ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ನಡೆಸುವ ಹೋರಾಟದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಸಂಘ ಭಾಗವಹಿಸುತ್ತಿರುವುದಾಗಿ ಸಂಘದ ಅಧ್ಯಕ್ಷ ಡಾ.ಎಸ್.ಹರೀಶ್, ಗೌರವಾಧ್ಯಕ್ಷ ಡಾ.ಆರ್.ಕೃಷ್ಣಮೂರ್ತಿ ಮತ್ತು ಪ್ರಧಾನ ಕಾರ್ಯದರ್ಶಿ ಎಂ.ಆನಂದ್ ತಿಳಿಸಿದ್ದಾರೆ.
ಮಾರಸಂದ್ರ ಪಿ.ಕೆ.ಬಿ. ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕರ್ನಾಟಕ ರಾಜ್ಯ ಅನುದಾನಿತ ಕಾಲೇಜುಗಳ ನೌಕರರ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗಳ ನಿಯಂತ್ರಣ ಮತ್ತು ಜವಾಬ್ದಾರಿಯನ್ನು ಜಿಲ್ಲಾ ಪಂಚಾಯತ್‌ಗಳಿಗೆ ವರ್ಗಾಯಿಸುವ ಸರ್ಕಾರದ ಪ್ರಸ್ತಾವನೆಯನ್ನು ವಿರೋಧಿಸಿ ರಾಜ್ಯದ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಹೋರಾಟಕ್ಕೆ ಮುಂದಾಗಿದ್ದಾರೆ. ಹೋರಾಟವನ್ನು ತೀವ್ರಗೊಳಿಸಲು ಮಾರ್ಚ್ 20 ರಿಂದ ಪ್ರಾರಂಭವಾಗುವ ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನವನ್ನು ಬಹಿಷ್ಕಾರ ಮಾಡಲಾಗುತ್ತಿದೆ .
ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಪ್ರಸ್ತುತ ಇರುವ ವಿದ್ಯಾರ್ಥಿ ಉಪನ್ಯಾಸಕರ ಅನುಪಾತವನ್ನು ಕಡಿಮೆ ಮಾಡುವುದು. ಕಾರ್ಯಭಾರದ ಕೊರತೆ ಇರುವ ಅನುದಾನಿತ ಪದವಿ ಕಾಲೇಜುಗಳ ಉಪನ್ಯಾಸಕರನ್ನು ಸಮೀಪದ ಸರ್ಕಾರಿ ಕಾಲೇಜುಗಳಿಗೆ ನಿಯೋಜನೆ ಮಾಡುವುದು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ.
ಈ ಎಲ್ಲಾ ವಿಷಯಗಳಿಗೂ ಸಚಿವರು ಮತ್ತು ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ ಇನ್ನು ಆದೇಶ ಮಾತ್ರ ಮಾಡಿರುವುದಿಲ್ಲ. ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೋರಾಟಕ್ಕೆ ಬೆಂಬಲ ನೀಡುತ್ತಾ, ಮಾರ್ಚ್ 20 ರಿಂದ ನಡೆಯುವ ದ್ವಿತೀಯ ಪಿಯುಸಿ ಮೌಲ್ಯಮಾಪನವನ್ನು ಬಹಿಷ್ಕಾರ ಮಾಡುತ್ತಿರುವುದಾಗಿ ತಿಳಿಸಿದರು.

