ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಡಾನ್ ಬೋಸ್ಕೊ ICSE ಶಾಲೆಯ ಪ್ರಾಂಶುಪಾಲರಾದ ಫಾದರ್ ಕೆ ಸಿ ಮ್ಯಾಥ್ಯೂ ಹೇಳಿದರು.
ನಗರದ ಚಿತ್ರ ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆ ಸಭಾಂಗಣದಲ್ಲಿ ನಡೆದ ಬೇಸಿಗೆ ಬೆಸುಗೆ ಶಿಬಿರ ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಕ್ರಿಯಾಶೀಲ ವ್ಯಕ್ತಿಗಳಾಗಬೇಕೆಂದು ತಿಳಿಸಿದರು.
ನಾವು ಇತರಿಗಾಗಿ ಜೀವಿಸಿದಾಗ ಮಾತ್ರ ನಮಗೆ ನಿಜವಾದ ಸಂತೋಷ ಸಿಗುತ್ತದೆ ಈ ಹಿನ್ನೆಲೆಯಲ್ಲಿ ನಮ್ಮ ಡಾನ್ ಬೋಸ್ಕೋ ಸಮಾಜ ಸೇವಾ ಸಂಸ್ಥೆಯು ಸದಾ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾದದ್ದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಿಧಿ ಶ್ರೀ ಮಕ್ಕಳು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಡಾನ್ ಬೋಸ್ಕೊ ಸೇವಾ ಸಂಸ್ಥೆಯ ನಿರ್ದೇಶಕರು ಹಾಗೂ ಶಿಬಿರದ ವ್ಯವಸ್ಥಾಪಕ ಆಂತೋಣಿರಾಜ್ ಮೂರು ದಿನಗಳ ಶಿಬಿರದ ಸಂಪೂರ್ಣ ಕಾರ್ಯ ಚಟುವಟಿಕೆ ಮತ್ತು ರೂಪುರೇಷೆಗಳ ಬಗ್ಗೆ ಮಾಹಿತಿ ಮತ್ತು ಸಲಹೆ ನೀಡಿದರು.
ಪರಿಸರವಾದಿ ಡಾ.ಸ್ವಾಮಿ ಸ್ವದೇಶಿ ವಸ್ತುಗಳ ಬಳಕೆಗೆ ಉತ್ತೇಜನ ಹಾಗೂ ಪರಿಸರ ಮಾಲಿನ್ಯದ ಕುರಿತು ವಿವರಿಸುತ್ತ ಪ್ಲಾಸ್ಟಿಕ್ ಬಳಕೆ ಮಿತಿಗೊಳಿಸುವುದು, ವಸ್ತುಗಳ ಪುನರ್ ಬಳಕೆ ಬಗ್ಗೆ ಪ್ರಾಯೋಗಿಕವಾಗಿ ಮಕ್ಕಳಿಗೆ ವಿವರಿಸಿದರಲ್ಲದೆ ಪರಿಸರ ಸಂರಕ್ಷಣೆ ಕುರಿತ ಮಾಹಿತಿ ನೀಡಿದರು.
ಮಕ್ಕಳಿಗೆ ಎಸ್ ಜೆ ಎಮ್ ದಂತ ವೈದ್ಯ ಮಹಾವಿದ್ಯಾಲಯದಿಂದ ದಂತ ಆರೋಗ್ಯ ತಪಾಸಣೆಯನ್ನು ಏರ್ಪಡಿಸಲಾಗಿತ್ತು. ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಡಾ. ಮಂಜುನಾಥ್ ಮತ್ತು ಕುಮಾರಿ ರೆಬೆಕಾ ಮಕ್ಕಳಿಗೆ ಮಾನಸಿಕ ಆರೋಗ್ಯ ಕುರಿತು ಅರಿವು ಮೂಡಿಸಿದರು.
ಸಾವಯವ ಕೃಷಿಯಲ್ಲಿ ಪ್ರಗತಿಪರ ರೈತ ಜ್ಞಾನೇಶ್ ಸಾವಯವ ಕೃಷಿಯ ಮಹತ್ವ ಬಗ್ಗೆ ತಿಳಿಸಿಕೊಟ್ಟರು. ಇದೆ ಸಂದರ್ಭದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಿ, ಅವರ ಚಿಂತನೆಗಳ ಕುರಿತು ಮಾತನಾಡಲಾಯಿತು.
ಇದರೊಟ್ಟಿಗೆ ಮಕ್ಕಳಿಗೆ ಸಂಗೀತ ನೃತ್ಯ, ಧ್ಯಾನ, ಯೋಗ, ಚಿತ್ರಕಲೆ ಮತ್ತು ಕ್ರಾಫ್ಟ್ ಹಾಗೂ ಕ್ಯಾಂಪ್ ಫೈರ್, ಮನರಂಜನೀಯ ದೇಶಿಯ ಆಟೋಟಗಳು ಮಕ್ಕಳಿಗೆ ಖುಷಿ ನೀಡಿದವು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಅಗ್ನಿ ಅವಘಡದ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಶಿಬಿರದಲ್ಲಿ ಜಿಲ್ಲೆಯ ವಿವಿಧ ಹಳ್ಳಿಗಳ ಸಂಜೆ ಶಾಲೆಯ ಮಕ್ಕಳು,ಎಕೋ ಮತ್ತು ಮೈಂಡ್ಸ್ ಯೋಜನೆಯ ಮಕ್ಕಳು ಸೇರಿದಂತೆ ಸುಮಾರು ಎರಡು ನೂರು ಮಕ್ಕಳು ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಚಿತ್ರ ಸಮಾಜ ಸೇವಾ ಸಂಸ್ಥೆಯ ಆಡಳಿತಾಧಿಕಾರಿ ಫಾ.ವಿ ಎಂ ಮ್ಯಾಥ್ಯೂ ಮಾತನಾಡಿ ಬದುಕೆಂಬ ಸಾಗರದಲ್ಲಿ ಮುತ್ತುಗಳನ್ನು ಹುಡುಕುವ ಸಾಧನೆಯ ಸಾಧಕರು ನೀವಾಗಬೇಕೆಂದು ಮಕ್ಕಳಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ನೆನಪಿನ ಕಾಣಿಕೆ ಮತ್ತು ಬಹುಮಾನಗಳನ್ನು ವಿತರಿಸಲಾಯಿತು. ಶಿಬಿರಾರ್ಥಿಗಳಿಗೆ ಬಿಳ್ಕೊಡುಗೆ ನೀಡುವುದರೊಂದಿಗೆ ಶಿಬಿರ ಮುಕ್ತಾಯವಾಯಿತು.
ಶಿಬಿರದಲ್ಲಿ ವ್ಯವಸ್ಥಾಪಕ ಅಂತೋಣಿರಾಜ್, ಚಿತ್ರ ಸಂಸ್ಥೆಯ ಕಾರ್ಯಕ್ರಮ ಸಂಯೋಜಕಿ ತೆರೆಸಾ ಸೇರಿದಂತೆ ಚಿತ್ರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.