ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಭಾರತೀಯ ಸೇನೆಯಲ್ಲಿ 2:1 ಮೀಸಲಾತಿ ಅನುಪಾತದಲ್ಲಿ ಪುರುಷರಿಗೆ ಹುದ್ದೆಗಳನ್ನು ಮೀಸಲಿಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿ, ಏಕಪಕ್ಷೀಯ 2:1 ಮೀಸಲಾತಿ ರದ್ದುಪಡಿಸಿ ಆದೇಶಿಸಿದೆ.
ಸೇನೆಯಲ್ಲಿನ ಜಡ್ಜ್ ಅಡ್ವೊಕೇಟ್ ಜನರಲ್ (ಕಾನೂನು) ಹುದ್ದೆಗಳಿಗೆ ನಡೆದ ಪರೀಕ್ಷೆಗಳಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳು ಕ್ರಮವಾಗಿ 4 ಮತ್ತು 5 ನೇ ರ‍್ಯಾಂಕ್ ಗಳಿಸಿದ್ದರು. ಆದರೂ ಅವರನ್ನು ಕರ್ತವ್ಯಕ್ಕೆ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಅವರು ನ್ಯಾಯ ಬೇಡಿಕೆಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಮನಮೋಹನ್ ಅವರಿದ್ದ ಪೀಠವು, ಮಹಿಳೆಯರ ಮೇಲೆ ನಿರ್ಬಂಧಗಳನ್ನು ಹೇರುವ ಮೂಲಕ ಖಾಲಿ ಹುದ್ದೆಗಳನ್ನು ಪುರುಷರಿಗೆ ಮೀಸಲಿಡಲಾಗದು ಎಂದು ಅಭಿಪ್ರಾಯಪಟ್ಟಿತು.
ಭಾರತೀಯ ಸೇನೆಯಲ್ಲಿ ನ್ಯಾಯಾಧೀಶ ಅಡ್ವೊಕೇಟ್ ಜನರಲ್ ಶಾಖೆಯ ಹುದ್ದೆಗಳಲ್ಲಿ ನೇಮಕಾತಿಗಳಿಗೆ ಅನುಸರಿಸಲಾದ 2:1 ಮೀಸಲಾತಿ ಅನುಪಾತ ನೀತಿ ತಪ್ಪಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಮಾನಿಸಿ ಅದನ್ನು ಜಾರಿಗೆ ತರಬಾರದು ಎಂದಿರುವ ಸುಪ್ರೀಂ ಕೋರ್ಟ್, ಮಹಿಳೆಯರ ಮೇಲೆ ನಿರ್ಬಂಧಗಳನ್ನು ಹೇರುವ ಮೂಲಕ ಖಾಲಿ ಹುದ್ದೆಗಳನ್ನು ಪುರುಷರಿಗೆ ಮೀಸಲಿಡಲಾಗದು ಎಂದಿದೆ.
ಪುರುಷರಿಗೆ 6 ಹುದ್ದೆ ಮತ್ತು ಮಹಿಳೆಯರಿಗೆ 3 ಹುದ್ದೆ ಅನುಪಾತವನ್ನು ಅನಿಯಂತ್ರಿತ ನಿರ್ಧಾರ ಎಂದಿರುವ ಸುಪ್ರೀಂ ಕೋರ್ಟ್ ಪೀಠವು, ಉನ್ನತ ಶ್ರೇಣಿಯ ಸೇನಾ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು. ಲಿಂಗ ಸಮಾನತೆಯ ನಿಜವಾದ ಅರ್ಥವೆಂದರೆ ಪುರುಷರು ಮತ್ತು ಮಹಿಳೆಯರ ನಡುವೆ ಯಾವುದೇ ತಾರತಮ್ಯವಿಲ್ಲದೆ ಪ್ರತಿಭಾನ್ವಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು.
ಆದರೆ ಈ ರೀತಿಯಾಗಿ ಮಹಿಳೆಯರಿಗೆ ಸ್ಥಾನಗಳನ್ನು ನಿರ್ಬಂಧಿಸುವುದು ಸಮಾನತೆಯ ಹಕ್ಕನ್ನು ಉಲ್ಲಂಘಿಸಿದಂತಾಗಲಿದೆ. ಮಹಿಳೆಯರನ್ನು ನಿರ್ಬಂಧಿಸುವುದು ಮತ್ತು ಖಾಲಿ ಹುದ್ದೆಗಳನ್ನು ಪುರುಷರಿಗೆ ಮೀಸಲಿಡುವುದು ಸರಿಯಲ್ಲ. ಇಂತಹ ನೀತಿಗಳನ್ನು ಅನುಸರಿಸಿದರೆ ಯಾವುದೇ ದೇಶವೂ ಸುರಕ್ಷಿತವಾಗಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಇನ್ಮು ಮುಂದೆ ಸಮಾನ ರೀತಿಯಲ್ಲಿ ನೇಮಕಾತಿಗಳನ್ನು ಮಾಡುವಂತೆ ಕೇಂದ್ರಕ್ಕೆ ಆದೇಶಿಸಿರುವ ಸುಪ್ರೀಂ ಕೋರ್ಟ್, ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳ ಮೆರಿಟ್ ಪಟ್ಟಿ ಬಹಿರಂಗಪಡಿಸಬೇಕು ಎಂದು ಸೂಚಿಸಿತು.
ಪುರುಷ ಅಭ್ಯರ್ಥಿಗಳಿಗಿಂತ ಹೆಚ್ಚಿನ ಅರ್ಹತೆ ಹೊಂದಿದ್ದರೂ ಮಹಿಳಾ ಕೋಟಾದಲ್ಲಿ ಯಾವುದೇ ಖಾಲಿ ಹುದ್ದೆಗಳಿಲ್ಲದ ಕಾರಣ ತಮ್ಮನ್ನು ಆಯ್ಕೆ ಮಾಡಲಾಗಿಲ್ಲ ಎಂದು ನ್ಯಾಯಾಧೀಶ ಅಡ್ವೊಕೇಟ್ ಜನರಲ್ (ಕಾನೂನು) ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಗಳಿಸಿದ್ದ ಅಗ್ನರ್ ಕೌರ್ ಮತ್ತು ಅಸ್ತಾ ತ್ಯಾಗಿ ಎಂಬ ಇಬ್ಬರು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿ, ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಈ ಹಿಂದೆ ಅವರ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಸೇನೆಯಲ್ಲಿ ನ್ಯಾಯಾಧೀಶ ಅಡ್ವೊಕೇಟ್ ಜನರಲ್ (ಕಾನೂನು) ಶಾಖೆಯ ಹುದ್ದೆಗಳಲ್ಲಿ ಕಡಿಮೆ ಸಂಖ್ಯೆಯ ಮಹಿಳಾ ಅಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್ ಜೊತೆಗೆ ತೀರ್ಪು ಕಾಯ್ದಿರಿಸಿತ್ತು.

