ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪೋಕ್ಸೋ ಕೇಸ್ ವಿಚಾರದಲ್ಲಿ ಸುಪ್ರೀಂಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೈಸಿಂಗ್ ಜೊಯ್‌ಮಾಲ್ಯ ಅವರನ್ನೊಳಗೊಂಡ ಪೀಠ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನೀಡಿದೆ. ಸಿಐಡಿ ಮತ್ತು ಸಂತ್ರಸ್ತ ಬಾಲಕಿಗೆ ನೋಟಿಸ್ ಜಾರಿ ಮಾಡಿದೆ.
ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣ ರದ್ದುಪಡಿಸಲು ನವೆಂಬರ್ 13ರಂದು ಕರ್ನಾಟಕ ಹೈಕೋರ್ಟ್ ನಿರಾಕಾರಿಸಿತ್ತು. ಇದರ ಬೆನ್ನಲ್ಲೇ ಬಿಎಸ್ ಯಡಿಯೂರಪ್ಪ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಹಿರಿಯ ವಕೀಲ ಸಿಧಾರ್ಥ ಲೂಥ್ರಾ ಅವರು ಮತ್ತು ಸಿಧಾರ್ಥ ದಾವೆ ಅವರು ಯಡಿಯೂರಪ್ಪ ಪರ ವಾದಿಸಿ, ಹೈಕೋರ್ಟ್ನ ಫೆ.7, 2025ರ ತೀರ್ಪನ್ನು ತಪ್ಪಾಗಿ ಅರ್ಥೈಸಲಾಗಿದೆ. ಹಿಂದಿನ ಸುತ್ತಿನ ತೀರ್ಪಿನ ಕಾರಣ ನೀಡಿ ಹೈಕೋರ್ಟ್ ಪರಿಗಣಿಸಿಲ್ಲ. ಯಡಿಯೂರಪ್ಪ ಅವರ ಅರ್ಜಿಯನ್ನು ಅರ್ಹತೆ ಆಧಾರದಲ್ಲಿ ಪರಿಗಣಿಸಿಲ್ಲ.
ಅವರು 88 ವರ್ಷದ ಹಿರಿಯ ವ್ಯಕ್ತಿ, ನಾಲ್ಕು ಬಾರಿ ಮುಖ್ಯಮಂತ್ರಿ. ರಾಜಕೀಯ ದ್ವೇಷದಿಂದ ನರಳುತ್ತಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಈ ವೇಳೆ, ಹೈಕೋರ್ಟ್ನಲ್ಲಿ ಹೊಸದಾಗಿ ತೀರ್ಮಾನಿಸಲು ಏಕೆ ಸೂಚಿಸಬಾರದು ಎಂದು ಪೀಠ ಪ್ರತಿವಾದಿಗಳನ್ನು ಪ್ರಶ್ನಿಸಿದೆ.

