ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಮಾಜಿ ಐಎಎಸ್ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ಸುಪ್ರೀಂ ಕೋರ್ಟ್‌ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪೂಜಾ ಖೇಡ್ಕರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಮತ್ತು ಸತೀಶ ಚಂದ್ರ ಅವರಿದ್ದ ಪೀಠ, ತನಿಖೆಗೆ ಸಹಕರಿಸುವಂತೆ ಪೂಜಾ ಖೇಡ್ಕರ್‌ಗೆ ಸೂಚಿಸಿದೆ.
ಮಾಜಿ ಐಎಎಸ್ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಅವರು ನಕಲಿ ಪ್ರಮಾಣಪತ್ರ ಬಳಸಿ ನಾಗರಿಕ ಸೇವಾ ಪರೀಕ್ಷೆಯ ಲಾಭ ಪಡೆದುಕೊಂಡ ಆರೋಪ ಎದುರಿಸುತ್ತಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ವೇಳೆ, ಆಕೆ ಮಾಡಿದ ಘೋರ ಅಪರಾಧವೇನು? ಅವರು ಡ್ರಗ್ಸ್ ಮಾರಾಟಗಾರ್ತಿಯೇ? ಅಥವಾ ಭಯೋತ್ಪಾದಕಿಯೇ? ಆಕೆ ಏನಾದರೂ ಕೊಲೆ ಮಾಡಿದ್ದಾಳೆಯೇ? ಎನ್‌ಡಿಪಿಎಸ್‌ಕಾಯ್ದೆಯಡಿ ಅವರ ಬಂಧನವಾಗಿಲ್ಲ, ನೀವು ತನಿಖೆ ಪೂರ್ಣಗೊಳಿಸಿ. ಎಲ್ಲವನ್ನು ಕಳೆದುಕೊಂಡಿರುವ ಆಕೆಗೆ ಎಲ್ಲಿಯೂ ಕೆಲಸ ಸಿಗುತ್ತಿಲ್ಲ ಎಂದು ಪೀಠವು ಹೇಳಿದೆ.
ದೆಹಲಿ ಹೈಕೋರ್ಟ್ ಪ್ರಕರಣದ ಸತ್ಯಗಳು ಮತ್ತು ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಅರ್ಜಿದಾರರಿಗೆ ಜಾಮೀನು ನೀಡಬೇಕಾಗಿದ್ದ ಸೂಕ್ತವಾದ ಪ್ರಕರಣ ಇದು ಎಂದು ಪೀಠ ಗಮನಿಸಿದೆ.
ಸುಪ್ರೀಂ ಕೋರ್ಟ್ ವಾದ-ವಿವಾದ ಆಲಿಸಿ ಪೂಜಾ ಖೇಡ್ಕರ್‌ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದಕ್ಕೆ ದೆಹಲಿ ಪೊಲೀಸರು ಮತ್ತು ಯುಪಿಎಸ್‌ಸಿ ವಿರೋಧ ವ್ಯಕ್ತಪಡಿಸಿವೆ. ಆಕೆ ಆಯೋಗ ಮತ್ತು ಜನರನ್ನು ವಂಚಿಸಿದ್ದಾಳೆ. ಆಕೆ ತನಿಖೆಯಲ್ಲಿ ಸಹಕರಿಸುತ್ತಿಲ್ಲ ಮತ್ತು ಅವರ ವಿರುದ್ಧದ ಆರೋಪಗಳು ಗಂಭೀರವಾಗಿವೆ ಎಂದು ಸುಪ್ರೀಂ ಕೋರ್ಟ್ ಗೆ ತಕರಾರು ಸಲ್ಲಿಸಿವೆ.
ಪ್ರಕರಣ ಏನು?
ಐಎಎಸ್ ಪ್ರೊಬೇಷನರಿ ಅಧಿಕಾರಿಯಾಗಿದ್ದ ಪೂಜಾ 2023ರ ಬ್ಯಾಚ್ ನಲ್ಲಿ ಐಎಎಸ್ ಪಾಸ್ ಮಾಡಿದ್ದರು. ಈ ವೇಳೆ ಐಎಎಸ್ ಸೇವೆಗಾಗಿ ನಡೆಯುವ ಆಯ್ಕೆಗಾಗಿ ಒಬಿಸಿ ಕೋಟಾ ಮತ್ತು ಅಂಗವಿಕಲರ ಕೋಟಾವನ್ನು ದುರುಪಯೋಗಪಡಿಸಿಕೊಂಡು ಸೌಲಭ್ಯಗಳನ್ನು ಪಡೆದಿದ್ದರು ಎಂದು ಆರೋಪಿಸಲಾಗಿದೆ. ಜುಲೈನಲ್ಲಿ ಆಕೆಯ ವಿರುದ್ದ ದೆಹಲಿ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ಕೇಂದ್ರ ಲೋಕಸೇವಾ ಆಯೋಗವು(ಯುಪಿಎಸ್‌ಸಿ) ಜುಲೈ 31ರಂದು ಆಕೆಯ ನೇಮಕಾತಿ ಆದೇಶ ರದ್ದುಗೊಳಿಸಿತ್ತು. ಜೊತೆಗೆ ಭವಿಷ್ಯದ ಎಲ್ಲ ಪರೀಕ್ಷೆಗಳು ಮತ್ತು ಆಯ್ಕೆಗಳಿಂದ ಡಿಬಾರ್ ಮಾಡಿ ಆದೇಶ ಮಾಡಲಾಗಿತ್ತು.
ಆದರೆ ಪೂಜಾ ಖೇಡ್ಕರ್ ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆಯಾದರೂ, ದೆಹಲಿ ಪೊಲೀಸರು ಅವರ ವಿರುದ್ಧ ವಿವಿಧ ಅಪರಾಧಗಳಿಗಾಗಿ ಎಫ್‌ಐಆರ್ ದಾಖಲಿಸಿದ್ದಾರೆ.