ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಪೂರಕ- ನವೀನ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯ ಎಷ್ಟು ಮುಖ್ಯವೂ ಅಷ್ಟೇ ಪ್ರಮಾಣದಲ್ಲಿ ಬೇಸಿಗೆ ಶಿಬಿರಗಳು ಮುಖ್ಯ. ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ ಕಳುಹಿಸುವುದರ ಮೂಲಕ ಮಕ್ಕಳ ದೈಹಿಕ ಸದೃಢತೆಗೆ ನೆರವಾಗಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಚಿತ್ರದುರ್ಗ ನಗರದ ಸ್ಟೇಡಿಯಂ ಯೂತ್ಸ್ ಅಥ್ಲೆಟಿಕ್ ಅಕಾಡೆಮಿ ವತಿಯಿಂದ ಒಂದು ತಿಂಗಳ ಕಾಲ ಆಯೋಜಿಸಿದ್ದ ಶಿಬಿರದ ಸಮಾರೋಪದಲ್ಲಿ ಭಾಗವಹಿಸಿ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು. ಇಂದಿನ ಮಕ್ಕಳು ಆಟದ ಮೈದಾನಕ್ಕೆ ಬಂದು ಆಟ ಆಡುವ ಪ್ರಸಂಗಗಳು ಬಹಳ ಕಡಿಮೆ ಇದೆ.

ಆದರೆ ನಮ್ಮ ಕಾಲದಲ್ಲಿ ಬೇಸಿಗೆ ರಜೆಯಲ್ಲಿ ನಮ್ಮ ಅಜ್ಜನ ಮನೆಗೆ ಹೋಗಿ ಅಲ್ಲಿ ಮರಕೋತಿ, ಚಿನ್ನಿದಾಂಡು, ಗೋಲಿ, ಬುಗರಿ, ಕೆರೆ ಅಥವಾ ಬಾವಿಯಲ್ಲಿ ಈಜುವುದು ಸೇರಿದಂತೆ ಇತರೆ ರೀತಿಯ ಗ್ರಾಮೀಣ ಆಟಗಳನ್ನು ಆಡಲಾಗುತ್ತಿತ್ತು. ಅಂದು ಈ ರೀತಿಯಾದ ಬೇಸಿಗೆ ಶಿಬಿರಗಳು ಇರಲಿಲ್ಲ. ಅಜ್ಜಿ, ಅಜ್ಜನ ಊರುಗಳೇ ನಮಗೆ ಬೇಸಿಗೆ ಶಿಬಿರದ ರೀತಿಯಲ್ಲಿ ಇದ್ದವು ಎಂದು ತಮ್ಮ ಬಾಲ್ಯದ ದಿನಗಳನ್ನು ಅವರು ನೆನಪು ಮಾಡಿಕೊಂಡರು.

ಇಂದಿನ ಮಕ್ಕಳಿಗೆ ಆಟ ಎಂದರೆ ಬರಿ ಕ್ರಿಕೆಟ್ ಎಂದುಕೊಂಡಿದ್ದಾರೆ. ಬೇರೆ ರೀತಿಯ ಗ್ರಾಮೀಣ ಕ್ರೀಡೆಗಳು ಈಗಿನ ಮಕ್ಕಳಿಗೆ ತಿಳಿದಿಲ್ಲ. ಮನೆಯಲ್ಲಿ ಮೊಬೈಲ್ ಅಥವಾ ಇಂಟರ್‌ನೆಟ್ ಇದ್ದರೆ ಸಾಕು ಮನೆಯಿಂದ ಮಕ್ಕಳು ಹೊರಗೇ ಬರುವುದಿಲ್ಲ ಸಂಜೆ ಮೈದಾನದಲ್ಲಿ ಮಕ್ಕಳು ಕಾಣುವುದು ಕಡಿಮೆಯಾಗಿದೆ ಎಂದು ನವೀನ್ ಆತಂಕ ವ್ಯಕ್ತಪಡಿಸಿದರು.
 ಪೋಷಕರು ಮಕ್ಕಳಿಗೆ ಯಾವ ರೀತಿ ಅಂಕಗಳನ್ನು ಪಡೆಯಲು ಪ್ರೋತ್ಸಾಹ ನೀಡುತ್ತಾರೋ ಅದೇ ರೀತಿ ಬೇಸಿಗೆ ಶಿಬಿರಗಳಿಗೆ ಮಕ್ಕಳನ್ನು ಕಳಿಸುವ ಮೂಲಕ ಮಕ್ಕಳ ಮನೋ ವಿಕಾಸನಕ್ಕೆ ಒತ್ತು ನೀಡಬೇಕು ಎಂದು ನವೀನ್ ಕರೆ ನೀಡಿದರು.

ಶಿಬಿರದ ಸಂಘಟಕ ಸತೀಶ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ  ಬೇಸಿಗೆ ಶಿಬಿರ ನಡೆಸಲಾಗುತ್ತಿದೆ. ಇದಕ್ಕೆ ಪೋಷಕರು ಪ್ರೋತ್ಸಾಹ ನೀಡುವುದರ ಮೂಲಕ ತಮ್ಮ ಮಕ್ಕಳನ್ನು ಶಿಬಿರಕ್ಕೆ ಕಳುಹಿಸುತ್ತಿದ್ದಾರೆ. ಇಂತಹ ಶಿಬಿರಗಳಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸುವುದರಿಂದ ಅವರ ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ದುರಾಭ್ಯಾಸ ಬರುವುದಿಲ್ಲ, ಇತರರೊಂದಿಗೆ ಸ್ನೇಹ ಉಂಟಾಗುತ್ತದೆ. ಇಲ್ಲಿ ಹೇಳಿಕೊಟ್ಟ ಪಾಠವನ್ನು ಇಲ್ಲಿಗೆ ನಿಲ್ಲಿಸಬೇಡಿ ಇದು ನಿರಂತರವಾಗಿ ಮುಂದುವರೆಯಬೇಕಿದೆ ಎಂದರು.

ತರಬೇತಿದಾರ ಸಾಧಿಕ್ ಮಾತನಾಡಿ, ಮಕ್ಕಳನ್ನ ಸಾಧ್ಯವಾದಷ್ಟು ಟಿ.ವಿ. ಹಾಗೂ ಮೊಬೈಲ್‌ನಿಂದ ದೂರವಿಡಿ. ಸಂಜೆ ಸಮಯದಲ್ಲಿ ಸಾಧ್ಯವಾದಷ್ಟು ಅವರನ್ನು ಈ ರೀತಿಯ ಕ್ರೀಡಾ ಚಟುವಟಿಕೆಗಳಲ್ಲಿ ತೂಡಗಿಸಿ, ಇದರಿಂದ ಅವರಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಕಾರ್ಯ ನಡೆಯುತ್ತದೆ ಕ್ರೀಡೆಯಲ್ಲಿ ಭಾಗವಹಿಸುವುದರ ಮೂಲಕ ಉತ್ತಮವಾದ ಆರೋಗ್ಯ ಸಂಪಾದಿಸಲು ಸಾಧ್ಯವಾಗುತ್ತದೆ ಎಂದು ಕರೆ ನೀಡಿದರು.

ದೈಹಿಕ ಶಿಕ್ಷಕ ತಿಪ್ಪೇಸ್ವಾಮಿ, ಅಕಾಡೆಮಿ ಕಾರ್ಯದರ್ಶಿ ಶಿವು, ಸತೀಶ್, ಬಸವರಾಜು, ಸುಹಾಸ್ ಭಾಗವಹಿಸಿದ್ದರು.
ಶಶಾಂಕ ಗೌಡ ಪ್ರಾರ್ಥಿಸಿದರು. ನಾಗರಾಜ್ ಬೇದ್ರೆ ಸ್ವಾಗತಿಸಿ
, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ೧೮೦ ಮಕ್ಕಳು ಭಾಗವಹಿಸಿದ್ದರು. ಇದರಲ್ಲಿ ಗೆದ್ದ ಮಕ್ಕಳಿಗೆ ಪದಕ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ಇದಕ್ಕೂ ಮುನ್ನ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ವ್ಯಕ್ತಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

 

 

Share This Article
error: Content is protected !!
";