌಂಟರ್ನಲ್ಲಿ ಭೀಕರ ರೀತಿಯಲ್ಲಿ ಸಾವನ್ನಪ್ಪಿದ್ದಾನೆ.
ಹರ್ವಾನ್‌ನ ಮುಲ್ನಾರ್ ಪ್ರದೇಶದಲ್ಲಿ ಆತ ಅಡಗಿದ್ದಾನೆ ಎಂಬ ಗುಪ್ತಚರ ಮಾಹಿತಿಯ ನಂತರ ಭಾರತೀಯ ಸೇನೆ, ಸಿಆರ್‌ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ಆಪರೇಷನ್ ಮಹಾದೇವ್ ಎನ್ನುವ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದರು.
ಆಪರೇಷನ್ ಮಹಾದೇವ್ ಹೆಸರಿನ ಹೈ-ರಿಸ್ಕ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಭಾರತೀಯ ಸೇನಾ ವಿಶೇಷ ಪಡೆಗಳು ದಾಳಿ ನಡೆಸಿ ತೀವ್ರವಾದ ಗುಂಡಿನ ಚಕಮಕಿಯ ಸಮಯದಲ್ಲಿ ಮೂಸಾ ಅವರನ್ನು ಹತ್ಯೆ ಮಾಡಲಾಯಿತು. ಸುಲೇಮಾನ್ ಎಂದೂ ಕರೆಯಲ್ಪಡುವ ಹಾಶಿಮ್ ಮೂಸಾ, ಪಾಕಿಸ್ತಾನಿ ಸೇನಾ ವಿಶೇಷ ಪಡೆಗಳ ಮಾಜಿ ಕಾರ್ಯಕರ್ತನಾಗಿದ್ದು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಗುರುತಿಸಲ್ಪಟ್ಟಿದ್ದಾನೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು, ಅವರಲ್ಲಿ ಹೆಚ್ಚಿನವರು ಪ್ರವಾಸಿಗರು.
ಹಾಶಿಮ್ ಮೂಸಾ ಜೊತೆ ಮೃತರಾದ ಇನ್ನೊಬ್ಬ ಉಗ್ರ ಕೂಡ ಪಾಕಿಸ್ತಾನಿ ಪ್ರಜೆ ಎಂದು ಹೇಳಲಾಗಿದೆ. ಭದ್ರತಾ ಪಡೆಗಳು ಅವರ ದೇಹಗಳನ್ನು ಮತ್ತು ಅಮೆರಿಕ ನಿರ್ಮಿತ ಕಾರ್ಬೈನ್, ಎಕೆ –47 ರೈಫಲ್, 17 ರೈಫಲ್ ಗ್ರೆನೇಡ್‌ಗಳು ಮತ್ತು ಇತರ ಮಿಲಿಟರಿ ದರ್ಜೆಯ ಉಪಕರಣಗಳು ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳ ವಶಪಡಿಸಿಕೊಂಡಿವೆ.
ಕಳೆದ ವರ್ಷ ಶ್ರೀನಗರ-ಸೋನ್ಮಾರ್ಗ್ ಹೆದ್ದಾರಿಯಲ್ಲಿ ಝಡ್-ಮೋರ್ಹ್ ಸುರಂಗ ನಿರ್ಮಾಣದಲ್ಲಿ ಭಾಗಿಯಾಗಿದ್ದ 7 ಜನರ ಹತ್ಯೆಯಲ್ಲಿ ಮೂಸಾ ಕೂಡ ಭಾಗಿಯಾಗಿದ್ದ ಎನ್ನಲಾಗಿದೆ.

