ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ನೀವು ನಿಜವಾಗಿಯೂ ಭಾರತೀಯರಾಗಿದ್ದರೆ…” ಭಾರತ-ಚೀನಾ ಗಡಿ ವಿಚಾರದಲ್ಲಿ ನಿರಾಧಾರ ಹೇಳಿಕೆಗಳನ್ನು ಕೊಡುತ್ತಾ ದೇಶದ ಜನರನ್ನು ದಿಕ್ಕು ತಪ್ಪಿಸಲು ನಿರಂತರ ಪ್ರಯತ್ನ ಮಾಡುತ್ತಿರುವ ಭಾರತೀಯ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾನ್ಯ ಸುಪ್ರೀಂ ಕೋರ್ಟ್ ಅತ್ಯಂತ ಕಟು ಶಬ್ದಗಳಲ್ಲಿ ಛೀಮಾರಿ ಹಾಕಿರುವುದು ಸ್ವಾಗತಾರ್ಹ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹರ್ಷ ವ್ಯಕ್ತಪಡಿಸಿದ್ದಾರೆ.
ತಮ್ಮ ನೇತೃತ್ವದಲ್ಲಿ ದೇಶಾದ್ಯಂತ ಭಾರತೀಯ ಕಾಂಗ್ರೆಸ್ ಪಕ್ಷಕ್ಕೆ ಸತತವಾಗಿ ಉಂಟಾಗುತ್ತಿರುವ ಸೋಲುಗಳಿಂದ ಭ್ರಮನಿರಸನಗೊಂಡಿರುವ ರಾಹುಲ್ ಗಾಂಧಿ ಅವರ ರಾಜಕೀಯ ಹತಾಶೆ, ಖಿನ್ನತೆ ಪರಾಕಾಷ್ಠೆಗೆ ತಲುಪಿದ್ದು, ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ಮೇಲಿನ ಸಿಟ್ಟು, ದ್ವೇಷ ಅವರಲ್ಲಿ ಒಂದು ರೀತಿ ದೇಶವಿರೋಧಿ ಮಾನಸಿಕತೆ ಹುಟ್ಟುಹಾಕಿದೆ ಎಂದು ಅನ್ನಿಸತೊಡಗಿದೆ. ಇದನ್ನೇ ಮಾನ್ಯ ಸುಪ್ರೀಂ ಕೋರ್ಟ್ ಕೂಡ ಸೂಕ್ಷ್ಮವಾಗಿ ಹೇಳಿದೆ ಎಂದು ಅಶೋಕ್ ತಿಳಿಸಿದರು.
ನಮ್ಮ ದೇಶದ ಸಾರ್ವಭೌಮತೆ, ಸ್ವಾಭಿಮಾನ, ವರ್ಚಸ್ಸು, ಪ್ರತಿಷ್ಠೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಪದೇ ಪದೇ ನೀಡುತ್ತಲೇ ಬಂದಿರುವ ರಾಹುಲ್ ಗಾಂಧಿ ಅವರು ಇನ್ನು ಮೇಲಾದರೂ ಒಬ್ಬ ಜವಾಬ್ದಾರಿಯುತ ಪ್ರತಿಪಕ್ಷ ನಾಯಕನಾಗಿ ವರ್ತಿಸಲಿ ಎನ್ನುವುದೇ ಭಾರತೀಯರ ಆಗ್ರಹವಾಗಿದೆ ಎಂದು ಅಶೋಕ್ ಹೇಳಿದರು.

